ಜ.29ರ ಹವಾಮಾನ; ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದಲ್ಲಿ ಹಗುರು ಮಳೆ
ಬೆಂಗಳೂರು, ಜನವರಿ 29: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಚಳಿಯ ಪ್ರಮಾಣ ಹೆಚ್ಚಾಗುತ್ತಲೇ ಇದ್ದು, ರಾಜಧಾನಿ ಬೆಂಗಳೂರಿನಲ್ಲಿ ಇಂದು ಗರಿಷ್ಠ 28 ಕನಿಷ್ಠ 27 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಕರಾವಳಿ ಭಾಗದಲ್ಲಿ ಒಣ ಹವೆ ಇರಲಿದೆ. ಇಂದು ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇನ್ನು ಬೆಳಗ್ಗೆ ಚಳಿ ಹೆಚ್ಚಾಗಿರುವ ಹಿನ್ನೆಲೆ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿನ ವಿಪರೀತ ಚಳಿಗೆ ಜನರು ಹೈರಾಣಾಗಿದ್ದಾರೆ. ಇನ್ನು ಬದಲಾಗುತ್ತಿರುವ ಹವಾಮಾನದಿಂದಾಗಿ ಶೀತ ಸಂಬಂಧಿತ ಜ್ವರಗಳಿಂದ ಜನರು ಬಳಲುತ್ತಿದ್ದಾರೆ.
ಉತ್ತರ ಕರ್ನಾಟಕದ ಬೀದರ್, ವಿಜಯಪುರ, ಕೊಪ್ಪಳ ಜಿಲ್ಲೆಗಳಲ್ಲಿ ದಟ್ಟವಾದ ಇಬ್ಬನಿ ಬೀಳುತ್ತಿದೆ. ಬೆಳಗ್ಗೆ ಮೈನಡುಗುವ ಚಳಿಗೆ ಜನರು ಹೈರಾಣಾಗಿದ್ದರೆ, ಸಂಜೆ ಆಗುತ್ತಿದ್ದಂತೆ ಬೀಸುವ ಶೀತ ಗಾಳಿಗೆ ಜನರು ಬೆಚ್ಚಗೆ ಮನೆಯಲ್ಲಿ ಕುಳಿತುಕೊಂಡಿರುತ್ತಾರೆ. ಉತ್ತರ ಕರ್ನಾಟಕದಲ್ಲಿ ಬೆಳಗ್ಗೆ ದಟ್ಟವಾದ ಮಂಜು ಮತ್ತು ಚಳಿ ಇದ್ದರೆ ಮಧ್ಯಾಹ್ನ ಆಗುತ್ತಿದ್ದಂತೆ ಸೂರ್ಯನ ಬಿಸಿಲು ಬೇಸಿಗೆ ಕಾಲದ ಅನುಭವವನ್ನು ನೀಡುತ್ತಿದೆ.

ಕರ್ನಾಟಕದಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಹಗುರ ಮಳೆಯಾಗಲಿದೆ. ಚಳಿಗಾಲದಲ್ಲಿ ಮಳೆಯಾಗುವುದು ಅಸಾಮಾನ್ಯವೇನಲ್ಲ. ಹವಾಮಾನದಲ್ಲಿ ಬದಲಾವಣೆಯಗುತ್ತಿರುವುದರಿಂದ ಮುಂದಿನ ತಿಂಗಳ ಮಧ್ಯ ಭಾಗದವರೆಗೂ ಮಳೆ, ಚಳಿಯ ವಾತಾವರಣ ಇರಲಿದೆ.
ಭಾರತೀಯ ಹವಾಮಾನ ಇಲಾಖೆ (IMD) ಇಂದು ದಕ್ಷಿಣ ಕರ್ನಾಟಕ ಮತ್ತು ರಾಯಲಸೀಮಾದಲ್ಲಿ ಲಘು ಮಳೆಯ ಮುನ್ಸೂಚನೆ ನೀಡಿದ್ದು, ಇಂದು ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂನಲ್ಲಿ ಮತ್ತು ಮುಂದಿನ 4 ದಿನಗಳಲ್ಲಿ ತಮಿಳುನಾಡು, ಪುದುಚೇರಿ ಮತ್ತು ಕೇರಳದಲ್ಲಿ ಮಳೆಯ ತೀವ್ರತೆಯು ತುಂಬಾ ಕಡಿಮೆಯಿರುವ ನಿರೀಕ್ಷೆಯಿದೆ.

