ಕರ್ನಾಟಕ ಮಳೆ: ಏ. 10 ರತನಕ ವಿವಿಧೆಡೆ ಜೋರು ಮಳೆ, ಏ.8ಕ್ಕೆ ಭಾರಿ ಮಳೆ ಸಂಭವ : ಐಎಂಡಿ ಮುನ್ಸೂಚನೆ
ಬೆಂಗಳೂರು, ಏಪ್ರಿಲ್ 05: ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಶುರುವಿಟ್ಟುಕೊಂಡಿರುವ ಪೂರ್ವ ಮುಂಗಾರು ಮಳೆ ಏಪ್ರಿಲ್ 10ರವರೆಗೂ ಮುಂದುವರಿಯುವ ಸಾಧ್ಯತೆ ಇದೆ. ಈ ಪೈಕಿ ಒಂದು ಅಧಿಕ ಮಳೆ ಬರುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಮತ್ತು ಮಿಂಚು ಜೋರು ಮಳೆ ದಾಖಲಾಗಿದೆ. ಇದೇ ರೀತಿ ಬುಧವಾರದಿಂದ ಮುಂದಿನ ಐದು ದಿನವು ಬರಲಿದೆ. ಐದು ದಿನಗಳ ಪೈಕಿ ಏಪ್ರಿಲ್ 8ರವರೆಗೆ ಕರಾವಳಿ ಭಾಗದಲ್ಲಿ ಮಳೆ ತುಸು ಬಿರುಸುಕೊಳ್ಳಲಿದೆ. ಇದನ್ನು ಬಿಟ್ಟರೆ ದಕ್ಷಿಣ ಒಳನಾಡಿನ ಭಾಗದಲ್ಲಿ ಹಗುರ ಇಲ್ಲವೇ ಸಾಧಾರಣವಾಗಿ ಮಳೆ ಬರಬಹುದು.

ಆದರೆ ಉತ್ತರ ಒಳನಾಡಿನ ಭಾಗದ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ತುಂತುರು ಮಳೆ ಬರುವ ಸಾಧ್ಯತೆ ಇದೆ. ಇನ್ನೂ ಏಪ್ರಿಲ್ 8 ರಂದು ಕರ್ನಾಟಕ ರಾಜ್ಯದ ಬಹತೇಕ ಎಲ್ಲ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸಂಭವ ಇದೆ ಎಂದು ಮುನ್ಸೂಚನೆ ವರದಿ ತಿಳಿಸಿದೆ.
ಏಪ್ರಿಲ್ 8ರಂದು ಅಧಿಕ ಮಳೆ ಸಂಭವ
ಶನಿವಾರ (ಏಪ್ರಿಲ್ 8) ಮಳೆ ಸುರಿಸುವ ಮಾರುತಗಳು ಹೆಚ್ಚು ಚುರುಕಾಗಿರಲಿವೆ. ಹೀಗಾಗಿ ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ, ಉತ್ತರ ಒಳನಾಡಿನ ಜಿಲ್ಲೆಗಳಾದ ವಿಜಯಪುರ, ಕಲಬುರಗಿ, ಹಾವೇರಿ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೊಡಗು, ಕೋಲಾರ, ಮೈಸೂರು, ರಾಮನಗರ ಜಿಲ್ಲೆಗಳ ಹಲವು ಕಡೆಗಳಲ್ಲಿ ಗುಡುಗು ಸಹಿತ ಅಧಿಕ ಮಳೆ ಆಗಲಿದೆ.
ನಂತರದ ಎರಡು ದಿನ ಏಪ್ರಿಲ್ 10ರವರೆಗೆ ಮಳೆ ತುಸು ಕ್ಷೀಣಿಸಲಿದೆ. ಕರಾವಳಿ ಸೇರಿದಂತೆ ಮೂರು ಭಾಗದ ಒಂದೆರಡು ಜಿಲ್ಲೆಗಳ ವ್ಯಾಪ್ತಿಯಲ್ಲಿ ತುಂತುರು ಇಲ್ಲವೇ ಹಗುರವಾಗಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಿದ್ದ ಮಳೆ- ದಾಖಲಾದ ತಾಪಮಾನ ಮಾಹಿತಿ
ಬುಧವಾರ ಬೆಳಗಿನ ವರೆಗೆ ಅಂದರೆ ಅದರ ಹಿಂದಿನ 24 ಗಂಟೆಯಲ್ಲಿ ಕರ್ನಾಟಕದಲ್ಲಿ ದಕ್ಷಿಣ ಒಳನಾಡಿನ ಭಾಗದಲ್ಲಿ ಜಾಸ್ತಿ ಮಳೆ ದಾಖಲಾಗಿದೆ. ಆ ಪೈಕಿ ಬೆಂಗಳೂರಲ್ಲಿ ಹೆಚ್ಚು ಎನ್ನಬಹುದು. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ದಲ್ಲಿ 5 ಮಿಲಿ ಮೀಟರ್, ಎಚ್‌ಎಎಲ್ ನಲ್ಲಿ 4 ಮಿಲಿ ಮೀಟರ್ ಮಳೆ ದಾಖಲಾಗಿದೆ.
ಇನ್ನೂ ಕರ್ನಾಟಕದ ಗರಿಷ್ಠ ತಾಪಮಾನವು ರಾಯಚೂರು ಮತ್ತು ಕಲಬುರಗಿಯಲ್ಲಿ 39.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ ಬಳ್ಳಾರಿ 37 ಡಿಗ್ರಿ ಸೆಲ್ಸಿಯಸ್, ಗದಗ 37 ಡಿಗ್ರಿ ಸೆಲ್ಸಿಯಸ್, ವಿಜಯಪುರ 37 ಡಿಗ್ರಿ ಸೆಲ್ಸಿಯಸ್, ಬಾಗಲಕೋಟೆ 36 ಡಿಗ್ರಿ ಸೆಲ್ಸಿಯಸ್ ಮತ್ತು ಕೊಪ್ಪಳ್ಳದಲ್ಲಿ 36ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ರಾಜ್ಯದ ಕನಿಷ್ಠ ಉಷ್ಣಾಂಶ ಚಿಕ್ಕಮಗಳೂರಲ್ಲಿ 12.8 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ.
ಬೆಂಗಳೂರಿಗೆ 2-3ದಿನ ಮಳೆ
ಬೆಂಗಳೂರಿನಲ್ಲಿ ಮುಂದಿನ ಎರಡರಿಂದ ಮೂರು ದಿನವು ಜೋರು ಮಳೆ ನಿರೀಕ್ಷೆ ಇದೆ. ಸಂಜೆ ನಂತರ ಬಿಸಿಲು ಕಣ್ಮರೆಯಾಗಿ ದಿಢೀರ್ ಮೋಡ ಕವಿದು ಮಳೆ ಸುರಿಯುವ ಲಕ್ಷಣಗಳು ಇವೆ. ಏಪ್ರಿಲ್ 7ರವರೆಗೆ ಇದೇ ವಾತಾವರಣ ಮುಂದುವರಿಯಲಿದೆ. ಈ ವೇಳೆ ನಗರದಲ್ಲಿ ಉಷ್ಣಾಂಶ ಗರಿಷ್ಠ 34ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಮುನ್ಸೂಚನಾ ವರದಿ ಮಾಹಿತಿ ನೀಡಿದೆ.












Click it and Unblock the Notifications