Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲ ತಾಪ ಏರುತ್ತಿದ್ದರೂ, ಮಾರ್ಚ್ 31ರಿಂದ ಏಪ್ರಿಲ್ 4ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸುಡುವ ಬೇಸಿಗೆಯ ನಡುವೆಯೇ ಮಳೆರಾಯ ತಂಪೆರೆಯಲು ಸಜ್ಜಾಗಿದ್ದು, ಗಾಳಿಯ ವೇಗವೂ ಹೆಚ್ಚಾಗಿರಲಿದೆ. ವಿಶೇಷವಾಗಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆಯಾಗುವ ಮೂಲಕ ಬಿಸಿಲಿನಿಂದ ತತ್ತರಿಸಿರುವ ಜನರಿಗೆ ತುಸು ನೆಮ್ಮದಿ ಸಿಗುವ ನಿರೀಕ್ಷೆಯಿದೆ.
ಎಲ್ಲೆಲ್ಲಿ ಮಳೆ ಮುನ್ಸೂಚನೆ?
ಮಾರ್ಚ್ 31ರಿಂದ ಏಪ್ರಿಲ್ 4ರವರೆಗೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ಸಮಯದಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ.

ಬಾಗಲಕೋಟೆ, ಬೀದರ್, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಒಣ ಹವಾಮಾನವೇ ಮುಂದುವರಿಯಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಗುಡುಗು ಸಹಿತ ಮಳೆ ಹಾಗೂ ಬಲವಾದ ಗಾಳಿ ಬೀಸುವ ಸಂಭವವಿದೆ. ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲೂ ಮಳೆಯ ಆರ್ಭಟ ಇರಲಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹವಾಮಾನವು ಶುಷ್ಕವಾಗಿರಲಿದ್ದು, ಮಳೆಯ ಸಾಧ್ಯತೆ ತೀರಾ ಕಡಿಮೆ ಇದೆ.
ಮಳೆಯ ಮುನ್ಸೂಚನೆ ಇದ್ದರೂ ಸಹ ಮುಂದಿನ 3 ದಿನಗಳ ಕಾಲ ಉತ್ತರ ಒಳನಾಡಿನಲ್ಲಿ ಗರಿಷ್ಠ ಉಷ್ಣಾಂಶವು ಏರಿಕೆಯಾಗುವ ಪ್ರವೃತ್ತಿಯನ್ನು ಹೊಂದಿರುತ್ತದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂದಿನ 5 ದಿನಗಳವರೆಗೆ ಗರಿಷ್ಠ ಉಷ್ಣಾಂಶದಲ್ಲಿ ಯಾವುದೇ ದೊಡ್ಡ ಬದಲಾವಣೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ಕೆಲವು ಪ್ರದೇಶಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ.
ಕರಾವಳಿ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಗರಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 1.6 ಡಿಗ್ರಿ ಸೆಲ್ಸಿಯಸ್‌ನಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ. ಆದರೆ, ಒಳನಾಡಿನ ಒಂದೆರಡು ಕಡೆಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 1.6-3 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗಿದೆ. ಉತ್ತರ ಒಳನಾಡಿನಲ್ಲಿ ರಾತ್ರಿಯ ತಾಪಮಾನ ಸಾಮಾನ್ಯಕ್ಕಿಂತ ತುಸು ಹೆಚ್ಚಾಗಿದೆ. ಆದರೆ, ಅಚ್ಚರಿಯೆಂಬಂತೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಕನಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ ಇಳಿಕೆಯಾಗಿದ್ದು, ಮುಂಜಾನೆ ತುಸು ತಂಪಾದ ವಾತಾವರಣ ಕಂಡುಬರುತ್ತಿದೆ.
ಸುಳಿಗಾಳಿಯ ಪ್ರಭಾವ
ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ಪ್ರಸ್ತುತ ಮೂರು ಪ್ರಮುಖ ವಿದ್ಯಮಾನಗಳು ರಾಜ್ಯದ ಹವಾಮಾನದ ಮೇಲೆ ಪರಿಣಾಮ ಬೀರುತ್ತಿವೆ. ಒಡಿಶಾದಿಂದ ಆರಂಭವಾಗಿ ಛತ್ತೀಸ್‌ಗಢ, ತೆಲಂಗಾಣ ಮತ್ತು ಕರ್ನಾಟಕದ ಒಳನಾಡಿನ ಮೂಲಕ ತಮಿಳುನಾಡಿನವರೆಗೆ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಗಾಳಿಯ ಒತ್ತಡದ ಸುಳಿ ನಿರ್ಮಾಣವಾಗಿದೆ. ಇದು ಮಳೆ ಮೋಡಗಳ ರಚನೆಗೆ ಪೂರಕವಾಗಿದೆ.
ಆಂಧ್ರಪ್ರದೇಶದ ರಾಯಲಸೀಮೆ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದಲ್ಲಿ ಗಾಳಿಯ ಸುಳಿ ಕಂಡುಬಂದಿದೆ. ಇದರ ಪ್ರಭಾವ ದಕ್ಷಿಣ ಕರ್ನಾಟಕದ ಮೇಲೂ ಇರಲಿದೆ.ದಕ್ಷಿಣ ಒಳನಾಡಿನ ವಾತಾವರಣದ ಮೇಲ್ಭಾಗದಲ್ಲಿ (ಸಮುದ್ರ ಮಟ್ಟದಿಂದ ಸುಮಾರು 5.8 ಕಿ.ಮೀ ಎತ್ತರದಲ್ಲಿ) ಮತ್ತೊಂದು ಸುಳಿಗಾಳಿ ಸಕ್ರಿಯವಾಗಿದೆ. ಈ ಬದಲಾವಣೆಗಳಿಂದಾಗಿ ರಾಜ್ಯದ ಕರಾವಳಿ ಭಾಗದಲ್ಲಿ ಈಗಾಗಲೇ ಭರ್ಜರಿ ಮಳೆಯಾಗಿದ್ದು, ಹೊನ್ನಾವರದಲ್ಲಿ ಗರಿಷ್ಠ 6 ಸೆಂ.ಮೀ ಮಳೆ ದಾಖಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಮೈಸೂರು, ಮಂಡ್ಯ, ಕೊಡಗು ಮತ್ತು ಬೆಂಗಳೂರಿನಲ್ಲಿಯೂ ವಾತಾವರಣ ತಂಪಾಗಲಿದೆ.












Click it and Unblock the Notifications