ಜನವರಿಯಲ್ಲಿ ದಕ್ಷಿಣ ಭಾರತದಲ್ಲಿ ಮಳೆಯು ಅತ್ಯಲ್ಪವಾಗಿದೆ ಮತ್ತು ಇಡೀ ಪರ್ಯಾಯ ದ್ವೀಪವು ವರ್ಷದ ಮೊದಲ ತಿಂಗಳಲ್ಲಿ ಸರಾಸರಿ 10 ಮಿ.ಮೀಗಿಂತ ಕಡಿಮೆ ಮಳೆಯನ್ನು ಹೊಂದಿದೆ. ಈ ವರ್ಷ ಕರ್ನಾಟಕ ಮತ್ತು ಕೇರಳದಂತಹ ರಾಜ್ಯಗಳಲ್ಲಿ ಮಳೆ ಕೈ ಕೊಟ್ಟಿದೆ. ಇದಕ್ಕೆ ವ್ಯತಿರಿಕ್ತವಾಗಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಪುದುಚೇರಿಗಳಲ್ಲಿ ಸರಾಸರಿಗಿಂತ ಎರಡು ಪಟ್ಟು ಹೆಚ್ಚು ಮಳೆಯಾಗಿದೆ.
ಬಿಹಾರ ಮತ್ತು ಒಡಿಶಾದಲ್ಲಿ ಶೀತಗಾಳಿ
ಇಂದು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಮಳೆ ಅಥವಾ ಹಿಮಪಾತ ಉಂಟಾಗುವ ಸಾಧ್ಯತೆಯಿದೆ. ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕೂಡ ಮಳೆಯಾಗಲಿದೆ. ಪೂರ್ವ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಬಿಹಾರ ಮತ್ತು ಒಡಿಶಾದಲ್ಲಿ ಶೀತಗಾಳಿ ಏಳುವ ಸಾಧ್ಯತೆಯಿದೆ.
ಈ ವಾರ ಚೆನ್ನೈ ಸೇರಿದಂತೆ ತಮಿಳುನಾಡಿನ ಕೆಲವು ಭಾಗಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದ್ದು, ಮುಂದಿನ ವಾರವೂ ಇದೇ ಮಾದರಿ ಮುಂದುವರಿಯುವ ಸಾಧ್ಯತೆಯಿದೆ. ಕೊಚ್ಚಿ ಮತ್ತು ಚೆನ್ನೈ ಮುಂದಿನ ಕೆಲವು ದಿನಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಆದರೆ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಬೆಳಿಗ್ಗೆ ಮಂಜು ಮತ್ತು ಭಾಗಶಃ ಮೋಡ ಕವಿದ ವಾತಾವರಣ ಇರುತ್ತದೆ.

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಮಳೆ
Recommended Video
ಇಂದು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಮಳೆಯಾಗಲಿದೆ. ಇನ್ನು ಮಧ್ಯಪ್ರದೇಶದಲ್ಲಿ ತೀವ್ರ ಶೀತಗಾಳಿ ಬೀಸಲಿದೆ. ಪಂಜಾಬ್, ಹರಿಯಾಣ, ಚಂಡೀಗಢ, ರಾಜಸ್ಥಾನದಲ್ಲಿ ಇಂದು- ನಾಳೆ ದಿನ ಶೀತಗಾಳಿ ಬೀಸಿದರೆ, ಉತ್ತರ ಪ್ರದೇಶದಲ್ಲಿ ಜನವರಿ 30ರವರೆಗೆ ಶೀತಗಾಳಿ ಮುಂದುವರೆಯಲಿದೆ. ಮಹಾರಾಷ್ಟ್ರ, ಮಾರತ್ವಾಡ, ಗುಜರಾತ್ನಲ್ಲಿ ಮುಂದಿನ 2 ದಿನ ಶೀತಗಾಳಿ ಬೀಸಲಿದೆ. ಒಡಿಶಾದಲ್ಲಿ ಜನವರಿ 29 ಮತ್ತು 30ರಂದು ಶೀತಗಾಳಿ ಹೆಚ್ಚಾಗಲಿದೆ.












Click it and Unblock the Notifications