KSRTC: ಉಪ ಚುನಾವಣೆ ಮುಗಿದ ಕೂಡಲೇ ಸರ್ಕಾರಿ ಬಸ್ ದರ ಹೆಚ್ಚಳ?
ಬೆಂಗಳೂರು, ನವೆಂಬರ್ 12: 'ಶಕ್ತಿ' ಯೋಜನೆ ಬಳಿಕ ಕರ್ನಾಟಕದ ಸಾರಿಗೆ ನಿಗಮಗಳು ಲಾಭದಲ್ಲಿವೆ ಎಂದು ಸಾರಿಗೆ ಸಚಿವರು, ಸರ್ಕಾರ ಪದೇ ಪದೇ ಹೇಳುತ್ತಿದೆ. ಆದರೆ ಈಗ ನಷ್ಟದ ನೆಪವೊಡ್ಡಿ ಸರ್ಕಾರಿ ಬಸ್‌ಗಳ ಪ್ರಯಾಣ ದರ ಏರಿಕೆ ಮಾಡಲು ತಯಾರಿ ನಡೆದಿದೆ. ಅಂತಿಮ ಒಪ್ಪಿಗೆ ಸಿಕ್ಕಿದರೆ ಪ್ರಯಾಣ ದರ ಶೇ 12ರಷ್ಟು ಹೆಚ್ಚಳವಾಗಲಿದೆ ಎಂಬ ಮಾಹಿತಿ ಇದೆ. ಈ ಕುರಿತು ಪ್ರತಿಪಕ್ಷ ನಾಯಕ ಆರ್. ಅಶೋಕ ಸರ್ಕಾರವನ್ನು ಟೀಕಿಸಿದ್ದಾರೆ.
ಬಿಎಂಟಿಸಿ, ಕೆಎಸ್ಆರ್‌ಟಿಸಿ, ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು 4 ವರ್ಷಗಳಿಂದ ಪ್ರಯಾಣ ದರ ಏರಿಕೆ ಮಾಡಿಲ್ಲ. ನಿರ್ವಹಣಾ ವೆಚ್ಚ, ಇಂಧನ ವೆಚ್ಚ, ವೇತನ ಹೆಚ್ಚಾಗುತ್ತಿದೆ. ಸಾರಿಗೆ ಸಂಸ್ಥೆಗಳನ್ನು ನಷ್ಟದಿಂದ ಹೊರ ತರಲು ಪ್ರಯಾಣ ದರ ಏರಿಕೆ ಮಾಡಬೇಕು ಎಂದು ಬೇಡಿಕೆ ಸಲ್ಲಿಸಲಾಗಿದೆ.

ಮೂಲಗಳ ಮಾಹಿತಿ ಪ್ರಕಾರ ಶೇ 25ರಷ್ಟು ಪ್ರಯಾಣ ದರವನ್ನು ಏರಿಕೆ ಮಾಡಲು ಅನುಮತಿ ಕೋರಿ ಸಾರಿಗೆ ನಿಗಮಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿವೆ. ಈ ಕಡತ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಇದ್ದು, ಮೂರು ಕ್ಷೇತ್ರಗಳ ಉಪ ಚುನಾವಣೆ ಬಳಿಕ ಈ ಕುರಿತು ಸರ್ಕಾರ ತೀರ್ಮಾನವನ್ನು ಕೈಗೊಳ್ಳುವ ನಿರೀಕ್ಷೆ ಇದೆ.
ಸಿಎಂ ನಿರ್ಧಾರ ಕೈಗೊಳ್ಳಬೇಕಿದೆ: 2019ರಲ್ಲಿ ಕೆಎಸ್ಆರ್‌ಟಿಸಿ ಪ್ರಯಾಣ ದರವನ್ನು ಏರಿಕೆ ಮಾಡಲಾಗಿತ್ತು. ಬಳಿಕ ಹಲವು ಬಾರಿ ಡೀಸೆಲ್ ದರಗಳು ಹೆಚ್ಚಾಗಿವೆ. ನೌಕರರ ಸಂಬಳ, ಬಿಡಿ ಭಾಗಗಳ ದರ ಏರಿಕೆಯಾಗಿದೆ. ಆದ್ದರಿಂದ ಸಾರಿಗೆ ನಿಗಮಗಳಿಗೆ ವೆಚ್ಚವೂ ಅಧಿಕವಾಗಿದೆ. ಹಾಗಾಗಿ ಶೇ 25ರಷ್ಟು ಪ್ರಯಾಣ ದರ ಏರಿಕೆ ಮಾಡಬೇಕು ಎಂದು ಸಾರಿಗೆ ನಿಗಮಗಳು ಬೇಡಿಕೆ ಸಲ್ಲಿಸಿವೆ.
