ಸ್ಥಳೀಯ ಸಂಸ್ಥೆ ಚುನಾವಣೆ; ಯಾವ ಪಕ್ಷಕ್ಕೆ ಎಷ್ಟು ಸೀಟು?
ಬೆಂಗಳೂರು, ಡಿಸೆಂಬರ್ 30; ಕರ್ನಾಟಕದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಗುರುವಾರ ಪ್ರಕಟವಾಗಿದೆ. ಯಾರಿಗೆ ಹಿನ್ನಡೆಯಾಗಿದೆ, ಯಾರಿಗೆ ಎಷ್ಟು ಸ್ಥಾನ ಸಿಕ್ಕಿದೆ ಎಂಬ ಚರ್ಚೆಗಳು ಜೋರಾಗಿವೆ. ವಿವಿಧ ಪಕ್ಷದ ನಾಯಕರು ಫಲಿತಾಂಶವನ್ನು ತಮ್ಮ ನಿಲುವಿನಂತೆ ವಿಶ್ಲೇಷಣೆ ಮಾಡುತ್ತಿದ್ದಾರೆ.
ಗುರುವಾರ 34 ಪಟ್ಟಣ ಪಂಚಾಯಿತಿ, 19 ಪುರಸಭೆ ಮತ್ತು 5 ನಗರಸಭೆಯ ಒಟ್ಟು 1185 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ನಡೆಯಿತು. ಯಾರಿಗೆ ಎಷ್ಟು ಸ್ಥಾನಗಳು ಸಿಕ್ಕಿವೆ ಎಂಬ ಮಾಹಿತಿ ಇಲ್ಲಿದೆ.
ಪಟ್ಟಣ ಪಂಚಾಯಿತಿಯ ಒಟ್ಟು ಸ್ಥಾನಗಳು 577. ಇವುಗಳಲ್ಲಿ ಬಿಜೆಪಿ 194, ಕಾಂಗ್ರೆಸ್ 236, ಜೆಡಿಎಸ್ 12 ಮತ್ತು ಸ್ವತಂತ್ರ ಅಭ್ಯರ್ಥಿಗಳು 135 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.

ಪುರಸಭೆಯ ಒಟ್ಟು ಸ್ಥಾನಗಳು 441. ಇವುಗಳಲ್ಲಿ ಬಿಜೆಪಿ 176, ಕಾಂಗ್ರೆಸ್ 201, ಜೆಡಿಎಸ್ 21, ಸ್ವತಂತ್ರ ಅಭ್ಯರ್ಥಿಗಳು 43ರಲ್ಲಿ ಗೆಲುವು ಕಂಡಿದ್ದಾರೆ.
ನಗರಸಭೆಯ ಒಟ್ಟು ಸ್ಥಾನಗಳು 166. ಬಿಜೆಪಿ 67, ಕಾಂಗ್ರೆಸ್ 61, ಜೆಡಿಎಸ್ 12 ಮತ್ತು ಸ್ವತಂತ್ರ ಅಭ್ಯರ್ಥಿಗಳು 26 ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯ ಬಂಕಾಪುರ ಪುರಸಭೆ ಮತ್ತು ಗುತ್ತಲ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ವಶವಾಗಿದ್ದು, ಬಿಜೆಪಿಗೆ ಭಾರೀ ಮುಖಭಂಗವಾಗಿದೆ.
ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ-ಸವಣೂರ ಕ್ಷೇತ್ರದ ವ್ಯಾಪ್ತಿಯ ಬಂಕಾಪುರ ಪುರಸಭೆಯ 23 ಸ್ಥಾನಗಳಲ್ಲಿ ಕಾಂಗ್ರೆಸ್ 14, ಬಿಜೆಪಿ 7ರಲ್ಲಿ ಜಯಗಳಿಸಿದ್ದು, 2 ಸ್ಥಾನ ಪಕ್ಷೇತರರ ಪಾಲಾಗಿದೆ.
