ಹೊರ ರಾಜ್ಯದವರಿಗೆ ಕರ್ನಾಟಕದಲ್ಲಿ ಟೈಟ್ ರೂಲ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಕರ್ನಾಟಕಕ್ಕೆ ಹೊರರಾಜ್ಯಗಳಿಂದ ವಲಸೆ ಬಂದಿರುವ ಅನೇಕರಿಂದ ಇಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿವೆ ಎಂಬ ಆರೋಪ ಮೊದಲಿನಿಂದಲೂ ಇದೆ. ಬೆಂಗಳೂರಿನಲ್ಲಿ ಸಹ ಹೊರ ರಾಜ್ಯದವರು ಯಾವುದೇ ಕಾನೂನಿನ ಭಯವಿಲ್ಲದೆ ಅಟ್ಟಹಾಸ ಮೆರೆಯುವ ಘಟನೆಗಳು ಸೋಶಿಯಲ್ ಮೀಡಿಯಾದಿಂದ ಬೆಳಕಿಗೆ ಬರುತ್ತಲೇ ಇವೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಹೆಣ್ಣು ಮಗುವಿನ ಮೇಲೆ ನಡೆದಿರುವ ಪೈಶಾಚಿಕ ಕೃತ್ಯ ಕೂಡ ಇದಕ್ಕೆ ಉತ್ತಮ ನಿದರ್ಶನ ಎಂದೇ ಹೇಳಬಹುದು. ಈ ಮಿತಿ ಮೀರಿದ ವಲಸೆಗೆ ಕಡಿವಾಣ ಹಾಕಬೇಕು ಎಂದು ಕನ್ನಡಿಗರು ಮೊದಲಿನಿಂದಲೂ ಆಗ್ರಹಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಮಾತನಾಡಿರುವ ಗೃಹ ಸಚಿವ ಜಿ.ಪರಮೇಶ್ವರ್ ಅವರು ಹೊರರಾಜ್ಯದವರಿಗೆ ಕರ್ನಾಟಕದಲ್ಲಿ ಬಿಗಿಯಾದ ರೂಲ್ಸ್ ಜಾರಿ ಮಾಡುವ ಸುಳಿವು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಗುವಿನ ಮೇಲೆ ನಡೆದಿರುವ ಪೈಶಾಚಿಕ ಕೃತ್ಯದಲ್ಲಿ ಕೂಡ ಬಿಹಾರದ ಮೂಲದ ರಿತೇಶ್ ಕುಮಾರ್ ಆರೋಪಿಯಾಗಿದ್ದು, ಈತ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಈ ವಿಚಾರ ಉಲ್ಲೇಖಿಸಿ ಮಾತನಾಡಿರುವ ಗೃಹ ಸಚಿವ ಜಿ.ಪರಮೇಶ್ವರ್ ಅವರು ಹೊರ ರಾಜ್ಯಗಳಿಂದ ಬಂದವರಿಂದಲೇ ಕರ್ನಾಟಕದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿವೆ. ಬೆಂಗಳೂರಿಗೆ ಹೊರ ರಾಜ್ಯಗಳಿಂದ ಸಾಕಷ್ಟು ಜನ ಬರುತ್ತಿದ್ದಾರೆ. ಇಲ್ಲಿಗೆ ಬಂದವರು ಇಲ್ಲಿನ ಸಂಸ್ಕೃತಿ ತಿಳಿದುಕೊಳ್ಳದೆ ಈ ರೀತಿ ವರ್ತಿಸುತ್ತಾರೆ ಎಂದು ದೂರಿದ್ದಾರೆ.

