ಕರ್ನಾಟಕದಲ್ಲಿ ಮುಂದಿನ ಐದು ದಿನಗಳಲ್ಲಿ ಭಾರಿ ಮಳೆ ನಿರೀಕ್ಷೆ
ಬೆಂಗಳೂರು ಜೂ.17: ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಮುಂಗಾರು ಚುರುಕುಗೊಳ್ಳಲಿದೆ. ಪರಿಣಾಮ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಆಗುವ ಲಕ್ಷಣಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಅಲ್ಲಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ನಿರೀಕ್ಷೆಯಿದೆ. ಜೂ.22ರವರೆಗೆ ಕರಾವಳಿ ಜಿಲ್ಲೆಗಳಿಗೆ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಹೀಗಾಗಿ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಐದು ದಿನಗಳಲ್ಲಿ ನಾಲ್ಕು ದಿನ 'ಯೆಲ್ಲೋ ಅಲರ್ಟ್' ಮತ್ತು ಜೂ.20 ರಂದು ಅಧಿಕ ಮಳೆ ನಿರೀಕ್ಷೆಯ ಕಾರಣಕ್ಕೆ ಈ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ಕರಾವಳಿ ಭಾಗದಲ್ಲಿ ಗಾಳಿ ಬೀಸುವಿಕೆ ವೇಗ ಗಂಟೆಗೆ ಸುಮಾರು 40ಕಿ.ಮೀ.ಗಿಂತಲೂ ಹೆಚ್ಚಿರಲಿದೆ ಎಂದು ತಿಳಿದು ಬಂದಿದೆ.
ಒಂದು ದಿನ ಭಾರಿ ಮಳೆ: ಆರೆಂಜ್ ಅಲರ್ಟ್
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ತುಮಕೂರು, ಮೈಸೂರು, ಮಂಡ್ಯ, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಹಲವೆಡೆ ಅಧಿಕ ಮಳೆ ನಿರೀಕ್ಷಿಸಲಾಗಿದೆ. ಈ ಎಲ್ಲ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಎಚ್ಚರಿಕೆ ಕೊಡಲಾಗಿದೆ. ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗದಲ್ಲಿ ಜೂ.19ರಂದು ಭಾರಿ ಮಳೆ ಕಾರಣಕ್ಕೆ ಅಂದು ಮಾತ್ರ "ಆರೆಂಜ್ ಅಲರ್ಟ್' ಘೋಷಿಸಲಾಗಿದೆ.

ಇದೇ ಐದು ದಿನದ ಅವಧಿಯಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಹಲವು ಪ್ರದೇಶಗಳಲ್ಲಿ ಸಾಮಾನ್ಯದಿಂದ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಎರಡು ದಿನ ಮಳೆ ಅಬ್ಬರ
ಬೆಂಗಳೂರಿಗೆ ಕಳೆದ ಎರಡು ದಿನದಿಂದ ನಿತ್ಯ ಮಳೆಯ ಸಿಂಚನವಾಗುತ್ತಿದೆ. ಆಗಾಗ ಕಂಡು ಬರುವ ಬಿಸಿಲು ಮಧ್ಯಾಹ್ನ ನಂತರ ಮರೆಯಾಗಿ ಮೋಡ ಕವಿದ ವಾತಾವರಣ ಸೃಷ್ಟಿಯಾಗುತ್ತದೆ. ನಂತರ ಸಂಜೆಯಿಂದ ತಡರಾತ್ರಿವರೆಗೂ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಇದೇ ವಾತಾವರಣ ಮುಂದಿನ 48 ಗಂಟೆಯು ಮುಂದುವರಿಯಲಿದೆ.
ಈ ಅವಧಿಯಲ್ಲಿ ರಾಜಧಾನಿಗೆ ಗುಡುಗು ಸಹಿತ ಭಾರಿ ಮಳೆ ಆಗುವ ಮುನ್ಸೂಚನೆ ಇರುವುದರಿಂದ ಎರಡು ದಿನ 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಈ ವೇಳೆ ತಾಪಮಾನ ಗರಿಷ್ಠ 31 ಡಿಗ್ರಿ ಸೆಲ್ಸಿಯಸ್ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುರುವಾರ ಅಧಿಕ ಮಳೆ ದಾಖಲು
ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆಯಿಂದ ಗುರುವಾರ ಬೆಳಗ್ಗೆ (8.30am) ವರೆಗೆ ಅಧಿಕ ಮಳೆ ಸುರಿದಿದೆ. ನಗರದ ಶೆಟ್ಟಿಹಳ್ಳಿ, ಹೊರಮಾವು, ಎಚ್.ಬಿ. ಬಡಾವಣೆ, ಪುಲಕೇಶಿ ನಗರ ಸೇರಿದಂತೆ ಕೆಲವೆಡೆ ಜೋರು ಮಳೆ ದಾಖಲಾಗಿದೆ. ಕೆಲವೆಡೆ ಮರದ ಕೊಂಬೆಗಳು ಧರೆಗುರುಳಿವೆ. ಒಟ್ಟು ಗರಿಷ್ಠ 101ಮಿ.ಮೀ.ಮಳೆ ದಾಖಲಾಗಿರುವುದಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.












Click it and Unblock the Notifications