
ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಗೆದ್ದವರ ಅಂತಿಮ ಪಟ್ಟಿ
ಬೆಂಗಳೂರು ಡಿ. 15: ಒಕ್ಕಲಿಗ ಸಮುದಾಯದಲ್ಲಿ ಸಂಚಲನ ಹುಟ್ಟು ಹಾಕಿರುವ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ 35 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಹುತೇಕ ಸ್ಥಾನಗಳ ಫಲಿತಾಂಶ ಹೊರ ಬಿದ್ದಿದೆ. ಬುಧವಾರ ರಾತ್ರಿ 10.30 ರ ಸುಮಾರಿಗೆ 20 ಸ್ಥಾನಗಳ ಫಲಿತಾಂಶ ಹೊರ ಬಿದ್ದಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರದ ಹದಿನೈದು ಸ್ಥಾನಗಳ ಮತ ಎಣಿಕೆ ಕಾರ್ಯ ಮಂದುವರೆದಿದ್ದು, ತಡರಾತ್ರಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ.
ಡಿ.12ರಂದು ನಡೆದ ಚುನಾವಣೆಯಲ್ಲಿ 5,20,721 ಮತದಾರರ ಪೈಕಿ ಒಟ್ಟು 3,71,679 ಮಂದಿ ಮತದಾನ ಮಾಡಿದ್ದರು. ಒಟ್ಟು ಶೇ.71 ಮತದಾನವಾಗಿತ್ತು. 13 ಜಿಲ್ಲೆಗಳಿಂದ ಒಟ್ಟು 221 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬೆಂಗಳೂರು ನಗರ, ಬೆಂ.ಗ್ರಾಮಾಂತರ ಮತ್ತು ರಾಮನಗರದಲ್ಲಿ ಒಟ್ಟು 141 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಈ ಮೂರು ಜಿಲ್ಲೆಗಳ ಮತ ಎಣಿಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೆ ನಡೆಯಿತು. ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳು, ಬೆಂಬಲಿಗರು ಜಮಾಯಿಸಿದ್ದರು. ಗೆಲುವಿನ ನಗೆ ಬೀರಿದವರು ಸಂಭ್ರಮಿಸಿದರು.
ಒಕ್ಕಲಿಗರ ಸಂಘದ ಚುನಾವಣೆ ಮತ ಎಣಿಕೆ: ಕುತೂಹಲ ಕೆರಳಿಸಿದ ಫಲಿತಾಂಶ
ತುಮಕೂರಿನ ಮಾಜಿ ಶಾಸಕ ನಾಗರಾಜಯ್ಯ ಅವರ ಪುತ್ರ ಲೋಕೇಶ್ ಡಿ.ನಾಗರಾಜಯ್ಯ ಸೇರಿ ಪ್ರಮುಖ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಚನ್ನರಾಯಪಟ್ಟಣ ಶಾಸಕ ಸಿ.ಎನ್.ಬಾಲಕೃಷ್ಣ, ಬಿ.ಪಿ.ಮಂಜೇಗೌಡ ಸೇರಿ ಅನೇಕರು ಜಯ ಗಳಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಕೆಲ ಜಿಲ್ಲೆಗಳ ಫಲಿತಾಂಶ ಹೊರ ಬಿದ್ದಿತು.
ವಿಭಿನ್ನವಾಗಿ ನಡೆದ ಚುನಾವಣೆ: ಅಕ್ರಮಗಳ ಗೂಡಿನಿಂದ ಹಲವು ವರ್ಷಗಳಿಂದ ಸೊರಗಿದ್ದ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಕಣ ಈ ಬಾರಿ ರಂಗೇರಿತ್ತು. ಮೈಸೂರು ಕರ್ನಾಟಕ ಭಾಗದ ಪ್ರಬಲ ಒಕ್ಕಲಿಗ ಸಮುದಾಯದ ಪ್ರತಿಷ್ಠಿತ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಈ ಭಾರಿ ಗುಂಪು ಆಧಾರಿತ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು.
ಅಭ್ಯರ್ಥಿಗಳು ಜಿಲ್ಲೆ ಹಾಗೂ ಕೆಲವು ಜಿಲ್ಲೆಗಳ ಗುಂಪುಗಳನ್ನು ಆಧರಿಸಿ ನಿರ್ದೇಶಕರನ್ನು ರಚಿಸಿಕೊಂಡು ಅಖಾಡಕ್ಕೆ ಇಳಿದಿದ್ದರು. ಸಾವಿರಾರು ಕೋಟಿ ರೂ. ಮೊತ್ತದ ಆಸ್ತಿ, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳನ್ನು ಹೊಂದಿರುವ ಸಂಘಕ್ಕೆ ಆಯ್ಕೆಯಾಗಲು ಕೆಲ ಅಭ್ಯರ್ಥಿಗಳು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಸುದ್ದಿಯಾಗಿದ್ದರು.
