BA, BSc ವಿದ್ಯಾರ್ಥಿಗಳಿಗೂ Apprenticeship ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧಾರ
ಬೆಂಗಳೂರು: ಪದವಿ ಮುಗಿಸಿದರೂ ಸೂಕ್ತ ಉದ್ಯೋಗ ಸಿಗುತ್ತಿಲ್ಲ ಎಂಬ ವಿದ್ಯಾರ್ಥಿಗಳ ಕೊರಗಿಗೆ ಅಂತ್ಯ ಹಾಡಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕೇವಲ ಬಿ.ಕಾಂ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದ ಉದ್ಯೋಗ ಆಧಾರಿತ 'ಎಇಡಿಪಿ' (ಅಪ್ರೆಂಟಿಸ್‌ಶಿಪ್ ಎಂಬೆಡೆಡ್ ಡಿಗ್ರಿ ಪ್ರೋಗ್ರಾಮ್ - AEDP) ಕೋರ್ಸ್ ಅನ್ನು ಮುಂಬರುವ ದಿನಗಳಲ್ಲಿ ಬಿ.ಎಸ್ಸಿ ಮತ್ತು ಬಿ.ಎ ವಿಭಾಗದ ವಿದ್ಯಾರ್ಥಿಗಳಿಗೂ ವಿಸ್ತರಿಸಲು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ 'ಎಇಡಿಪಿ- ಪ್ರಯೋಗ, ಪ್ರಗತಿ, ಪ್ರಯೋಜನ' ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಈ ಘೋಷಣೆ ಮಾಡಿದರು.

ಏನಿದು ಎಇಡಿಪಿ ಕೋರ್ಸ್?
ಎಇಡಿಪಿ ಎಂದರೆ ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ಕೈಗಾರಿಕಾ ತರಬೇತಿಯನ್ನು (ಇಂಟರ್ನ್‌ಶಿಪ್) ಸಂಯೋಜಿಸುವ ವಿನೂತನ ವ್ಯವಸ್ಥೆ. 2024-25ನೇ ಶೈಕ್ಷಣಿಕ ಸಾಲಿನಲ್ಲಿ ಮೊದಲ ಬಾರಿಗೆ ಬಿ.ಕಾಂ ವಿದ್ಯಾರ್ಥಿಗಳಿಗೆ ಹಣಕಾಸು, ಬ್ಯಾಂಕಿಂಗ್, ಲಾಜಿಸ್ಟಿಕ್ಸ್, ಇ-ಕಾಮರ್ಸ್ ಮತ್ತು ರಿಟೇಲ್ ಸೆಕ್ಟರ್‌ಗಳಲ್ಲಿ ಈ ಕೋರ್ಸ್ ಪರಿಚಯಿಸಲಾಗಿತ್ತು. ಈ ವಿದ್ಯಾರ್ಥಿಗಳು ಮೊದಲ ಕೆಲವು ಸೆಮಿಸ್ಟರ್‌ಗಳಲ್ಲಿ ಕಾಲೇಜಿನಲ್ಲಿ ಅಧ್ಯಯನ ಮಾಡಿದರೆ, ಉಳಿದ 4 ಮತ್ತು 5ನೇ ಸೆಮಿಸ್ಟರ್ ಅವಧಿಯಲ್ಲಿ ಸಂಬಂಧಪಟ್ಟ ಕೈಗಾರಿಕಾ ವಲಯದಲ್ಲಿ ನೇರವಾಗಿ 'ಅಪ್ರೆಂಟಿಸ್‌ಶಿಪ್' (ಶಿಷ್ಯವೇತನ ಸಹಿತ ತರಬೇತಿ) ಮಾಡುತ್ತಾರೆ. ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಇದೀಗ ಉದ್ಯಮಗಳಲ್ಲಿ ತರಬೇತಿ ಪಡೆಯಲು ಸಜ್ಜಾಗಿದ್ದಾರೆ.