ಕರ್ನಾಟಕದಲ್ಲಿ ಹೆಚ್ಚು ಕಡೆಗಳಲ್ಲಿ ಕಟ್ಟಡ ಕಾರ್ಮಿಕರಿಂದಲೇ ಅಪರಾಧ ಕೃತ್ಯಗಳು ನಡೆಯುವುದು ಬೆಳಕಿಗೆ ಬರುತ್ತಿವೆ. ಅಪರಾಧ ಪ್ರಕರಣಗಳಲ್ಲಿ ಹೊರರಾಜ್ಯಗಳಿಂದ ಬಂದವರಿಂದಲೇ ಹೆಚ್ಚು ಹೆಸರು ಹೊರಬರುತ್ತಿದೆ. ಹೊರ ರಾಜ್ಯದ ಕಾರ್ಮಿಕರಿಂದ ಇದು ವಿಪರೀತವಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಸಭೆ ನಡೆಸುತ್ತೇವೆ. ಈ ಸಂಬಂಧ ಕಾರ್ಮಿಕ ಇಲಾಖೆ ಜೊತೆ ನಾವು ಜಂಟಿಯಾಗಿ ಸಭೆ ನಡೆಸುತ್ತೇವೆ ಎಂದೂ ಜಿ.ಪರಮೇಶ್ವರ್ ಹೇಳಿದ್ದಾರೆ.
ಹೊರರಾಜ್ಯಗಳಿಂದ ಕರ್ನಾಟಕಕ್ಕೆ ಉದ್ಯೋಗ ಅರಸಿ ಬರುವವರಿಂದ ಅಪರಾಧ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಇದನ್ನು ತಡೆಯಲು ಪ್ರತ್ಯೇಕ ಸಭೆ ನಡೆಸಲಾಗುವುದು. ಹುಬ್ಬಳ್ಳಿಯಲ್ಲಿ ನಡೆದ ಬಾಲಕಿ ಕೊಲೆ ಪ್ರಕರಣದಲ್ಲೂ ಬಿಹಾರ ಮೂಲದ ವ್ಯಕ್ತಿಯ ಹೆಸರು ಕೇಳಿಬಂದಿದೆ. 5 ವರ್ಷದ ಬಾಲಕಿಯನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದು, ಕೆಲವೇ ಸಮಯದಲ್ಲಿ ಆತನನ್ನು ಬಂಧಿಸಲಾಗಿದೆ. ನಂತರ ಸ್ಥಳ ಮಹಜರಿಗೆ ಆರೋಪಿಯನ್ನು ಕರೆದುಕೊಂಡು ಹೋದಾಗ ಆತ ಪೊಲೀಸರ ಮೇಲೆ ದಾಳಿ ಮಾಡಿದ್ದಾನೆ. ಪೊಲೀಸರು ಆತ್ಮರಕ್ಷಣೆಗಾಗಿ ಆತನಿಗೆ ಗುಂಡು ಹಾರಿಸಿದ್ದಾರೆ. ಕಾಲಿಗೆ ಹಾರಿಸಿದ ಗುಂಡು ಆತನ ಬೆನ್ನಿಗೆ ಬಿದ್ದಿತ್ತು. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದಾಗ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ ಎಂದು ವಿವರಿಸಿದ್ದಾರೆ.

ಈ ಪ್ರಕರಣ ಸಂಬಂಧ ತಕ್ಷಣವೇ ತನಿಖೆಗೆ ಆದೇಶಿಸಲಾಗಿದೆ. ಇದಕ್ಕಾಗಿ ಹಿರಿಯ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗಿದ್ದು, ತನಿಖೆಯ ಬಳಿಕ ವಾಸ್ತವ ಸಂಗತಿ ತಿಳಿಯಲಿದೆ. ಇನ್ನು ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದ ಘಟನೆ ಸಂಬಂಧ ಕಲಬುರಗಿ ಮೂಲದ ವ್ಯಕ್ತಿಯನ್ನು ಕೇರಳದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆತನನ್ನು ಬೆಂಗಳೂರಿಗೆ ಕರೆತಂದು ಬಳಿಕ ಹೆಚ್ಚಿನ ವಿಚಾರಣೆಗೆ ಒಳಪಡಿಸುವುದಾಗಿಯೂ ಜಿ.ಪರಮೇಶ್ವರ್ ಹೇಳಿದ್ದಾರೆ.












Click it and Unblock the Notifications