Karnataka Rain: ಉತ್ತಮ ಮಳೆ ನಡುವೆಯೂ ಬತ್ತಿದ ರಾಜ್ಯದ 478 ಕೆರೆಗಳು: ಸಂಪೂರ್ಣ ವಿವರ
ಜೂನ್‌ನಲ್ಲಿ ಕೈಕೊಟ್ಟಿದ್ದ ಮುಂಗಾರು ಜುಲೈನಲ್ಲಿ ಚುರುಕಾಗಿತ್ತು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಬ್ಬರಿಸಿ ಬೊಬ್ಬಿರಿದ ವರುಣ ಸದ್ಯ ತಣ್ಣಗಾಗಿದೆ, ಉತ್ತಮ ಮಳೆಯ ನಡುವೆಯೂ ರಾಜ್ಯದಲ್ಲಿ ಅನೇಕ ಕೆರೆಗಳು ನೀರಿಲ್ಲದೆ ಬಣಗುಡಿತ್ತಿವೆ. ಕೃಷಿ ಮತ್ತು ಕುಡಿಯುವ ನೀರಿನ ಪೂರೈಕೆಯಲ್ಲಿ ಮಹತ್ವದ ಪಾತ್ರ ವಹಿಸುವ ಕೆರೆಗಳು ಭರ್ತಿಯಾಗದೇ ಇರುವುದು ಆತಂಕ ಮೂಡಿಸಿದೆ.
ರಾಜ್ಯದ 3,673 ಸಣ್ಣ ನೀರಾವರಿ ಕೆರೆಗಳಲ್ಲಿ ಶೇ. 18 ರಷ್ಟು ಮಾತ್ರ ಅರ್ಧಕ್ಕಿಂತ ಹೆಚ್ಚು (50% ಕ್ಕಿಂತ ಹೆಚ್ಚು) ತುಂಬಿವೆ, ಆದರೆ 478 ಕೆರೆಗಳು ಸಂಪೂರ್ಣವಾಗಿ ಒಣಗಿವೆ. ಸುಮಾರು 2,534 ಕೆರೆಗಳಲ್ಲಿ ಶೇ.30ರಿಂದ ಶೇ.50 ರಷ್ಟು ನೀರಿದ್ದು, ಶೇ.13ರಷ್ಟು ಒಣಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಬೋಸ್ ರಾಜು ಹೇಳಿದ್ದಾರೆ.

ಮುಂಗಾರು ವಿಳಂಬವಾದ ನಂತರ ಜೂನ್ ಮತ್ತು ಜುಲೈ ಮೊದಲಾರ್ಧದಲ್ಲಿ ರಾಜ್ಯದಲ್ಲಿ ಶೇ.23 ರಷ್ಟು ಮಳೆ ಕೊರತೆ ದಾಖಲಾಗಿದೆ. ಆದರೆ ಜುಲೈ ತಿಂಗಳ ದ್ವಿತೀಯಾರ್ಧದಲ್ಲಿ ಉತ್ತಮ ಮಳೆಯಾದ ಕಾರಣ ರಾಜ್ಯದಲ್ಲಿ 3% ನಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ಅಂಕಿ ಅಂಶಗಳು ತಿಳಿಸಿದೆ.