ಗುತ್ತಲ ಪಟ್ಟಣ ಪಂಚಾಯಿತಿಯ ಒಟ್ಟು 18 ಸ್ಥಾನಗಳಲ್ಲಿ ಕಾಂಗ್ರೆಸ್ 11, ಬಿಜೆಪಿ 6 ಮತ್ತು ಪಕ್ಷೇತರ ಅಭ್ಯರ್ಥಿ 1 ಸ್ಥಾನದಲ್ಲಿ ಗೆಲವು ಸಾಧಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯ ಕೇತಿಗಾನಹಳ್ಳಿಯ ತೋಟದ ಮನೆ ಇರುವುದು ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ. ಕೋವಿಡ್ ಸಂದರ್ಭದಿಂದ ಇದೇ ಮನೆಯಲ್ಲಿ ಅವರು ವಾಸ್ತವ್ಯ ಹೂಡಿದ್ದಾರೆ. ಬಿಡದಿ ಪುರಸಭೆಯ 23 ವಾರ್ಡ್‍ಗಳಲ್ಲಿ 14 ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಈ ಮೂಲಕ ಪುರಸಭೆ ಅಧಿಕಾರದ ಚುಕ್ಕಾಣಿ 2ನೇ ಬಾರಿಗೆ ಜೆಡಿಎಸ್ ಪಾಲಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 9 ವಾರ್ಡಗಳಲ್ಲಿ ಗೆಲುವು ಕಂಡಿದ್ದಾರೆ. ಬಿಜೆಪಿ ಸಾಧನೆ ಶೂನ್ಯ.
ಮುಖ್ಯಮಂತ್ರಿಗಳ ಪ್ರತಿಕ್ರಿಯೆ; ಫಲಿತಾಂಶದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ನನ್ನ ಕ್ಷೇತ್ರದಲ್ಲಿ ಶೇ 65ಕ್ಕಿಂತ ಹೆಚ್ಚು ಮತದಾರರು ಅಲ್ಪಸಂಖ್ಯಾತರಾಗಿದ್ದಾರೆ. ಹೀಗಾಗಿ ನಾವು ಯಾವತ್ತೂ ಗೆದ್ದಿಲ್ಲ. ಆದರೆ ಅಭಿವೃದ್ಧಿಯ ವಿಚಾರದಲ್ಲಿಮಾತ್ರ ನಾನು ಯಾವುದನ್ನೂ ಲೆಕ್ಕಿಸದೇ ಗಮನಹರಿಸಿದ್ದೇನೆ. ಮುಂದಿನ ಬಾರಿ ಗೆಲ್ಲುವ ಭರವಸೆ ಹೊಂದಿದ್ದೇವೆ" ಎಂದರು.
ಸಿದ್ದರಾಮಯ್ಯ ಪ್ರತಿಕ್ರಿಯೆ; ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. "ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 1,187 ಸ್ಥಾನಗಳ ಪೈಕಿ 500ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ ಎಂಬುದನ್ನು ಈ ಫಲಿತಾಂಶ ಇನ್ನೊಮ್ಮೆ ಸಾಬೀತು ಮಾಡಿದೆ" ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಪ್ರತಿಕ್ರಿಯೆ; ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಚ್. ಡಿ. ಕುಮಾರಸ್ವಾಮಿ, "ರಾಜ್ಯದ ಹಲವು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡುವ ಮೂಲಕ ಜೆಡಿಎಸ್ ಕಥೆ ಮುಗಿದೇ ಹೋಯಿತು ಎನ್ನುವವರಿಗೆ ಮತದಾರರು ಉತ್ತರ ನೀಡಿದ್ದಾರೆ" ಎಂದರು.
ಡಿ. ಕೆ. ಶಿವಕುಮಾರ್ ಹೇಳಿಕೆ; ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, "ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ ಎಂಬುದು ಈಚಿನ ಚುನಾವಣೆಗಳ ಫಲಿತಾಂಶವೇ ಸಾಕ್ಷಿ. ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಇದಕ್ಕೆ ಪೂರಕ ಎನ್ನುವಂತಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವುದರಲ್ಲಿ ಸಂಶಯವಿಲ್ಲ. ಅಪಾರ ಜನಪರ ಬೆಂಬಲ ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ರಾಜ್ಯದ ಮತದಾರರಿಗೆ ಧನ್ಯವಾದಗಳು" ಎಂದು ಹೇಳಿದ್ದಾರೆ.












Click it and Unblock the Notifications