Weather Alert: ಕರ್ನಾಟಕದಲ್ಲಿ ಹೆಚ್ಚಲಿದೆ ಗರಿಷ್ಠ ತಾಪಮಾನ, ಫೆ. 15ರ ವರೆಗಿನ ಹವಾಮಾನ ಮುನ್ಸೂಚನೆ
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಚಳಿ ವಾತಾವರಣ ಮರೆಯಾಗಿ ಉಷ್ಣ ಅಲೆಯ ವಾತಾವರಣ ನಿರ್ಮಾಣವಾಗುತ್ತಿದೆ. ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಇಳಿಕೆ ಆಗಿದ್ದು ಬಿಟ್ಟರೆ ರಾಜ್ಯದಲ್ಲಿ ಬಹುತೇಕ ಕಡೆಗಳಲ್ಲಿ ಗರಿಷ್ಠ ತಾಪಮಾನ ಹಾಗೂ ಶಾಖದ ಅಲೆಯೇ ಮೇಲುಗೈ ಸಾಧಿಸುವ ಲಕ್ಷಣಗಳು ಕಂಡು ಬಂದಿವೆ. ಮುಂದಿನ ಒಂದು ವಾರ ಬೆಂಗಳೂರು ಸೇರಿದಂತೆ ರಾಜ್ಯದ ವಾತಾವರಣ ಹೇಗಿರಲಿದೆ? ಎಂಬ ಮುನ್ಸೂಚನೆ ಇಲ್ಲಿದೆ.
ಐಎಂಡಿ ಪ್ರಕಾರ, ಉಷ್ಣವಲಯದ ಮಟ್ಟದಲ್ಲಿ ಈ ಪ್ರದೇಶದ ಮೇಲೆ ಹಗುರದಿಂದ ಮಧ್ಯಮ ಪೂರ್ವ/ಈಶಾನ್ಯ ಮಾರುತಗಳು ಮೇಲುಗೈ ಸಾಧಿಸುತ್ತಿದೆ. ಭಾನುವಾರ ಮನ್ನಾರ್ ಕೊಲ್ಲಿಯ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ವರೆಗೆ ವಾಯು ಚಂಡಮಾರುತದ ಪರಿಚಲನೆ ಗುರುತಿಸಲ್ಪಟ್ಟಿದೆ. ಸದ್ಯ ಇದು ಅಷ್ಟಾಗಿ ತೀವ್ರ ಸ್ವರೂಪ ಪಡೆದಿಲ್ಲ. ಬೇಸಿಗೆ ಕಾಲವಾಗಿದ್ದರಿಂದ ನಿರಂತರವಾಗಿ ಶಾಖದ ಅಲೆಯ ಪ್ರಭಾವ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ.

ಉತ್ತರ ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ -5.1 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ದಾಖಲಾಗಿದೆ. ಇನ್ನಿತರ ಒಳನಾಡಿನ ಪ್ರದೇಶಗಳ ಕೆಲವೆಡೆ ಸಾಮಾನ್ಯಕ್ಕಿಂತ ಕನಿಷ್ಠ ತಾಪಮಾನ -3.1 ಡಿಗ್ರಿ ಸೆಲ್ಸಿಯಸ್ ನಷ್ಟು ಗಣನೀಯವಾಗಿ ಇಳಿಕೆ ಆಗಿದೆ. ಇದಿಷ್ಟು ಬಿಟ್ಟರೆ ಉಳಿದೆಲ್ಲ ಕಡೆಗಳಲ್ಲಿ ಗರಿಷ್ಠ ತಾಪಮಾನ, ಶುಷ್ಕ ವಾತಾವರಣ ನಿರ್ಮಾಣವಾಗಿದೆ.
ಫೆಬ್ರವರಿ ತಿಂಗಳಾಂತ್ಯದ ಹೊತ್ತಿಗೆ ಕರಾವಳಿ ಭಾಗದಲ್ಲಿ ಹೆಚ್ಚಾಗಿರುವ ಒಣಹವೆ, ಅಧಿಕ ಬಿಸಿಲು ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಾದ್ಯಂತ ವಿಸ್ತರಣೆ ಆಗಲಿದೆ. ಶಾಖದ ಅಲೆಯ ವಾತಾವರಣ ನಿರ್ಮಾಣವಾಗಲಿದೆ. ವಾಡಿಕೆಯಷ್ಟು, ಹಲವೆಡೆ ವಾಡಿಕೆಗಿಂತ ಹೆಚ್ಚಿನ ತಾಪಮಾನ ದಾಖಲಾಗಬಹುದೆಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ರಾಜ್ಯದ ಗರಿಷ್ಠ ತಾಪಮಾನದ ಜಿಲ್ಲೆಗಳು
ಕರಾವಳಿ ಭಾಗದಲ್ಲಿ ಅತೀ ಗರಿಷ್ಠ ತಾಪಮಾನ ದಾಖಲಾಗಿದೆ. ಕಾರವಾರದಲ್ಲಿ 37.2 ಡಿಗ್ರಿ ಸೆಲ್ಸಿಯಸ್, ಹೊನ್ನಾವರ 34.4 ಡಿಗ್ರಿ ಸೆಲ್ಸಿಯಸ್ ಮತ್ತು ಮಂಗಳೂರು ಏರ್‌ಪೋರ್ಟ್ 34.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಕಲಬುರಗಿಯಲ್ಲಿ 34 ಡಿಗ್ರಿ ಸೆಲ್ಸಿಯಸ್, ಬಳ್ಳಾರಿ 33 ಡಿಗ್ರಿ ಸೆಲ್ಸಿಯಸ್, ಹಾವೇರಿ, ಗದಗ ಮತ್ತು ಕೊಪ್ಪಳ ತಲಾ 32 ಡಿಗ್ರಿ ಸೆಲ್ಸಿಯಸ್, ಹಾಸನ, ಮೈಸೂರು, ಹಿರಿಯೂರು, ವಿಜಯಪುರ, ಗಂಗಾವತಿ, ಬೆಳಗಾವಿ ಏರ್‌ಪೋರ್ಟ್, ರಾಯಚೂರು, ಕೋಲಾರದಲ್ಲಿ ತಲಾ 31 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಬೆಂಗಳೂರು ಹವಾಮಾನ ವರದಿ
ರಾಜಧಾನಿಯಲ್ಲಿ ಬೆಳಗ್ಗೆ ಮತ್ತು ರಾತ್ರಿ ಕೊಂಚ ತಂಪು ವಾತಾವರಣ ಕಂಡು ಬರುತ್ತಿದ್ದು, ಹಗಲು ಒಣಹವೆ ಮುಂದುವರಿದಿದೆ. ಬೆಂಗಳೂರು ನಗರದಲ್ಲಿ ಗರಿಷ್ಠ 30.2 ಹಾಗೂ ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ, ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 16.1 ಡಿಗ್ರಿ ಸೆಲ್ಸಿಯಸ್ ಹಾಗೂ ಬೆಂಗಳೂರು ಎಚ್‌ಎಎಲ್ ಏರ್‌ಪೋರ್ಟ್‌ನಲ್ಲಿ ಗರಿಷ್ಠ 29,9 ಮತ್ತು ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಹವಾಮಾನ ವರದಿ ತಿಳಿಸಿದೆ.












Click it and Unblock the Notifications