ಸರ್ಕಾರಿ ಉದ್ಯೋಗ ನೇಮಕಾತಿ: ಕರ್ನಾಟಕದ ಯುವಕರು ಕೇಳುತ್ತಿರುವುದು ಭಿಕ್ಷೆಯಲ್ಲ: ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್
ಕರ್ನಾಟಕದಲ್ಲಿ ಖಾಲಿ ಇರುವ ಲಕ್ಷಾಂತರ ಸರ್ಕಾರಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಯುವಕರು ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಧಾರವಾಡದಲ್ಲಿ ಸರ್ಕಾರಿ ಉದ್ಯೋಗ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗುತ್ತಿದ್ದು, ಹಲವರು ಬೆಂಬಲ ಸೂಚಿಸಿದ್ದಾರೆ. ಇದೀಗ ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ಮುಖಂಡ ಭಾಸ್ಕರ್ ರಾವ್ ಅವರು, ಕರ್ನಾಟಕದ ಯುವಕರು ಕೇಳುತ್ತಿರುವುದು ಭಿಕ್ಷೆಯಲ್ಲ ಎಂದಿದ್ದಾರೆ.
ಯುವಜನರ ಭವಿಷ್ಯವನ್ನು ಕಸಿದುಕೊಂಡಿರುವ ರಾಜ್ಯ ಸರ್ಕಾರದ ಅಸಡ್ಡೆ ಆಡಳಿತಕ್ಕೆ ಧಾರವಾಡದ ಬೀದಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯೇ ಜೀವಂತ ಸಾಕ್ಷಿ. ಕೇವಲ ಬಣ್ಣಬಣ್ಣದ ಮಾತುಗಳು ಮತ್ತು ಉಚಿತಗಳ ಭರವಸೆಗಳನ್ನು ನೀಡಿ ಅಧಿಕಾರದ ಗದ್ದುಗೆ ಏರಿದ ಸರ್ಕಾರಕ್ಕೆ, ಇಂದು ತಮ್ಮ ನ್ಯಾಯಸಮ್ಮತ ಹಕ್ಕಿಗಾಗಿ ಬೀದಿಗಿಳಿದಿರುವ ಲಕ್ಷಾಂತರ ಯುವಜನರ ಆಕ್ರೋಶ ಕಣ್ಣಿಗೆ ಕಾಣದಿರುವುದು ದುರಂತ. ಸ್ಪರ್ಧಾತ್ಮಕ ಪರೀಕ್ಷೆಗಳ ನೆಪದಲ್ಲಿ ವರ್ಷಗಟ್ಟಲೆ ಯುವಕರನ್ನು ಕಾಯಿಸಿ, ಅವರ ವಯಸ್ಸು, ತಾಳ್ಮೆ ಮತ್ತು ಭವಿಷ್ಯದ ಜೊತೆ ಕ್ರೂರವಾಗಿ ಆಟವಾಡುತ್ತಿರುವ ಈ ಸರ್ಕಾರದ ನಡೆ ಅಕ್ಷಮ್ಯ ಅಪರಾಧ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಪಿಎಸ್‌ಸಿ (KPSC) ಮತ್ತು ಕೆಇಎ (KEA) ಗಳಂತಹ ನೇಮಕಾತಿ ಪ್ರಾಧಿಕಾರಗಳು ಇಂದು ಸಂಪೂರ್ಣವಾಗಿ ಭ್ರಷ್ಟಾಚಾರ ಮತ್ತು ಅಕ್ರಮಗಳ ಕೂಪಗಳಾಗಿ ಮಾರ್ಪಟ್ಟಿವೆ. ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆ, ಪಾರದರ್ಶಕತೆಯಿಲ್ಲದ ನೇಮಕಾತಿ ಪ್ರಕ್ರಿಯೆಗಳು ಮತ್ತು ಉದ್ದೇಶಪೂರ್ವಕ ವಿಳಂಬ ಧೋರಣೆಗಳ ಮೂಲಕ ಪ್ರಾಮಾಣಿಕ ವಿದ್ಯಾರ್ಥಿಗಳ ಹೊಟ್ಟೆಯ ಮೇಲೆ ಹೊಡೆಯಲಾಗುತ್ತಿದೆ. ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಕೇವಲ ರಾಜಕೀಯ ಲಾಭ - ನಷ್ಟಗಳ ಲೆಕ್ಕಾಚಾರದಲ್ಲಿ ಮುಳುಗಿರುವ ಸರ್ಕಾರಕ್ಕೆ ನಾಡಿನ ಯುವಶಕ್ತಿಯ ಕಣ್ಣೀರು ಲೆಕ್ಕಕ್ಕೇ ಇಲ್ಲದಂತಾಗಿದೆ.
