ಬೆಳಗಾವಿ ಹಾಗೂ ಕಲ್ಬುರ್ಗಿಯಲ್ಲಿ ಕೆಎಟಿ ಘಟಕ : ಸಿದ್ದರಾಮಯ್ಯ
ಬೆಳಗಾವಿ ಜು. 8 : ಬೆಳಗಾವಿಯಲ್ಲಿ ಕರ್ನಾಟಕ ಆಡಳಿತಾತ್ಮಕ ಟ್ರಿಬ್ಯೂನಲ್ ಆರಂಭಿಸಲು ಈಗಾಗಲೇ ಸಂಪುಟ ಅನುಮೋದನೆ ನೀಡಿದ್ದು, ಗುಲ್ಬರ್ಗಾದಲ್ಲಿಯೂ ಕೆಎಟಿ ಘಟಕ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಹೆಸ್ಕಾಂ ವತಿಯಿಂದ ಬುಧವಾರ ಬೆಳಗಾವಿ ನಗರ ವ್ಯಾಪ್ತಿಯಲ್ಲಿ 11 ಕೆವಿ ಭೂಗತ ವಿದ್ಯುತ್ ಕೇಬಲ್ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಧಾರವಾಡ ಹೈಕೋರ್ಟ್ ಪೀಠದ ವ್ಯಾಪ್ತಿಯ ಬೆಳಗಾವಿಯಲ್ಲಿ ಕೆಎಟಿ ಘಟಕ ಆದಷ್ಟು ಬೇಗನೇ ಕಾರ್ಯಾರಂಭ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೇ ರೀತಿ ಕಲ್ಬುರ್ಗಿ ಹೈಕೋರ್ಟ್ ಪೀಠದ ವ್ಯಾಪ್ತಿಯಲ್ಲಿಯೂ ಕೆಎಟಿ ಘಟಕ ಆರಂಭಿಸಲು ಜನರ ಒತ್ತಾಯವಿದ್ದು, ಸರ್ಕಾರ ಅಲ್ಲಿಯೂ ಕೆಎಟಿ ಘಟಕ ಆರಂಭಿಸಲಿದೆ ಎಂದರು.
ಕರ್ನಾಟಕದ ಮುಕುಟ ಪ್ರಾಯವಾದ ಬೆಳಗಾವಿ ನಗರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಸಂಕಲ್ಪ ಮಾಡಿದೆ. ಅರೆ ಮಲೆನಾಡು ಪ್ರದೇಶವಾದ ಬೆಳಗಾವಿ ಹವಾಮಾನದ ದೃಷ್ಟಿಯಿಂದ ಜನರ ವಾಸಕ್ಕೆ ಬೆಂಗಳೂರಿಗಿಂತ ಯೋಗ್ಯವಾದ ನಗರವಾಗಿದೆ. ಈ ನಗರಕ್ಕೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಈ ಭಾಗದ ಜನರು ಗುಣಮಟ್ಟದ ಜೀವನ ನಡೆಸಲು ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.

316 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿ ನಗರದಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಸುವ ಕಾಮಗಾರಿಯನ್ನು 19 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಈ ಕಾಮಗಾರಿಯಿಂದ ವಿದ್ಯುತ್ ಪೂರೈಕೆ ಗುಣಮಟ್ಟದ ಜತೆಗೆ ಬೆಳಗಾವಿ ನಗರದ ಸೌಂದರ್ಯ, ಹಸರೀಕರಣಕ್ಕೆ ಅನುಕೂಲವಾಗಲಿದೆ. ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮಾತ್ರ ಭೂಗತ ವಿದ್ಯುತ್ ಕೇಬಲ್ ವ್ಯವಸ್ಥೆ ಇದ್ದು, ಇದನ್ನು ರಾಜ್ಯದ ಹಲವು ನಗರಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದರು.
ಬೆಳಗಾವಿ ನಗರದಲ್ಲಿ 400 ಕೋಟಿ ರೂ. ವೆಚ್ಚದಲ್ಲಿ 24x7 ಕುಡಿಯುವ ನೀರಿನ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಗಂಭೀರ ಪ್ರಯತ್ನ ಮಾಡಲಾಗುವುದು. ನಗರದ ಅಭಿವೃದ್ಧಿಗೆ ಈ ವರ್ಷದ ಬಜೆಟ್‌ನಲ್ಲಿ 100 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ಒದಗಿಸಲಾಗಿದೆ. ವಿಶೇಷ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾದ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಸಣ್ಣ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, 45 ಕೋಟಿ ರೂ. ವೆಚ್ಚದಲ್ಲಿ ಗೋವಾ ರಸ್ತೆ ಅಗಲೀಕರಣ, ಮೈಸೂರು ಮೃಗಾಲಯದ ಮಾದರಿಯಲ್ಲಿ ಬೆಳಗಾವಿಯ ಭೂತರಾಮನಟ್ಟಿಯಲ್ಲಿ ಮೃಗಾಲಯ ಸ್ಥಾಪನೆ, ಹೊರ ಕೈಗಾರಿಕಾ ಪ್ರದೇಶ ಸ್ಥಾಪನೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಸಕ್ಕರೆ ಮತ್ತು ಸಹಕಾರ ಸಚಿವ ಮಹದೇವಪ್ರಸಾದ್, ಶಾಸಕರಾದ ಫಿರೋಜ್ ಸೇಠ್, ಮಹಾಂತೇಶ ಕೌಜಲಗಿ, ಮಹಾಂತೇಶ ಕವಠಗಿಮಠ, ಗಣೇಶ ಹುಕ್ಕೇರಿ, ವೀರಕುಮಾರ್ ಪಾಟೀಲ್, ಮಹಾಪೌರ ಕಿರಣ ಸಾಯನಾಕ, ಉಪಮಹಾಪೌರ ಮೀನಾ ವಾಜ್, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಯುವರಾಜಕದಂ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications