ಕರ್ನಾಟಕದಲ್ಲಿ 72,000 ಹುದ್ದೆಗಳ ನೇಮಕಾತಿ: ಬೆಂಗಳೂರು, ತುಮಕೂರು, ಮೈಸೂರು, ಮಂಗಳೂರಲ್ಲಿ ಸೆಮಿಕಂಡಕ್ಟರ್ ಕ್ಷೇತ್ರ ಅಭಿವೃದ್ಧಿ

ಕರ್ನಾಟಕದಲ್ಲಿ 72,000 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿರುವುದಾಗಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಹೇಳಿದ್ದಾರೆ. ಅಲ್ಲದೆ ಬೆಂಗಳೂರು, ತುಮಕೂರು, ಮೈಸೂರು, ಮಂಗಳೂರು ನಗರಗಳಲ್ಲಿ ಸೆಮಿಕಂಡಕ್ಟರ್ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವುದಾಗಿಯೂ ಅವರು ಹೇಳಿದ್ದಾರೆ. ಬೆಂಗಳೂರಿನ ಕೃಷ್ಣರಾಜಪುರ ಆವಲಹಳ್ಳಿಯ ಈಸ್ಟ್ ಪಾಯಿಂಟ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ 'ಪದವಿ ಪ್ರದಾನ ಸಮಾರಂಭ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾತನಾಡುವ ವೇಳೆ ದೆಹಲಿಯಲ್ಲಿ ನಡೆದ ಪ್ರತಿಭಟನೆಯನ್ನು ಉಲ್ಲೇಖಿಸಿದ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು, ಅದನ್ನು ಕೇವಲ ಪ್ರತಿಭಟನೆಯಾಗಿ ನೋಡಬಾರದು. ಅವಕಾಶಗಳನ್ನು ಬಯಸುತ್ತಿರುವ ಯುವಜನರ ಬೇಡಿಕೆಗಳ ಪ್ರತಿಬಿಂಬವಾಗಿ ಅರ್ಥೈಸಿಕೊಳ್ಳಬೇಕು. ಯುವಜನರಿಗೆ ಅವಕಾಶಗಳು ಬೇಕು. ನಾವು ಅವರಿಗೆ ತ್ವರಿತವಾಗಿ ಅವಕಾಶಗಳನ್ನು ಒದಗಿಸಬೇಕು. ಈ ವಾಸ್ತವವನ್ನು ನಾವು, ನಮ್ಮ ಸರ್ಕಾರ ಅರ್ಥಮಾಡಿಕೊಂಡಿದೆ ಎಂದರು.

Govt Posts

ಸುಮಾರು ಮೂರು ತಿಂಗಳ ಅವಧಿಯಲ್ಲಿ 72,000 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ಇದು ಆರಂಭವಷ್ಟೇ. ಯುವಜನರು ಸದೃಢ ಭಾರತವನ್ನು ನಿರ್ಮಿಸಲು ಮತ್ತು ದೇಶದ ಮುಂದಿರುವ ಸವಾಲುಗಳನ್ನು ಎದುರಿಸಲು ಅವಕಾಶಗಳನ್ನು ಒದಗಿಸಬೇಕು. ಅವಕಾಶಗಳು ಅನೇಕ ಇವೆ. ಆದರೆ, ಭವಿಷ್ಯದಲ್ಲಿ ಸವಾಲುಗಳೂ ಹೆಚ್ಚಿರಲಿವೆ. ನೀವು ಉತ್ತಮವಾಗಿ ಕಾರ್ಯನಿರ್ವಹಿಸಿ, ಮುಂದಿನ ಸವಾಲುಗಳನ್ನು ಎದುರಿಸಲು ನಿಮ್ಮನ್ನು ನೀವೇ ಸಜ್ಜುಗೊಳಿಸಿಕೊಳ್ಳಬೇಕು ಎಂದು ಪದವೀಧರರಿಗೆ ಸಲಹೆ ನೀಡಿದರು. ಭಾರತದಲ್ಲಿ ಶಿಕ್ಷಣ ಪಡೆದಿರುವುದರ ಬಗ್ಗೆ ವಿದ್ಯಾರ್ಥಿಗಳು ಹೆಮ್ಮೆಪಡಬೇಕು. ಭೌತಶಾಸ್ತ್ರ, ಗಣಿತ, ಅರ್ಥಶಾಸ್ತ್ರ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸೇರಿದಂತೆ ವಿವಿಧ ವಿಷಯಗಳನ್ನು ವಿಶ್ವದ ಪ್ರಮುಖ ವಿಶ್ವವಿದ್ಯಾಲಯಗಳಿಗೆ ಸಮಾನವಾದ ಗುಣಮಟ್ಟದಲ್ಲಿ ಬೋಧಿಸಲಾಗುತ್ತಿದೆ ಎಂದರು.