ಕೆಎಸ್ಆರ್‌ಸಿಟಿ ನೌಕರರ ವೇತನವನ್ನು 2024ರ ಅಂತ್ಯದಲ್ಲಿ ಮಾಡಬೇಕಿದೆ. ಆಗ ನಿಗಮದ ವೆಚ್ಚ ಇನ್ನಷ್ಟು ಹೆಚ್ಚಾಗಲಿದೆ. ಆದ್ದರಿಂದ ಪ್ರಯಾಣ ದರ ಏರಿಕೆ ಮಾಡುವ ಮೂಲಕ ನಿಗಮಕ್ಕೆ ಆರ್ಥಿಕ ಚೈತನ್ಯಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪ್ರಸ್ತಾವನೆಯಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಕುರಿತು ಮಾತನಾಡಿ, "ಸಾರಿಗೆ ನಿಗಮಗಳು ಪ್ರಯಾಣ ದರ ಏರಿಕೆಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸುತ್ತಿವೆ. ಸುಮಾರು ವರ್ಷಗಳಿಂದ ಪ್ರಯಾಣ ದರವನ್ನು ಏರಿಕೆ ಮಾಡಿಲ್ಲ. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಉಪ ಚುನಾವಣೆ ಬಳಿಕ ಈ ಕುರಿತು ಸಭೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುತ್ತದೆ" ಎಂದು ಹೇಳಿದ್ದಾರೆ.
ಸಾರಿಗೆ ಸಂಸ್ಥೆಗಳ ಪ್ರಸ್ತಾವನೆಯಂತೆ ಶೇ 25ರಷ್ಟು ಪ್ರಯಾಣದರವನ್ನು ಏರಿಕೆ ಮಾಡಿದರೆ ಜನರ ವಿರೋಧ ಎದುರಿಸಬೇಕಾಗುತ್ತದೆ. ಆದ್ದರಿಂದ ಶೇ 12ರಷ್ಟು ಪ್ರಯಾಣದರ ಏರಿಕೆಗೆ ಸರ್ಕಾರ ಒಪ್ಪಿಗೆ ನೀಡಲಿದೆ ಎಂಬ ಮಾಹಿತಿ ಇದೆ. ಆದರೆ ಅಂತಿಮ ತೀರ್ಮಾನ ಮುಖ್ಯಮಂತ್ರಿಗಳ ಮೇಲಿದೆ.
ಆರ್. ಅಶೋಕ ಟೀಕೆ: ಪ್ರಯಾಣ ದರ ಏರಿಕೆ ಮಾಡುವ ಸುಳಿವು ಸಿಕ್ಕಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ ಸರ್ಕಾರವನ್ನು ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, 'ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳಿಗೆ 3,930 ಕೋಟಿ ರೂಪಾಯಿ ದಾಖಲೆ ಆದಾಯ ಬರುತ್ತದೆ ಎಂದು ಬೊಗಳೆ ಬಿಟ್ಟು ತನ್ನ ಬೆನ್ನು ತಾನೇ ತಟ್ಟಿಕೊಂಡಿದ್ದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಈಗ ಕಳೆದ ತ್ರೈಮಾಸಿಕದಲ್ಲಿ ರೂ. 295 ಕೋಟಿ ನಷ್ಟವಾಗಿದೆ ಎಂಬ ನೆಪವೊಡ್ಡಿ ಟಿಕೆಟ್ ದರವನ್ನ ಶೇ. 25ರಷ್ಟು ಹೆಚ್ಚಿಸಲು ಮುಂದಾಗಿದೆ' ಎಂದು ಟೀಕಿಸಿದ್ದಾರೆ.
'ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೇ, ತಮ್ಮ ಅನುಕೂಲಕ್ಕೆ ತಕ್ಕಂತೆ, ಸುಳ್ಳಿನ ಮೇಲೆ ಸುಳ್ಳು ಹೇಳಿ, ಎಷ್ಟು ದಿನ ಹೀಗೆ ಕನ್ನಡಿಗರಿಗೆ ಮೋಸ ಮಾಡುತ್ತೀರಿ. ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಿ. ಸತ್ಯಾಂಶವನ್ನ ಜನರ ಮುಂದಿಡಿ' ಎಂದು ಅಶೋಕ ಸವಾಲು ಹಾಕಿದ್ದಾರೆ.












Click it and Unblock the Notifications