ಹಳ್ಳಿಗಳಿಂದ ಬಂದ ಬಡ ರೈತರ ಮಕ್ಕಳು ಸಾಲ ಮಾಡಿ, ಊಟ-ನಿದ್ದೆ ಬಿಟ್ಟು ಧಾರವಾಡದಂತಹ ನಗರಗಳಲ್ಲಿ ಹಗಲಿರುಳು ಓದುತ್ತಿದ್ದಾರೆ. ಇತ್ತ ಆಡಳಿತ ನಡೆಸುವವರು ಎಸಿ ರೂಮ್‌ಗಳಲ್ಲಿ ಕುಳಿತು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳನ್ನು ಭರ್ತಿ ಮಾಡಲು ಇವರಿಗೆ ಕಿಂಚಿತ್ತೂ ಇಚ್ಛಾಶಕ್ತಿಯಿಲ್ಲ. 'ಉದ್ಯೋಗ ಸೃಷ್ಟಿ' ಎಂಬುದು ಕೇವಲ ಇವರ ಭಾಷಣಗಳಿಗೆ ಮತ್ತು ಪ್ರಣಾಳಿಕೆಗಳಿಗೆ ಮಾತ್ರ ಸೀಮಿತವಾಗಿದ್ದು, ವಾಸ್ತವದಲ್ಲಿ ಯುವಜನರನ್ನು ಕೇವಲ ಮತಬ್ಯಾಂಕ್ ಆಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಇದು ಸರ್ಕಾರದ ಅಭಿವೃದ್ಧಿ ಶೂನ್ಯ ಮತ್ತು ದಿಕ್ಸೂಚಿಯಿಲ್ಲದ ಆಡಳಿತದ ಸ್ಪಷ್ಟ ನಿದರ್ಶನ.
ಇದು ಯುವಕರು ಕೇಳುತ್ತಿರುವ ಭಿಕ್ಷೆಯಲ್ಲ, ಇದು ಅವರ ಬೆವರಿನ ಹಕ್ಕು. ಯುವಕರ ಶಾಪ ಮತ್ತು ಕಣ್ಣೀರು ಯಾವುದೇ ಸರ್ಕಾರಕ್ಕೂ ಒಳ್ಳೆಯದಲ್ಲ ಎಂಬುದನ್ನು ಇತಿಹಾಸ ಮತ್ತೆ ಮತ್ತೆ ಸಾಬೀತುಪಡಿಸಿದೆ. ಈಗಲಾದರೂ ಸರ್ಕಾರ ನಿದ್ದೆಯಿಂದ ಎಚ್ಚೆತ್ತುಕೊಂಡು, ತಕ್ಷಣವೇ ಭ್ರಷ್ಟಾಚಾರ ಮುಕ್ತ ನೇಮಕಾತಿಗೆ ಸ್ಪಷ್ಟ ವೇಳಾಪಟ್ಟಿ ಪ್ರಕಟಿಸಬೇಕು. ಇಲ್ಲವಾದಲ್ಲಿ, ಧಾರವಾಡದಿಂದ ಶುರುವಾದ ಈ ಯುವಜನರ ಆಕ್ರೋಶದ ಕಿಚ್ಚು ಇಡೀ ರಾಜ್ಯವನ್ನು ಆವರಿಸಲಿದೆ ಹಾಗೂ ಅದೇ ಜ್ವಾಲೆಯಲ್ಲಿ ಸರ್ಕಾರದ ಅಹಂಕಾರ ಸುಟ್ಟು ಕರಗುವುದು ಖಂಡಿತ ಎಂದು ಟೀಕಿಸಿದ್ದಾರೆ.












Click it and Unblock the Notifications