ಭಾರತವು ಕೃಷಿ ವಿಜ್ಞಾನಿಗಳು ಮತ್ತು ರೈತರ ಪ್ರಯತ್ನದಿಂದ ಎರಡು ದಶಕಗಳಲ್ಲೇ ಆಹಾರ ಧಾನ್ಯಗಳಲ್ಲಿ ಸ್ವಾವಲಂಬನೆ ಸಾಧಿಸಿತು. ಕೃಷಿ ವಿಜ್ಞಾನಿಗಳು ಹೊಸ ಬೆಳೆ ತಳಿಗಳನ್ನು ಅಭಿವೃದ್ಧಿಪಡಿಸಿ, ಸುಧಾರಿತ ಕೃಷಿ ವಿಧಾನಗಳನ್ನು ಪರಿಚಯಿಸಿದರು. ರೈತರು ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಂಡ ಕಾರಣ, ಆಹಾರ ಧಾನ್ಯ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಲು ಕಾರಣವಾಯಿತು ಎಂದರು.

ತಂತ್ರಜ್ಞಾನದ ಬೆಳವಣಿಗೆ ಭಾರತವನ್ನು ವಿಶ್ವದ ಪ್ರಮುಖ ನುರಿತ ಮಾನವ ಸಂಪನ್ಮೂಲ ಮತ್ತು ಸೇವಾ ಪೂರೈಕೆದಾರ ರಾಷ್ಟ್ರಗಳಲ್ಲಿ ಒಂದಾಗಿ ರೂಪಿಸಿದೆ. ದೇಶದಲ್ಲಿ ಸುಮಾರು 6,000 ಎಂಜಿನಿಯರಿಂಗ್ ಕಾಲೇಜುಗಳಿದ್ದು, ಪ್ರತಿವರ್ಷ ಸುಮಾರು 15 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ ಮತ್ತು ಸುಮಾರು 10 ಲಕ್ಷ ಎಂಜಿನಿಯರಿಂಗ್ ಪದವೀಧರರಾಗಿ ಹೊರಹೊಮ್ಮುತ್ತಿದ್ದಾರೆ. ಬೇರೆ ಯಾವುದೇ ದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಹೊರಬರುವುದಿಲ್ಲ. ಸಾಫ್ಟ್‌ವೇರ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಭಾರತೀಯ ಎಂಜಿನಿಯರ್‌ಗಳು ವಿಶ್ವದಾದ್ಯಂತ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಮಾಹಿತಿ ತಂತ್ರಜ್ಞಾನ ಸೇವಾ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮಿದ್ದು, ಈ ಬೆಳವಣಿಗೆಯಲ್ಲಿ ಬೆಂಗಳೂರು ಮಹತ್ವದ ಪಾತ್ರ ವಹಿಸಿದೆ. ಬೆಂಗಳೂರಿನಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳು ಭಾರತೀಯ ಯುವಜನರಿಗೆ ಉದ್ಯೋಗ ನೀಡುವುದಷ್ಟೇ ಅಲ್ಲದೆ, ವಿಶ್ವದ ವಿವಿಧ ರಾಷ್ಟ್ರಗಳಿಗೆ ತಂತ್ರಜ್ಞಾನ ಮತ್ತು ಸೇವೆಗಳನ್ನು ಒದಗಿಸುತ್ತಿವೆ ಎಂದು ಹೇಳಿದರು.

