VAO Recruitment 2026: ಮತ್ತೆ ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ, ಜಿಟಿಟಿಸಿ ಡಿಪ್ಲೊಮಾ ಅಭ್ಯರ್ಥಿಗಳಿಗೂ ಅವಕಾಶ
ಬೆಂಗಳೂರು: ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಡಿ ಬರುವ ಪ್ರತಿಷ್ಠಿತ ಹುದ್ದೆಗಳಲ್ಲಿ ಒಂದಾದ ಗ್ರಾಮ ಆಡಳಿತ ಅಧಿಕಾರಿಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ಸುದ್ದಿಯೊಂದನ್ನಾ ಹಂಚಿಕೊಂಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ನೇಮಕಾತಿ ಪ್ರಕ್ರಿಯೆಯನ್ನ ನಡೆಸುತ್ತಿದ್ದು, ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು 2026ರ ಆಗಸ್ಟ್ 20ರವರೆಗೆ ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಿದೆ.
ಈ ಕುರಿತು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ಐಎಎಸ್ ಅವರು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

ದಿನಾಂಕ ವಿಸ್ತರಣೆಗೆ ಕಾರಣವೇನು?
ಜುಲೈ 10ರಂದು ಕಂದಾಯ ಇಲಾಖೆಯ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಗ್ರೂಪ್-ಸಿ ವೃಂದದ ಉಳಿಕೆ ಮೂಲ ವೃಂದದ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಕೆಇಎ ಅಧಿಸೂಚನೆ ಹೊರಡಿಸಿತ್ತು. ಆರಂಭದಲ್ಲಿ ಜುಲೈ 30ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ತದನಂತರ ಅಭ್ಯರ್ಥಿಗಳ ತೀವ್ರ ಒತ್ತಾಯದ ಮೇರೆಗೆ ದಿನಾಂಕವನ್ನು ವಿಸ್ತರಿಸಲಾಗಿತ್ತು. ಇದೀಗ ಹೊಸದಾಗಿ, ತಾಂತ್ರಿಕ ವಿದ್ಯಾರ್ಥಿಗಳನ್ನ ಕೂಡ ಈ ಸ್ಪರ್ಧಾತ್ಮಕ ಪರೀಕ್ಷೆಯ ವ್ಯಾಪ್ತಿಗೆ ತರುವ ಉದ್ದೇಶದಿಂದ ಕಂದಾಯ ಇಲಾಖೆಯ ಸೂಚನೆಯಂತೆ ಅರ್ಜಿ ಸಲ್ಲಿಕೆಗೆ ಮತ್ತೊಮ್ಮೆ ಕಾಲಾವಕಾಶ ನೀಡಲಾಗಿದೆ.
ಜಿಟಿಟಿಸಿ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಸಿಕ್ಕ ಹೊಸ ಅವಕಾಶ
ಸರ್ಕಾರದ ಮಹತ್ವದ ಆದೇಶದ ಪ್ರಕಾರ, ಜಿಟಿಟಿಸಿ (Government Tool Room and Training Centre - GTTC) ನಡೆಸುತ್ತಿರುವ 3+1 ವರ್ಷದ (ಒಂದು ವರ್ಷದ ಇಂಟರ್ನ್‌ಶಿಪ್ ಸೇರಿ) ಡಿಪ್ಲೊಮಾ ಕೋರ್ಸ್ ಅನ್ನ ತಾಂತ್ರಿಕ ಶಿಕ್ಷಣ ಇಲಾಖೆಯ ಮೂರು ವರ್ಷಗಳ ಸಾಮಾನ್ಯ ಡಿಪ್ಲೊಮಾ ಕೋರ್ಸ್‌ಗೆ ಸಮಾನ ಎಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಜಿಟಿಟಿಸಿ ಡಿಪ್ಲೊಮಾ ಪಡೆದಿರುವ ಸಾವಿರಾರು ತಾಂತ್ರಿಕ ಅರ್ಹ ಅಭ್ಯರ್ಥಿಗಳಿಗೂ ಸಹ ಈ ನೇರ ನೇಮಕಾತಿಯಲ್ಲಿ ಭಾಗವಹಿಸಲು ಹಾಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ಪ್ರಾಮುಖ್ಯತೆ
ಗ್ರಾಮ ಮಟ್ಟದಲ್ಲಿ ಸರ್ಕಾರದ ಯೋಜನೆಗಳನ್ನ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಹಾಗೂ ಕಂದಾಯ ಇಲಾಖೆಯ ದೈನಂದಿನ ಆಡಳಿತಾತ್ಮಕ ಕೆಲಸಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ. ಇದು ಗ್ರೂಪ್-ಸಿ ವೃಂದದ ಹುದ್ದೆಯಾಗಿದ್ದು, ಉತ್ತಮ ವೇತನ ಶ್ರೇಣಿ ಹಾಗೂ ಉದ್ಯೋಗ ಭದ್ರತೆಯನ್ನ ಹೊಂದಿದೆ. ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿ ನಡೆಯುವುದರಿಂದ, ಲಕ್ಷಾಂತರ ಅಭ್ಯರ್ಥಿಗಳು ಈ ಹುದ್ದೆಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಇದೀಗ ಜಿಟಿಟಿಸಿ ಅಭ್ಯರ್ಥಿಗಳ ಸೇರ್ಪಡೆಯಿಂದಾಗಿ ಪೈಪೋಟಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಅರ್ಜಿ ಸಲ್ಲಿಕೆ ದಿನಾಂಕ
ಹೊಸ ಆದೇಶದ ಪ್ರಕಾರ, ಎಲ್ಲಾ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಆಗಸ್ಟ್ 20ರವರೆಗೆ ವಿಸ್ತರಿಸಲಾಗಿದೆ. ಅದೇ ರೀತಿ, ಆನ್‌ಲೈನ್ ಮೂಲಕ ನಿಗದಿತ ಪರೀಕ್ಷಾ ಶುಲ್ಕವನ್ನು ಪಾವತಿಸಲು ಆಗಸ್ಟ್ 21, 2026 ಕೊನೆಯ ದಿನವಾಗಿದೆ.
#VAORecruitment: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಜಿಟಿಟಿಸಿ ಡಿಪ್ಲೊಮಾ ಮಾಡಿರುವ ಅಭ್ಯರ್ಥಿಗಳಿಗೂ ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿರುವ ಕಾರಣ ಅರ್ಜಿ ಸಲ್ಲಿಸುವ ಕೊನೆ ದಿನಾಂಕವನ್ನು ಆ.20ರವರೆಗೆ, ಶುಲ್ಕ ಪಾವತಿಸಲು ಆ.21ರವರೆಗೆ ದಿನಾಂಕ ವಿಸ್ತರಿಸಲಾಗಿದೆ.
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) August 19, 2026
ಅರ್ಹ ಅಭ್ಯರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಲು… pic.twitter.com/oVUBhWtr3D
ಜುಲೈ 10ರ ಮೂಲ ಅಧಿಸೂಚನೆ ಹಾಗೂ ಆಗಸ್ಟ್ 06ರ ಪ್ರಕಟಣೆಯಲ್ಲಿ ತಿಳಿಸಲಾದ ವಯೋಮಿತಿ, ಪರೀಕ್ಷಾ ವಿಧಾನ ಹಾಗೂ ಇತರ ಯಾವುದೇ ನಿಯಮಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ ಎಂದು ಕೆಇಎ ಸ್ಪಷ್ಟಪಡಿಸಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ, ತಕ್ಷಣವೇ ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಕೆಇಎ ಮೂರನೇ ಬಾರಿ ನೀಡಿರುವ ಈ ಅವಕಾಶವನ್ನಾ ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಾಧಿಕಾರ ಮನವಿ ಮಾಡಿದೆ.


Click it and Unblock the Notifications
