Bus Fare: ಬಸ್ ಟಿಕೆಟ್ ದರ ಏರಿಕೆ ಬಗ್ಗೆ ಸಾರಿಗೆ ಸಚಿವ ಮಹತ್ವದ ಮಾಹಿತಿ
ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಸೇರಿದಂತೆ ಸರ್ಕಾರಿ ಬಸ್‌ಗಳಲ್ಲಿ ಟಿಕೆಟ್ ದರ ಏರಿಕೆ ವಿಚಾರ ಮುನ್ನೆಲೆಗೆ ಬಂದಿದೆ. ಕೆಲವರು ಹೊಸ ವರ್ಷದಿಂದಲೇ ಟಿಕೆಟ್ ದರವನ್ನು ರಾಜ್ಯ ಸರ್ಕಾರ ಏರಿಕೆ ಮಾಡಲಿದೆ ಎಂದು ಹೇಳುತ್ತಿದ್ದರು. ಈ ಬಗ್ಗೆ ಖುದ್ದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.
ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಟಿಕೆಟ್ ದರ ಹೆಚ್ಚಿಸುವ ಕುರಿತು ಪ್ರಸ್ತಾವನೆ ಬರಬೇಕಿದೆ. ಅದು ಬಂದ ನಂತರ ಈ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಬಸ್ ಟಿಕೆಟ್ ದರ ಏರಿಕೆ ಬಗ್ಗೆ ಯಾರು ಬೇಕಾದರೂ ಸಲಹೆ ಕೊಡಬಹುದು. ಆದರೆ, ಸಾರಿಗೆ ನಿಗಮಗಳಿವೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿ ನಾಲ್ಕು ನಿಗಮಗಳೂ ಈ ಬಗ್ಗೆ ಪ್ರಸ್ತಾವನೆ ಮುಂದಿಡಬೇಕು ಎಂದಿದ್ದಾರೆ.

ನಾಲ್ಕೂ ನಿಗಮದವರು ಅಲ್ಲಿನ ಖರ್ಚು ವೆಚ್ಚಗಳನ್ನು ಪರಿಶೀಲಿಸಿ, ಟಿಕೆಟ್ ದರ ಎಷ್ಟು ಹೆಚ್ಚಳ ಮಾಡಬೇಕು ಎಂಬ ಕುರಿತಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸುತ್ತಾರೆ. ಆ ನಂತರ ಸರ್ಕಾರ ದರ ಏರಿಕೆ ಮಾಡಬೇಕೇ, ಬೇಡವೇ ಎಂಬುದನ್ನು ನಿರ್ಧರಿಸಲಿದೆ ಎಂದು ಹೇಳಿದ್ದಾರೆ.
ಇದೇ ಪದ್ಧತಿಯನ್ನು ಮೊದಲಿನಿಂದಲೂ ಪಾಲಿಸಿಕೊಂಡು ಬರಲಾಗಿದೆ. ನಾಲ್ಕು ಸಾರಿಗೆ ನಿಗಮಗಳ ಅಧ್ಯಕ್ಷರು, ಉಪಾಧ್ಯಕ್ಷರು, ಮಂಡಳಿಯಲ್ಲಿರುವ ಎಲ್ಲ ಸದಸ್ಯರು, ತಮ್ಮ ನಿಗಮ ವ್ಯಾಪ್ತಿಯಲ್ಲಿನ ಖರ್ಚು ಹಾಗೂ ವೆಚ್ಚಗಳನ್ನು ಪರಿಶೀಲಿಸುತ್ತಾರೆ. ಇದರ ಆಧಾರದಲ್ಲಿಯೇ ಅವರು ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸುತ್ತಾರೆ ಎಂದಿದ್ದಾರೆ.

ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳು ನಷ್ಟದಲ್ಲಿವೆ ಎಂದು ಬಿಜೆಪಿ ಟೀಕಿಸಿತ್ತು. ಇದಕ್ಕೆ ತಿರುಗೇಟು ನೀಡಿದ್ದ ರಾಮಲಿಂಗಾರೆಡ್ಡಿ ಅವರು, ಶಕ್ತಿ ಯೋಜನೆ ಕರ್ನಾಟಕ ಸರ್ಕಾರದ ಮಹಿಳಾ ಸಬಲೀಕರಣ ಕೆಡೆಗಿನ ದಿಟ್ಟ ಹೆಜ್ಜೆಯಾಗಿದೆ. ನಮಗೆ ನಮ್ಮ ಅಭಿವೃದ್ದಿ ಕಾರ್ಯಗಳ ಅಂಕಿಅಂಶಗಳೇ ನಮ್ಮ ಸಾಧನೆಯ ಮಾನದಂಡ ಎಂಬ ಅಚಲವಾದ ನಂಬಿಕೆ ಎಂದಿದ್ದರು.
ಶಕ್ತಿ ಯೋಜನೆಗೆ ಸಂಬಂಧಪಟ್ಟಂತೆ ಸರ್ಕಾರವು ಕೆಎಸ್ಆರ್ಟಿಸಿಗೆ 2481 ಕೋಟಿ , ಬಿಎಂಟಿಸಿಗೆ 1126 ಕೋಟಿ, ವಾಯುವ್ಯ ಸಾರಿಗೆಗೆ 1613 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆಗೆ 1321 ಕೋಟಿ ಸೇರಿದಂತೆ ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ 6,543 ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ 2023ರ ಜೂನ್ನಿಂದ 2024ರ ನವೆಂಬರ್ವರೆಗೆ ಬಿಡುಗಡೆ ಮಾಡಿದೆ ಎಂದು ಲೆಕ್ಕ ನೀಡಿದ್ದರು.

ಈವರೆಗೆ ಇಷ್ಟು ದೊಡ್ಡ ಮೊತ್ತದ ಅನುದಾನ ಬಿಡುಗಡೆ ಮಾಡಿರುವ ನಮಗೆ 414 ಕೋಟಿ ರೂಪಾಯಿ ಬಿಡುಗಡೆ ಮಾಡುವುದು ಕಷ್ಟವೇ? ತಮ್ಮ ಬಿಜೆಪಿ ಸರ್ಕಾರ ಬಿಟ್ಟು ಹೋಗಿದ್ದ 5,900 ಕೋಟಿ ನಷ್ಟದಿಂದ ಹೊಣೆಗಾರಿಕೆ ಬಾಕಿಗಳಾದ ಡೀಸೆಲ್ ಹಣ, ಸಿಬ್ಬಂದಿ ಭವಿಷ್ಯ ನಿಧಿ, ಖರೀದಿ ಸಾಮಗ್ರಿಗಳ ಹಣ ಸೇರಿ ಎಲ್ಲ ಬಾಕಿಗಳನ್ನು ತೀರಿಸುವ ಹೊಣೆಗಾರಿಕೆ ಹೊತ್ತುಕೊಂಡು ನಾವು ಸಂಸ್ಥೆಗಳನ್ನು ಮುನ್ನಡೆಸಬೇಕಾಗಿದೆ ಎಂದು ತಿರುಗೇಟು ನೀಡಿದ್ದರು.












Click it and Unblock the Notifications