Karnataka Lorry Strike: ರಾಜ್ಯದ ಸರಕು ಸೇವೆಗಳ ಮೇಲೆ ದುಷ್ಪರಿಣಾಮ, ಬೆಲೆ ಹೆಚ್ಚಳ ನಿರೀಕ್ಷೆ
ಬೆಂಗಳೂರು, ಏಪ್ರಿಲ್ 15: ಕರ್ನಾಟಕದಲ್ಲಿ ಸೋಮವಾರ ತಡರಾತ್ರಿಯಿಂದ ವಿವಿಧ ಬಗೆಯ ಸರಕು ಸೇವೆಗಳ ಪೂರೈಕೆ ಸ್ಥಗಿತಗೊಂಡಿದೆ. ಕಾರಣ ಮಧ್ಯ ರಾತ್ರಿಯಿಂದಲೇ ರಾಜ್ಯ ಲಾರಿ ಮಾಲೀಕರು ಸೇರಿದಂತೆ ಒಟ್ಟು 10ಕ್ಕೂ ಹೆಚ್ಚು ಸಂಘಟನೆಗಳಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಲಾಗಿದೆ. ಇಂಧನ ಮೇಲಿನ ಬೆಲೆ ಏರಿಕೆ ಸೇರಿದಂತೆ ಕೆಲ ಬೇಡಿಕೆ ಈಡೇರಿಕೆ ಆಗ್ರಹಿಸಿ ಸರಕು ಸೇವೆಯ ಲಾರಿ ಮಾಲೀಕರು ಪೂರ್ವ ನಿರ್ಧಾರದಲ್ಲಿ ಮುಷ್ಕರ ನಡೆಸುತ್ತಿದ್ದಾರೆ.
ರಾಜ್ಯ ಲಾರಿ ಮಾಲೀಕರ ಸಂಘದೊಂದಿಗೆ ಮುಷ್ಕರದಲ್ಲಿ ಹತ್ತಕ್ಕೂ ಹೆಚ್ಚು ಸಂಘಟನೆಗಳ ಸದಸ್ಯರು ಕೈ ಜೋಡಿಸಿದ್ದಾರೆ. ಇಂದಿನಿಂದಲೇ ಬೇರೆ ಬೇರೆ ರಾಜ್ಯಗಳಿಂದ ಬರುವ ಸರಕು ಸೇವೆ ನಿಲ್ಲಲಿದೆ. ರಾಜ್ಯದಲ್ಲಿ ಸಿಮೆಂಟ್, ಜಲ್ಲಿ ಕಲ್ಲು, ಮರಳು, ಹಾಲು, ಇಂಧನ ಪೂರೈಕೆ ಮುಂತಾದ ಸರಕು ಸೇವೆ ಸಂಪೂರ್ಣವಾಗಿ ಬಂದ್ ಆಗಲಿದೆ. ರಾಜ್ಯಾದ್ಯಂತ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಸಾಕಷ್ಟು ವ್ಯತ್ಯಯವಾಗಿ, ಜನ ಜೀವನ ದುಸ್ತರವಾಗುವ ಸಾಧ್ಯತೆ ಇದೆ. ಈಗಾಗಲೇ ಮಂಗಳೂರು, ಬೆಂಗಳೂರುಕ, ಬೆಳಗಾವಿ, ಬಳ್ಳಾರಿ, ಕೊಪ್ಪಳ ಭಾಗದಲ್ಲಿ ಲಾರಿಗಳ ಸರಕು ಸಾಗಾಟ ನಿಂತಿದೆ.