ದೇಶದ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಯುವಜನರು ತಮ್ಮ ಆಲೋಚನೆಗಳು ಮತ್ತು ಪರಿಕಲ್ಪನೆಗಳನ್ನು ಪ್ರಾಯೋಗಿಕ ತಂತ್ರಜ್ಞಾನಗಳಾಗಿ ಪರಿವರ್ತಿಸುತ್ತಿದ್ದಾರೆ. ಅಂತಹ ಹಲವು ತಂತ್ರಜ್ಞಾನಗಳನ್ನು ಪ್ರಮುಖ ಕಂಪನಿಗಳು ಲಕ್ಷಾಂತರ ಡಾಲರ್‌ಗಳಿಗೆ ಖರೀದಿಸಿವೆ. ಬೆಂಗಳೂರು ಮತ್ತು ಕರ್ನಾಟಕದಿಂದ ದೊಡ್ಡ ಪ್ರಮಾಣದಲ್ಲಿ ತಂತ್ರಜ್ಞಾನ ವರ್ಗಾವಣೆ ನಡೆಯುತ್ತಿದೆ. ಕರ್ನಾಟಕದ ಶಿಕ್ಷಣ ಸಂಸ್ಥೆಗಳು, ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (IITs) ಹಾಗೂ ರಾಜ್ಯದ ಸಾಮಾನ್ಯ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಅನೇಕ ಭಾರತೀಯರು ಇಂದು ಜಾಗತಿಕ ಕಂಪನಿಗಳ ಮುಖ್ಯಸ್ಥರಾಗಿದ್ದಾರೆ. ಭಾರತದ ಶಿಕ್ಷಣ ವ್ಯವಸ್ಥೆ, ವಿಶೇಷವಾಗಿ ಕರ್ನಾಟಕದ ಶಿಕ್ಷಣ ವ್ಯವಸ್ಥೆ ಇಂದು ವಿಶ್ವಕ್ಕೆ ನೀಡುತ್ತಿರುವ ಕೊಡುಗೆ ಇದು ಎಂದರು.

ಸೆಮಿಕಂಡಕ್ಟರ್ ಕ್ಷೇತ್ರದ ಅಭಿವೃದ್ಧಿಗೆ ಕರ್ನಾಟಕ ಸರ್ಕಾರವು ಈಗ ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡುತ್ತಿದೆ. ಬೆಂಗಳೂರು, ತುಮಕೂರು, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಘಟಕಗಳನ್ನು ಸ್ಥಾಪಿಸಲು ಭೂಮಿ ನೀಡುವಂತೆ ವಿಶ್ವದ ಹಲವು ಕಂಪನಿಗಳು ಸರ್ಕಾರವನ್ನು ಸಂಪರ್ಕಿಸುತ್ತಿವೆ. ಕರ್ನಾಟಕದಲ್ಲಿ ಹೆಚ್ಚು ಪ್ರತಿಭಾವಂತರು ಇರುವುದರಿಂದ ಎರಡನೇ ಹಂತದ ನಗರಗಳಲ್ಲಿಯೂ ಸಹ ಹೂಡಿಕೆ ಮಾಡಲು ಕಂಪನಿಗಳು ಸಿದ್ಧವಾಗಿವೆ ಎಂದರು.

ಕೃತಕ ಬುದ್ಧಿಮತ್ತೆಯ (AI) ವೇಗದ ಬೆಳವಣಿಗೆಯನ್ನು ಉಲ್ಲೇಖಿಸಿದ ಅವರು, ಲೆಕ್ಕಾಚಾರ, ಸಂಶೋಧನೆ, ಸಮಸ್ಯೆಗಳ ಪರಿಹಾರ ಮತ್ತು ನಿರ್ಧಾರ ಕೈಗೊಳ್ಳುವ ವಿಧಾನಗಳನ್ನು ಎಐ ಸಂಪೂರ್ಣವಾಗಿ ಪರಿವರ್ತಿಸಲಿದೆ. ಪದವೀಧರರು ಇಂತಹ ತಾಂತ್ರಿಕ ಬದಲಾವಣೆಗಳನ್ನು ಎದುರಿಸಲು ಮಾತ್ರವಲ್ಲದೆ, ಅವುಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಹ ಸಜ್ಜಾಗಬೇಕು ಎಂದು ಸಲಹೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+