ದಕ್ಷಿಣ, ಉತ್ತರ ಒಳನಾಡಿನಲ್ಲಿ ಸಮಸ್ಯೆ
ಮಳೆಯ ಅಂಕಿ ಅಂಶಗಳನ್ನು ಗಮನಿಸುವುದಾದರೆ ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆರೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿರಬೇಕಿತ್ತು. ಆದರೆ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕೆರೆ ಕಟ್ಟೆಗಳಲ್ಲಿ ನೀರು ತುಂಬಿದ್ದು, ದಕ್ಷಿಣ ಮತ್ತು ಉತ್ತರ ಒಳನಾಡಿನ ಕೆರೆಗಳು ನೀರಿನ ಕೊರತೆ ಅನುಭವಿಸುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಪರಿಸ್ಥಿತಿಗೆ ಅಣೆಕಟ್ಟುಗಳಲ್ಲಿನ ಕಳಪೆ ಶೇಖರಣಾ ನಿರ್ವಹಣೆ ಮತ್ತು ಪ್ರಮುಖ ನೀರಾವರಿ ಯೋಜನೆಗಳು ಮತ್ತು ಸಣ್ಣ ನೀರಿನ ನಡುವಿನ ಸಂಪರ್ಕದ ಕೊರತೆ ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಲಾನಯನ ಪ್ರದೇಶಗಳಲ್ಲಿನ ಕೆರೆಗಳ ಅತಿಕ್ರಮಣವೂ ಸಮಸ್ಯೆಗೆ ಕಾರಣವಾಗಿದೆ. ಅತಿಕ್ರಮಣಗಳು ಕೆರೆಗಳಿಗೆ ನೀರು ಹರಿದು ಹೋಗುವುದನ್ನು ಸ್ಥಗಿತಗೊಳಿಸಿರುವುದರಿಂದ ಕಡಿಮೆ ಪ್ರಮಾಣದ ಮಳೆಯಾದರು ಪ್ರವಾಹದ ಪರಿಸ್ಥಿತಿ ಉಂಟಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಳೆಯ ಮಾದರಿಯಲ್ಲಿ ಬದಲಾವಣೆ ಜೊತೆಗೆ ಅಂತರ್ಜಲದ ಮೇಲಿನ ಅವಲಂಬನೆ ಮತ್ತು ಅತಿಯಾದ ಬಳಕೆ ಕೂಡ ಸಮಸ್ಯೆಯನ್ನು ಹೆಚ್ಚಿಸಿದೆ ಎಂದು ಹೇಳಲಾಗಿದೆ. ಸರ್ಕಾರ ಎಚ್ಚೆತ್ತುಕೊಂಡು ಸಮಸ್ಯೆಯನ್ನು ಸರಿಪಡಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.
ಒತ್ತುವರಿ ತೆರವಿಗೆ ಕ್ರಮ
ಇನ್ನು ಒತ್ತುವರಿಗಳನ್ನು ತೆರವುಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವ ಬೋಸರಾಜು ಹೇಳಿದ್ದಾರೆ. "ಅತಿಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದನ್ನು ತೆರವುಮಾಡಲಾಗುತ್ತಿದೆ, ಜಲಾಶಯ ಮತ್ತು ಕೆರೆಗಳ ನಡುವೆ ಉತ್ತಮ ಸಂಪರ್ಕ ಕಲ್ಪಿಸಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ" ಎಂದು ಅವರು ಹೇಳಿದರು.
ಪ್ರಮುಖ ಜಲಾಶಯಗಳಲ್ಲಿ ಸಂಗ್ರಹಣೆಯನ್ನು ನಿರ್ವಹಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು. ಬರಗಾಲದ ಸಂದರ್ಭದಲ್ಲಿ ನೀರು ಇರುವಂತೆ ನೋಡಿಕೊಳ್ಳಲು ಆಗಸ್ಟ್‌ನಲ್ಲಿ ಮಾತ್ರ ಅಣೆಕಟ್ಟುಗಳಿಂದ ನೀರು ಬಿಡಲಾಗುತ್ತದೆ ಎಂದು ಅವರು ಹೇಳಿದರು. ಜಲಾಶಯಗಳಿಂದ ಕಾಲುವೆಗಳಿಗೆ ಶೀಘ್ರ ನೀರು ಬಿಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಅಗತ್ಯವಿರುವೆಡೆ ಲಿಫ್ಟ್ ನೀರಾವರಿ ಮೂಲಕ ಕೆರೆಗಳನ್ನು ತುಂಬಿಸುತ್ತಿದ್ದೇವೆ' ಎಂದು ರಾಜು ತಿಳಿಸಿದರು.












Click it and Unblock the Notifications