ಲಾರೀ ಮಾಲೀಕರ ಬೇಡಿಕೆಗಳು..
ರಾಜ್ಯದಲ್ಲಿ ಕಳೆದ 7 ತಿಂಗಳಲ್ಲಿ ಡೀಸೆಲ್ ದರ 5.50 ರೂಪಾಯಿ ಏರಿಕೆ ಆಗಿದೆ. ಈ ಏರಿಕೆ ಸರಿಯಾದ ಕ್ರಮವಲ್ಲ ಎಂದಿರುವ ಲಾರಿ ಮಾಲೀಕರು ಇದು ಸೇರಿದಂತೆ ಒಟ್ಟು ಐದು ಬೇಡಿಕೆ ಈಡೇರಿಸಬೇಕೆಂದು ಫೆಡರೇಷನ್ ಆಫ್ ಕರ್ನಾಟಕ ಲಾರಿ ಮಾಲೀಕರ ಮತ್ತಿತರು ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿವೆ.
ಇಂಧನ ಮೇಲಿನ ಅತೀಯಾದ ದರ ಏರಿಕೆ, ಟೋಲ್ ಶುಲ್ಕ ಹೊರೆ ಇಳಿಕೆ, ವಾಹನ ವಿಮೆ ದರ ನಿಯಂತ್ರಣ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂಬುದು ಲಾರಿ ಮಾಲೀಕರ ಪ್ರಮುಖ ಬೇಡಿಕೆ ಆಗಿವೆ. ಮಂಗಳೂರು ಬಂದರಿನಿಂದ ಕಲ್ಲಿದ್ದಲು ಸಾಗಾಟ ನಿಂತಿದೆ, ಬೆಳಗಾವಿ ಮತ್ತು ಬೆಂಗಳೂರು, ಬಳ್ಳಾರಿಗಳಲ್ಲಿ, ಮಾರುಕಟ್ಟೆಗಳಲ್ಲಿ, ಯಶವಂತಪುರ ಎಪಿಎಂಸಿಗಳಲ್ಲಿ ಲಾರಿಗಳು ಸಂಚಾರ ನಡೆಸದೇ ನಿಂತಿವೆ. ರಾಜ್ಯಾದ್ಯಂತ ಸರಕು ಸೇವೆಯ ಲಾರಿ ಮಾಲೀಕರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ವ್ಯಾಪಾರ ವಹೀವಾಟಿನ ಮೇಲೆ ಹೊಡೆತ ಬೀಳಲಿದೆ. ಸರ್ಕಾರ ಮಧ್ಯ ಪ್ರವೇಶಿಸದೇ ಹೋದಲ್ಲಿ ರಾಜ್ಯದ ಆರ್ಥಿಕತೆ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಲಿದೆ.

ಸೋಮವಾರ ರಾತ್ರಿ ಲಾರಿ ಫೆಡರೇಷನ್ ಸೇರಿದಂತೆ ವಿವಿಧ ಸಂಘಟನೆಗಳು ಮುಖಂಡರೊಂದಿಗೆ ಕರೆ ಮಾಡಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಮಾತನಾಡಿದ್ದಾರೆ. ಕಳೆದೊಂದು ದಶಕದಲ್ಲಿ ಕೇಂದ್ರ ಸರ್ಕಾರ ಕಚ್ಚಾ ತೈಲ ಕಡಿಮೆ ಆಗಿದ್ದರೂ ಸಹ ಹಲವು ಬಾರಿ ಇಂಧನ ದರ ಏರಿಕೆ ಮಾಡಿದೆ. ಇದರ ವಿರುದ್ಧ ಮುಷ್ಕರ ನಡೆಸದ ನೀವು ರಾಜ್ಯ ಸರ್ಕಾರದಿಂದ ಅತ್ಯಲ್ಪ (ಲೀಟರ್ 2ರೂ.) ಏರಿಕೆ ಮಾಡಿದ್ದರಿಂದ ಮುಷ್ಕರ ಆರಂಭಿಸಿರುವುದು ಸರಿಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು ತಾವು ಮುಷ್ಕರ ಕೈಗೊಂಡ ಲಾರಿ ಮಾಲೀಕರ ಜೊತೆಗೆ ಸಮಾಲೋಚಿಸಲು ಸಿದ್ಧರಿದ್ದೇವೆ ಎಂದಿದ್ದಾರೆ. ಆದರೆ ಮುಷ್ಕರ ಕೈ ಬಿಡದಿರುವ ಮಾಲೀಕರು ನಿರ್ಧರಿಸಿದಂತಿದೆ. ಹೀಗಾಗಿ ಅವರು ಸಂಧಾನಕ್ಕೆ, ಭರವಸೆಗೆ ಒಪ್ಪಿ ಮುಷ್ಕರ ಹಿಂಪಡೆಯಲು ಸಿದ್ಧರಾಗಿಲ್ಲ ಎಂಬುದು ಸ್ಪಷ್ಟವಾಗಿದೆ.












Click it and Unblock the Notifications