Karnataka Weather: ರಾಜ್ಯಾದ್ಯಂತ 30 ಡಿ.ಸೆ. ದಾಟಿದ ಗರಿಷ್ಠ ತಾಪಮಾನ, 5 ದಿನದ ಹವಾಮಾನ ಮುನ್ಸೂಚನೆ
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಟಿದೆ. ಕೆಲವು ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಕನಿಷ್ಠ ತಾಪಮಾನ ದಾಖಲಾಗುವ ಮೂಲಕ ಕೊಂಚ ಚಳಿ ಹಾಗೂ ಮಂಜಿನ ವಾತಾವರಣ ದಾಖಲಾಗಿದೆ. ಐದು ದಿನ ರಾಜ್ಯದಾದ್ಯಂತ ಹಗಲು ಒಣಹವೆ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಶನಿವಾರ ಸಂಜೆ ಕನಿಷ್ಠ ತಾಪಮಾನದಲ್ಲಿ ಕೊಂಚ ಇಳಿಕೆ ಆಗಿದ್ದು ಕಂಡು ಬಂತು. ನಗರದಲ್ಲಿ ಕನಿಷ್ಠ 16.3 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ಕನಿಷ್ಠ 15.3 ಡಿಗ್ರಿ ಸೆಲ್ಸಿಯಸ್ ಹಾಗೂ ಬೆಂಗಳೂರು ಎಚ್‌ಎಎಲ್ ಏರ್‌ಪೋರ್ಟ್‌ನಲ್ಲಿ ಕನಿಷ್ಠ 15.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದರಿಂದಾಗಿ ಬೆಳಗ್ಗೆ ಹಾಗೂ ರಾತ್ರಿ ತಂಪು ವಾತಾವರಣ ಕಂಡು ಬಂದಿದೆ.

ಸ್ವಚ್ಛ ನೀಲಿ ಆಕಾಶವಿದ್ದು, ಗರಿಷ್ಠ ತಾಪಮಾನ ಬೆಂಗಳೂರಿನಲ್ಲಿ 30 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಅದೇ ರೀತಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಗರಿಷ್ಠ ತಾಪಮಾನದಲ್ಲಿ ಏರಿಕೆ ಆಗಿದೆ. ಅತ್ಯಧಿಕ ಒಣಹವೆಯು ಕಾರವಾರ ಮತ್ತು ಹೊನ್ನಾವರದಲ್ಲಿ (37 ಡಿ.ಸೆ) ಕಂಡು ಬಂದಿದೆ. ಮಂಗಳೂರು ಏರ್‌ಪೋರ್ಟ್ ನಲ್ಲಿ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್, ದಕ್ಷಿಣ ಕನ್ನಡ 37 ಡಿಗ್ರಿ ಸೆಲ್ಸಿಯಸ್, ಬಳ್ಳಾರಿ ಮತ್ತು ಕಲಬುರಗಿ 33 ಡಿಗ್ರಿ ಸೆಲ್ಸಿಯಸ್, ಹಾವೇರಿ, ಕೊಪ್ಪಳ, ಗದಗ, ಧಾರವಾಡ, ವಿಜಯಪುರ, ಹಾಸನದಲ್ಲಿ ತಲಾ 31 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇಲ್ಲೆಲ್ಲಾ ನಾಗರಿಕರಿಗೆ ನಿತ್ಯ ಒಣಹವೆ, ಶಾಖದ ಅಲೆಯ ಅನುಭವವಾಗುತ್ತಿದೆ.
ತಾಪಮಾನದಲ್ಲಿ ಬದಲಾವಣೆ ಇಲ್ಲ
ಬೆಂಗಳೂರು ನಗರ, ರಾಯಚೂರು, ಬೆಳಗಾವಿ ಏರ್‌ಪೋರ್ಟ್, ಬಾಗಲಕೋಟೆ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತಲಾ 30 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಕಂಡು ಬಂದಿದೆ. ಮುಂದಿನ ಐದಾರು ದಿನ ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ. ತಾಪಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿ ತಿಳಿಸಿದೆ.
ಕರ್ನಾಟಕ ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಅಧಿಕ ಬಿಸಿಲು ಕಂಡು ಬಂದಿದೆ. ನೆನ್ನೆ ಮಾತ್ರ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ -2.1ರಿಂದ 4 ಡಿಗ್ರಿ ಸೆಲ್ಸಿಯಸ್ ವರೆಗೆ ಇಳಿಕೆ ಆಗಿತ್ತು. ಬೆಂಗಳೂರಿನಲ್ಲಿ ಕೊಂಚ ಇಳಿಕೆ ಆಗಿದೆ. ಇದರ ಹೊರತು ಉಳಿದೆಲ್ಲ ಕಡೆಗಳಲ್ಲಿ ಸಾಮಾನ್ಯ ತಾಪಮಾನ ದಾಖಲಾಗಿದೆ.
ಚಂಡಮಾರುತ ಪರಿಚಲನೆ ಸೃಷ್ಟಿ
ಬಂಗಾಳಕೊಲ್ಲಿಯ ಕೊಮೊರಿಯನ್ ಪ್ರದೇಶ, ಮನ್ನಾರ್ ಕೊಲ್ಲಿ ಭಾಗದಲ್ಲಿ ವಾಯು ಚಂಡಮಾರುತ ಪರಿಚಲನೆ ಸೃಷ್ಟಿಯಾಗಿದೆ. ಇದರಿಂದ ಪ್ರಭಾವವು ತಮಿಳುನಾಡು ಕರಾವಳಿ ಭಾಗದಲ್ಲಿದೆ. ಬೆಂಗಳೂರು ಮತ್ತು ಕರ್ನಾಟಕಕ್ಕೆ ಸದ್ಯಕ್ಕೆ ಯಾವುದೇ ಗಂಭೀರ ಸ್ವಭಾವ ಬದಲಾವಣೆ ಇಲ್ಲ ಎಂದು ಐಎಂಡಿ ತಿಳಿಸಿದೆ.












Click it and Unblock the Notifications