KEA Updates: ಕರ್ನಾಟಕದಲ್ಲಿ 945 ಕೃಷಿ ಅಧಿಕಾರಿಗಳ ನೇಮಕಾತಿ ಪರೀಕ್ಷೆ ರದ್ದು, VAO ಹುದ್ದೆ ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ
ಬೆಂಗಳೂರು: ಸರ್ಕಾರಿ ಹುದ್ದೆಯ ಆಕಾಂಕ್ಷಿಗಳಿಗೆ ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಎರಡು ಪ್ರಮುಖ ಪ್ರಕಟಣೆ ಹೊರಡಿಸಿದೆ. ಕೃಷಿ ಇಲಾಖೆಯಲ್ಲಿನ ಕೃಷಿ ಅಧಿಕಾರಿ (AO) ಮತ್ತು ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳ ಭರ್ತಿಗೆ ಇದೇ ಆಗಸ್ಟ್ 8 ಮತ್ತು 9ರಂದು ನಡೆಯಬೇಕಿದ್ದ ಲಿಖಿತ ಪರೀಕ್ಷೆಯನ್ನು ದಿಢೀರ್ ರದ್ದು ಮಾಡಲಾಗಿದೆ.
ಇದರ ಜೊತೆಗೆ, ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಂತಿಮ ಗಡುವನ್ನು ಸಾರ್ವಜನಿಕರ ಮನವಿಯ ಮೇರೆಗೆ ಆಗಸ್ಟ್ 20ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಕುರಿತು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಐಎಎಸ್ ಹೆಚ್. ಪ್ರಸನ್ನ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಕೃಷಿ ಅಧಿಕಾರಿ ಹುದ್ದೆಗಳ ಪರೀಕ್ಷೆ ರದ್ದು
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 945 ಹುದ್ದೆಗಳನ್ನ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕಳೆದ ಮೇ 30ರಂದು ಪರಿಷ್ಕೃತ ಅಧಿಸೂಚನೆಯೊಂದನ್ನಾ ಹೊರಡಿಸಿತ್ತು. ಈ ನೇಮಕಾತಿಯಲ್ಲಿ 128 ಕೃಷಿ ಅಧಿಕಾರಿ ಹುದ್ದೆಗಳು ಹಾಗೂ 817 ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು ಒಳಗೊಂಡಿತ್ತು. ಈ ಹುದ್ದೆಗಳ ಆಯ್ಕೆಗಾಗಿ ಆಗಸ್ಟ್ 8 ಮತ್ತು 9ರಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯನ್ನ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಆದರೆ, ಕೃಷಿ ಪದವೀಧರರ ಪ್ರತಿಭಟನೆ ಹಾಗೂ ಸರ್ಕಾರದ ನೇರ ನಿರ್ದೇಶನದ ಹಿನ್ನೆಲೆಯಲ್ಲಿ, ಪ್ರಸ್ತುತ ಹೊರಡಿಸಲಾಗಿದ್ದ ನೇಮಕಾತಿ ಅಧಿಸೂಚನೆಗಳನ್ನು ಕೂಡಲೇ ಹಿಂಪಡೆಯುವಂತೆ ಸರ್ಕಾರ ಸೂಚಿಸಿದೆ. ಸರ್ಕಾರದ ಈ ಆದೇಶದ ಹಿನ್ನೆಲೆಯಲ್ಲಿ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು ಅಧಿಸೂಚನೆಗಳನ್ನು ಹಿಂಪಡೆದಿದ್ದು, ಆಗಸ್ಟ್ 8 ಮತ್ತು 9ರಂದು ನಿಗದಿಯಾಗಿದ್ದ ಲಿಖಿತ ಪರೀಕ್ಷೆಯನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ.
ತಜ್ಞರ ಸಮಿತಿಯ ವರದಿ ಬಂದ ಬಳಿಕ ಮುಂದಿನ ಪರೀಕ್ಷಾ ದಿನಾಂಕ ಹಾಗೂ ಪರಿಷ್ಕೃತ ನಿಯಮಗಳ ಬಗ್ಗೆ ಪ್ರಾಧಿಕಾರವು ಹೊಸದಾಗಿ ಮಾಹಿತಿ ನೀಡಲಿದೆ.
#KEA Recruitment:
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) August 6, 2026
ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಭರ್ತಿಗೆ ಇದೇ 8 ಮತ್ತು 9ರಂದು ನಡೆಸಲು ಉದ್ದೇಶಿಸಿದ್ದ ಲಿಖಿತ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ.
- ಹೆಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ@CMofKarnataka @S_PrakashPatil . pic.twitter.com/aa0m5Y9YtB
ಗ್ರಾಮ ಆಡಳಿತ ಅಧಿಕಾರಿ ಅರ್ಜಿ ಸಲ್ಲಿಕೆ ವಿಸ್ತರಣೆ
ಕೃಷಿ ಪರೀಕ್ಷೆ ರದ್ದತಿಯ ನಡುವೆಯೇ, ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಆಕಾಂಕ್ಷಿಗಳಿಗೆ ಕೆಇಎ ಸಿಹಿಸುದ್ದಿ ನೀಡಿದೆ. ಈ ಹಿಂದೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಗಸ್ಟ್ 7 ರಂದು ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಆದರೆ, ತಾಂತ್ರಿಕದೋಷಗಳು ಹಾಗೂ ಗ್ರಾಮೀಣ ಭಾಗದ ಅಭ್ಯರ್ಥಿಗಳ ಮನವಿಯನ್ನ ಪರಿಗಣಿಸಿ, ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕವನ್ನು ಆಗಸ್ಟ್ 20ರವರೆಗೆ ವಿಸ್ತರಿಸಲಾಗಿದೆ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಿಗದಿತ ಪರೀಕ್ಷಾ ಶುಲ್ಕವನ್ನ ಪಾವತಿಸಲು ಆಗಸ್ಟ್ 21 ಕೊನೆಯ ದಿನವಾಗಿರುತ್ತದೆ. ಈ ವಿಸ್ತರಣೆಯು ಸಾಮಾನ್ಯ ವೃಂದ (RPC) ಮತ್ತು ಕಲ್ಯಾಣ ಕರ್ನಾಟಕ (KK - ವಿಧಿ 371J) ವೃಂದದ ಎರಡೂ ಭಾಗಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೂ ಅನ್ವಯವಾಗುತ್ತದೆ.
ಇದುವರೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅರ್ಹ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್ ಮೂಲಕ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.
#KEARecruitment: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆ ದಿನಾಂಕವನ್ನು ಆಗಸ್ಟ್ 20ರವರೆಗೆ #KEA ವಿಸ್ತರಿಸಿದೆ.
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) August 6, 2026
ಶುಲ್ಕ ಪಾವತಿಸಲು ಆಗಸ್ಟ್ 21 ಕೊನೆ ದಿನ.
ಸಾರ್ವಜನಿಕರ ಕೋರಿಕೆ ಮೇರೆಗೆ ಆ.7ಕ್ಕೆ ಇದ್ದ ಕೊನೆ ದಿನಾಂಕ ವಿಸ್ತರಿಸಲಾಗಿದೆ.
ಕಲ್ಯಾಣ ಕರ್ನಾಟಕ ವೃಂದಕ್ಕೆ ಅರ್ಜಿ ಸಲ್ಲಿಸುವವರಿಗೂ ಅನ್ವಯವಾಗುತ್ತದೆ.… pic.twitter.com/mR1Uq9sHur
ಅಭ್ಯರ್ಥಿಗಳಿಗೆ ಕೆಇಎ ಸೂಚನೆಗಳು
1. ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಪರೀಕ್ಷಾ ಸಿದ್ಧತೆಯಲ್ಲಿದ್ದ ಅಭ್ಯರ್ಥಿಗಳು ಪರೀಕ್ಷಾ ರದ್ದತಿ ಆದೇಶವನ್ನು ಗಮನಿಸಬೇಕು. ಹಾಗೆಯೇ ಪರೀಕ್ಷಾ ಕೇಂದ್ರಗಳಿಗೆ ಹೋಗಬಾರದು.
2. ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಕೊನೆಯ ಗಳಿಗೆಯ ಸರ್ವರ್ ಸಮಸ್ಯೆ ತಪ್ಪಿಸಲು ಆಗಸ್ಟ್ 20ರ ಮುಂಚೆನೆ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿ.
3. ನೇಮಕಾತಿಗೆ ಸಂಬಂಧಿಸಿದ ಯಾವುದೇ ವದಂತಿಗಳಿಗೆ ಕಿವಿಗೊಡದೆ, ನಿಖರ ಮಾಹಿತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣವನ್ನು ಮಾತ್ರ ಗಮನಿಸಿ.


Click it and Unblock the Notifications
