ಬಣ್ಣ ಬದಲಿಸುತ್ತಿದ್ದ ಕಾರವಾರ ಕಡಲ ತೀರ ಸಹಜ ಸ್ಥಿತಿಗೆ

Posted By:
Subscribe to Oneindia Kannada

ಕಾರವಾರ, ಆಗಸ್ಟ್ 20: ಕಾರವಾರದ ಕಡಲ ತೀರದಲ್ಲಿ ಕಳೆದೆರಡು ದಿನಗಳಿಂದ ಸಮುದ್ರದ ಬಣ್ಣ ಬದಲಾಗಿದೆ. ಸದಾ ನೀಲಿ ಸಮುದ್ರವನ್ನು ಕಣ್ತುಂಬಿ ಕೊಳ್ಳುತ್ತಿದ್ದ ಕಾರವಾರದ ನಿವಾಸಿಗಳಿಗೆ ಕಡಲ ತೀರದಲ್ಲಿ ಹಸಿರು ಬಣ್ಣದ ಅಲೆಗಳು ದಡಕ್ಕಪ್ಪಳಿಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿತ್ತು .

ಕಾರವಾರ ತಾಲೂಕಿನ ಬಿಣಗಾ, ಬೈತ್ ಕೊಲ್, ರವೀಂದ್ರನಾಥ್ ಟ್ಯಾಗೋರ್ ಕಡಲತೀರ, ಕೋಡಿ ಬಾಗ್ ಸೇರಿದಂತೆ ಮಾಜಾಳಿವರೆಗೆ ಇದೇ ರೀತಿಯಲ್ಲಿ ಸಮುದ್ರ ಬಣ್ಣ ಬದಲಾಗಿರುವುದು ಗೋಚರಿಸಿದೆ . ಗೋವಾದ ಕಾಣಕೋಣ ವರೆಗೂ ಕಡಲು ಹಸಿರು ಬಣ್ಣಕ್ಕೆ ತಿರುಗಿರುವುದಾಗಿ ಸ್ಥಳೀಯ ಮೀನುಗಾರರು ದೃಢಪಡಿಸಿದ್ದಾರೆ.

Karwar sea turns green - Fishermen in fear

ಸದಾ ನೀಲವಾಗಿ ಕಾಣುತ್ತಿದ್ದ ಕಡಲು ಏಕಾಏಕಿ ಬಣ್ಣ ಬದಲಿಸಿರುವುದು ಜನರ ಆತಂಕಕ್ಕೆ ಕಾರಣವಾಗಿತ್ತು . ಬಣ್ಣ ಬದಲಿಸಿದ ಸಮುದ್ರದ ಮೀನನ್ನು ತಿನ್ನಬೇಕೋ ಬೇಡವೋ ಎಂಬ ಗಂಭೀರ ಚರ್ಚೆ ಕೂಡ ಆರಂಭವಾಗಿತ್ತು .

ಈ ಹಿನ್ನೆಲೆಯಲ್ಲಿ ಮೀನುಗಾರರು ಕೋರಿಕೆಯ ಮೇರೆಗೆ ಕರ್ನಾಟಕ ವಿಶ್ವವಿದ್ಯಾನಿಲಯದ ಕಡಲ ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ ಶಿವಕುಮಾರ್ ಹರಗಿ ಕಡಲ ತೀರಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು .

Karwar sea turns green - Fishermen in fear

"ಮಳೆಗಾಲ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಮುದ್ರಕ್ಕೆ ನದಿಯ ನೀರು ಸೇರುತ್ತದೆ. ಈ ನದಿಯ ನೀರಲ್ಲಿ ಖನಿಜಾಂಶ ಹೇರಳವಾಗಿರುತ್ತದೆ. ಈ ನಡುವೆ ಕೆಲ ದಿನಗಳಿಂದ ಪರಿಸರದಲ್ಲಿ ಮಳೆ ಪ್ರಮಾಣ ಭಾರಿ ಕಡಿಮೆಯಾಗಿದೆ . ಬಿಸಿಲ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಿಸಿಲು ಬಿದ್ದಾಗ ಸಮುದ್ರದ ಸೂಕ್ಷ್ಮಜೀವಿಗಳು ಖನಿಜಾಂಶ ಬಳಸಿ ಪಾಚಿ (ಆಲ್ಗೆ )ಯನ್ನು ಉತ್ಪಾದಿಸುತ್ತವೆ," ಎಂದು ಅವರು ತಿಳಿಸಿದ್ದಾರೆ.

"ಕಡಲಲ್ಲಿ ಪಾಚಿಯ ಪ್ರಮಾಣ ಅಳತೆ ಮೀರಿ ಹೆಚ್ಚಳವಾದಾಗ ಅಲೆಗಳ ಮೂಲಕ ದಡಕ್ಕೆ ಬರುವ ಹಿನ್ನೆಲೆಯಲ್ಲಿ ಕಡಲು ಹಸಿರಾಗಿ ಕಾಣಿಸುತ್ತದೆ," ಎಂದು ಡಾ. ಶಿವಕುಮಾರ್ ಹರಗಿ ಸ್ಪಷ್ಟಪಡಿಸಿದ್ದಾರೆ . ಇದು ಸಹಜ ಪ್ರಕ್ರಿಯೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದ್ದಾರೆ .

Karwar sea turns green - Fishermen in fear

ಈ ನಡುವೆ ಕಡಲ ಜೀವಶಾಸ್ತ್ರ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಕಡಲ ತೀರಕ್ಕೆ ಭೇಟಿ ನೀಡಿ ಸಮುದ್ರ ಹಸಿರು ಮತ್ತು ಕೆಂಪು ಬಣ್ಣಕ್ಕೆ ಬದಲಾಗಿರುವ ಬಗ್ಗೆ ಅಧ್ಯಯನ ನಡೆಸಿದ್ದಾರೆ . ಸಮುದ್ರದ ನೀರಿನ ಮಾದರಿಯನ್ನು ಸಂಗ್ರಹಿಸಿದ್ದು ಅಧ್ಯಯನಕ್ಕೂ ಕಳಿಸಲಾಗಿದೆ.

ಕಾರವಾರ ತೀರದ ಕಡಲು ಈಗ ಮತ್ತೆ ಸಹಜ ಸ್ಥಿತಿಗೆ ಮರಳಿದೆ . ಕಡಲಾಳದಿಂದ ಮೇಲೆದ್ದು ಬಂದಿದ್ದ ಪಾಚಿ ಗೋವಾದತ್ತ ಸಾಗಿದೆ ಎಂದು ಹೇಳಲಾಗಿದೆ .ಈ ಹಿನ್ನೆಲೆಯಲ್ಲಿ ಕಾರವಾರ ಜನರು ನಿಟ್ಟುಸಿರು ಬಿಟ್ಟಿದ್ದಾರೆ .

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The sea water at the Rabindranath Tagore beach, Karwar here has turned green. The fisher-folk, startled by the colour of the waves hitting the shore, called up the office of the ocean biology study centre.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