KSRTC: ಮಾರ್ಚ್ 7ಕ್ಕೆ ಸಾರಿಗೆ ನೌಕರರ ಜತೆ ರಾಮಲಿಂಗಾ ರೆಡ್ಡಿ ಮಹತ್ವದ ಸಭೆ
ಬೆಂಗಳೂರು, ಮಾರ್ಚ್ 06: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಸೇರಿದಂತೆ ಒಟ್ಟು ನಾಲ್ಕು ಸಾರಿಗೆ ನಿಗಮದ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸುತ್ತಿದ್ದಾರೆ. ಇದರ ಬೆನ್ನಲ್ಲೆ ಸರ್ಕಾರ ಕೊಟ್ಟ ಭರವಸೆಯಂತೆ ನೌಕರರ ಜತೆ ಮಾತುಕತೆಗೆ ಮುಂದಾಗಿದೆ. ಈ ಸಂಬಂಧ ನಾಳೆ ಗುರುವಾರ ಮಾರ್ಚ್ 7ರಂದು ಮಹತ್ವದ ಸಭೆ ಕರೆದಿದೆ.
ಕರ್ನಾಟಕ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆಗೆ ಮಹತ್ವದ ಸಭೆ ನಡೆಯಲಿದೆ. ಈ ಹಿಂದೆ ವೇತನ ತಾರತಮ್ಯ ಸರಿಪಡಿಸಬೇಕು, ಸಮಾನ ವೇತನ ನೀಡಬೇಕು, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುಷ್ಕರ ಕೈಗೊಂಡಿದ್ದ ಎಲ್ಲ ಸಾರಿಗೆ ನೌಕರರ ಸಂಘಟನೆಗಳನ್ನು ಸಭೆಗೆ ಆಹ್ವಾನಿಸಲಾಗಿದೆ.

ಇದೇ ವಿಚಾರವಾಗಿ 2020 ಮತ್ತು 2021ರಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಆಗ ಹಲವರ ಮೇಲೆ ಕೇಸು ದಾಖಲಾಗಿದ್ದು, ಸೇವೆಯಿಂದ ಅಮಾನತು, ವಜಾದಂತಹ ಶಿಕ್ಷೆ ಅನುಭವಿಸಿದ್ದರು. ಅಂದು ಇದ್ದ ಬಿಜೆಪಿ ಸರ್ಕಾರ ನೌಕರರ ಮೂಗಿಗೆ ತುಪ್ಪ ಸವರಿತ್ತು.
ಬೆಂಗಳೂರು ಚಲೋ ಘೋಷಿಸಿದ್ದ ನೌಕರರು
ಬೇಡಿಕೆ ಈಡೇರದ ಕಾರಣ ಸಾರಿಗೆ ಎಲ್ಲ ನೌಕರರು ಮತ್ತೆ ಪ್ರತಿಭಟನೆಗೆ ಚಿಂತನೆ ನಡೆಸಿದ್ದಾರೆ. ಎಲ್ಲ ನಿಗಮಗಳ ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಮುಖಸ್ಥರು ಇದೇ ಮಾರ್ಚ್ 4ರಂದು ಬೆಂಗಳೂರು ಚಲೋ, ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಹೇಳಿದ್ದರು. ಆದರೆ ಕಾರಣಾಂತರಗಳಿಂದ ಅವು ನಡೆದಿಲ್ಲ.
ಇದೆಲ್ಲ ಬೆಳವಣಿಗೆ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ಸಾರಿಗೆ ಇಲಾಖೆಯು ಈ ಹಿಂದೆ ತಾನು ಬೇಡಿಕೆ ಈಡೇರಿಕೆಗಾಗಿ ನೌಕರರ ಜೊತೆಗೆ ಮಾತುಕತೆ ನಡೆಸುವುದಾಗಿ ತಿಳಿಸಿತ್ತು. ಅದರಂತೆ ಸಾರಿಗೆ ಸಚಿವರು ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಮುಂದಾಗಿದೆ. ಈ ಮೂಲಕ ಸಚಿವರು ನೌಕರರ ಕುಂದು ಕೊರತೆ ಆಲಿಸಲಿದ್ದಾರೆ. ಇದು ಪ್ರಾಥಮಿಕ ಹಂತದ ಸಭೆಯಾಗಿರಲಿದ್ದು, ಇಲ್ಲಿ ಮಹತ್ವದ ನೀರ್ಣಯ ಕೈಗೊಳ್ಳುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಸಭೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KKRTC) ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ನೌಕರರ ಮುಖ್ಯಸ್ಥರಿಗೆ, ವಿವಿಧ ನೌಕರರ ವೇದಿಕೆ, ಸಂಘಟನೆಗಳ ಮುಖ್ಯಸ್ಥರನ್ನು ಸಭೆಗೆ ಆಹ್ವಾನಿಸಿ ಸಭೆ ಸೂಚನಾ ಪತ್ರ ಹೊರಡಿಸಲಾಗಿದೆ.
ಶಿವರಾತ್ರಿಗೆ ವಿಶೇಷ ಬಸ್ ವ್ಯವಸ್ಥೆ
ಮಾರ್ಚ್ 8ರಂದು ಶಿವರಾತ್ರಿ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮಾರ್ಚ್ 7ರಿಂದ 10ರವರೆಗೆ ಹೆಚ್ಚುವರಿ ವಿಶೇಷ ಬಸ್‌ಗಳನ್ನು ಬಿಡಲಿದೆ. ಇದರಿಂದ ಬೆಂಗಳೂರಿನಿಂದ ರಾಜ್ಯದ ಬೇರೆ ಬೇರೆ ಸ್ಥಳಗಳಿಗೆ ತೆರಳುವ ನೌಕರರಿಗೆ ಅನುಕೂಲವಾಗಲಿದೆ.
ಬೆಂಗಳೂರಿನಿಂದ ಹೈದರಾಬಾದ್, ತೆಲಂಗಾಣ, ಮಂಗಳೂರು, ಕಾರವಾರ, ಹುಬ್ಬಳ್ಳಿ, ಬೆಳಗಾವಿ, ರಾಯಚೂರು, ಕೊಪ್ಪಳ್ಳ, ಕಲಬುರಗಿ, ಶೃಂಗೇರಿ, ಹೊರನಾಡು, ದಾವಣಗೆರೆ, ಧಾರವಾಡ, ಗೋಕರ್ಣ, ಶಿರಸಿ, ಯಾದಗಿರಿ, ತಿರುಪತಿ ಸೇರಿದಂತೆ ವಿವಿಧೆಡೆ ಈ ಬಸ್‌ಗಳು ಮೂರು ದಿನ ಸೇವೆ ನೀಡಲಿವೆ ಎಂದು KSRTC ಮಾಹಿತಿ ನೀಡಿದೆ.












Click it and Unblock the Notifications