ಕಲಾ, ವಿಜ್ಞಾನ ವಿದ್ಯಾರ್ಥಿಗಳಿಗೂ ಲಾಭ
"ಎಇಡಿಪಿ ಜಾಗತಿಕ ವ್ಯವಸ್ಥೆಯಲ್ಲಿ ಪ್ರಸ್ತುತ ಉದ್ದಿಮೆಗಳ ಅವಶ್ಯಕತೆಗೆ ತಕ್ಕಂತೆ ಸೂಕ್ತ ಶಿಕ್ಷಣ ನೀಡುವ ಅತ್ಯುತ್ತಮ ಕೋರ್ಸ್ ಆಗಿದೆ. ಬಿ.ಕಾಂ ವಿದ್ಯಾರ್ಥಿಗಳಿಗೆ ಸಿಕ್ಕಿರುವ ಈ ಅದ್ಭುತ ಅವಕಾಶ ಕೇವಲ ವಾಣಿಜ್ಯ ವಿಭಾಗಕ್ಕೆ ಸೀಮಿತವಾಗಬಾರದು. ಹಾಗಾಗಿ ಮುಂದಿನ ದಿನಗಳಲ್ಲಿ ಬಿ.ಎಸ್ಸಿ ಮತ್ತು ಬಿ.ಎ ವಿದ್ಯಾರ್ಥಿಗಳಿಗೂ ಉದ್ದಿಮೆಗಳಿಗೆ ಪೂರಕವಾದ ಪಠ್ಯಕ್ರಮಗಳೊಂದಿಗೆ ಈ ಕೌಶಲ್ಯಾಧಾರಿತ ಎಇಡಿಪಿ ಕೋರ್ಸ್ ಅನ್ನು ವಿಸ್ತರಿಸಲಾಗುವುದು" ಎಂದು ಸಚಿವ ಸುಧಾಕರ್ ವಿವರಿಸಿದರು. ಈ ಹಂತವು ವಿದ್ಯಾರ್ಥಿಗಳ ಬದುಕಿನ ಭವಿಷ್ಯವನ್ನು ಉಜ್ವಲಗೊಳಿಸಲಿದ್ದು, ಅತ್ಯಂತ ಆತ್ಮವಿಶ್ವಾಸದಿಂದ ಇದನ್ನು ನಿಭಾಯಿಸುವಂತೆ ಅವರು ಹೇಳಿದರು.
ಕರ್ನಾಟಕದ ಮಾದರಿ ದೇಶಕ್ಕೆ ಪ್ರೇರಣೆ
ರಾಜ್ಯದಲ್ಲಿ ಎಇಡಿಪಿ ಯಶಸ್ವಿಯಾಗಿ ಅನುಷ್ಠಾನಗೊಂಡ ನಂತರ, ಇದೀಗ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಕೂಡ ಈ ಮಾದರಿಯನ್ನು ದೇಶದಾದ್ಯಂತ ವಿಸ್ತರಿಸಲು ಮುಂದಾಗಿದೆ. "ಹಿಂದೆ ಯುಜಿಸಿ ಮುಖ್ಯಸ್ಥರಾಗಿದ್ದ ಜಗದೀಶ್ ಕುಮಾರ್ ಅವರ ಮುಂದೆ ಇದೇ ಜ್ಞಾನಜ್ಯೋತಿ ಸಭಾಂಗಣದ ವೇದಿಕೆಯಲ್ಲಿ ನಾನು ಈ ಶಿಕ್ಷಣ ವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸಿದ್ದೆ. ಅದೇ ಅವರಿಗೆ ಪ್ರೇರಣೆಯಾಗಿ, ಇಂದು ರಾಷ್ಟ್ರಮಟ್ಟದಲ್ಲಿ ಈ ಯೋಜನೆ ಜಾರಿಗೆ ಬರುತ್ತಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯ" ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.
ಪ್ರಸ್ತುತ ಆರಂಭಗೊಂಡಿರುವ ಎಇಡಿಪಿ ಕೋರ್ಸ್‌ಗಳು ವಿದ್ಯಾರ್ಥಿಗಳನ್ನು ಉದ್ಯೋಗಿಗಳಾಗಿ ರೂಪಿಸುವ ಅಂತಿಮ ಹಂತಕ್ಕೆ ಬಂದು ನಿಂತಿವೆ. ವಿದ್ಯಾರ್ಥಿಗಳು ಮತ್ತು ಉದ್ಯಮ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಇನ್ನೂ 63 ಹೊಸ ಕಾಲೇಜುಗಳಲ್ಲಿ ಈ ಕೋರ್ಸ್ ಅನ್ನು ವಿಸ್ತರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಅಪ್ರೆಂಟಿಸ್‌ಶಿಪ್ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳಿಂದ ನಿರ್ದಿಷ್ಟ ಮೊತ್ತದ ಶಿಷ್ಯವೇತನ (ಸ್ಟೈಫಂಡ್) ಕೂಡ ದೊರೆಯಲಿದ್ದು, ಇದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಜೊತೆಗೆ, ಸ್ವಾವಲಂಬಿಯಾಗಿ ಶಿಕ್ಷಣ ಪಡೆಯಲು ನೆರವಾಗುತ್ತಿದೆ.
-
ಅಕ್ಷಯ ತೃತೀಯ 2026: ಏಪ್ರಿಲ್ 19ಕ್ಕೆ ಚಿನ್ನದಂತಹ ಹಬ್ಬ; ಶುಭ ಮುಹೂರ್ತ, ಪೂಜಾ ವಿಧಿವಿಧಾನ, ವಿವರ -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
ಬಳ್ಳಾರಿ ಹಾಸ್ಟೆಲ್ ಹಲ್ಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಅಪ್ರಾಪ್ತ ಆರೋಪಿ ಪೊಲೀಸ್ ವಶಕ್ಕೆ -
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್











Click it and Unblock the Notifications