ಒಕ್ಕಲಿಗ ಸಂಘದ ಚುನಾವಣೆ; ಚಿಕ್ಕಮಗಳೂರಲ್ಲಿ ಎ.ಪೂರ್ಣೇಶ್ ಗೆಲುವು
13 ಜಿಲ್ಲೆಗಳಲ್ಲಿ 1,049 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 500 ಮತದಾರರಿಗೆ ಒಂದು ಮತಗಟ್ಟೆ ಸ್ಥಾಪಿಸಲಾಗಿತ್ತು. ಎಲ್ಲ ತಾಲೂಕು ಕೇಂದ್ರಗಳಲ್ಲಿ ಮತಗಟ್ಟೆ ಹಾಗೂ
ಬೆಂಗಳೂರಿನಲ್ಲಿ ಪಿನ್‌ಕೋಡ್ ಆಧಾರದಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಬೆಂಗಳೂರು. ಬೆಂ.ಗ್ರಾಮಾಂತರ ಮತ್ತು ರಾಮನಗರದಲ್ಲಿ ಮತಪತ್ರದಲ್ಲಿ ಅಭ್ಯರ್ಥಿಗಳ ಕ್ರಮಸಂಖ್ಯೆ ಮತ್ತು ಹೆಸರು ಮುದ್ರಿಸಲಾಗಿತ್ತು. ಇತರ ಜಿಲ್ಲೆಗಳಲ್ಲಿ ಹೆಸರು, ಕ್ರಮಸಂಖ್ಯೆ ಮತ್ತು ಚಿಹ್ನೆ ನೀಡಲಾಯಿತು.
ಆಯಾ ಜಿಲ್ಲೆಗಳಲ್ಲಿ ಆಯ್ಕೆಯಾಗಬೇಕಿರುವ ಅಭ್ಯರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮತದಾರರು ಮತ ಚಲಾಯಿಸಿದ್ದರು. 13 ಜಿಲ್ಲೆಗಳಿಂದ ಒಟ್ಟು 326 ನಾಮಪತ್ರಗಳು ಸಲ್ಲಿಕೆಯಾಗಿತ್ತು. ಇದರಲ್ಲಿ 11 ನಾಮಪತ್ರಗಳ ತಿರಸ್ಕೃತಗೊಂಡರೆ, 63 ಅಭ್ಯರ್ಥಿಗಳು ನಾಮಪತ್ರವನ್ನು ವಾಪಸ್ ಪಡೆದಿದ್ದರು.
ಅಂತಿಮವಾಗಿ 221 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದರು. ಅರ್ಥಿಕ ಬಲವುಳ್ಳ ಅಭ್ಯರ್ಥಿಗಳು ಪ್ರತಿ ಮತಕ್ಕೆ ಇಂತಿಷ್ಟು ಹಣ ಸೇರಿ ಇನ್ನಿತರ ಬೆಳ್ಳಿ ವಸ್ತುಗಳನ್ನು ಮತದಾರರಿಗೆ ಹಂಚಿ ಸಾರ್ವತ್ರಿಕ ಚುನಾವಣೆಗಳನ್ನು ನೆನಪಿಗೆ ತಂದಿದ್ದರು.
ಮೈಸೂರು
ವಿಜೇತರರು - ಪಡೆದ ಮತಗಳ ಸಂಖ್ಯೆ
1. ಕೆ.ವಿ.ಶ್ರೀಧರ್: 12267
2. ಸಿ.ಜಿ.ಗಂಗಾಧರ್: 10174
3. ಎಂ.ಬಿ.ಮಂಜೇಗೌಡ: 8790
ಮಂಡ್ಯ
ವಿಜೇತರರು ಪಡೆದ ಮತಗಳ ಸಂಖ್ಯೆ
1. ಅಶೋಕ್ ಎಸ್.ಡಿ.ಜಯರಾಮ್- 55721
2. ಎನ್.ಬಾಲಕೃಷ್ಣ - 38622
3. ಚಂದ್ರಶೇಖರ್- 36628
4. ರಾಘವೇಂದ್ರ- 33986
ಹಾಸನ
ವಿಜೇತರರು ಪಡೆದ ಮತಗಳು
1. ಸಿ.ಎನ್.ಬಾಲಕೃಷ್ಣ- 32311
2. ಎಸ್.ಎಸ್.ರಘುಗೌಡ- 30555
3. ಬಿ.ಪಿ.ಮಂಜೇಗೌಡ- 20388
ತುಮಕೂರು
ವಿಜೇತರರು ಪಡೆದ ಮತಗಳು
1. ಹನುಮಂತರಾಯಪ್ಪ - 14901
2. ಲೋಕೇಶ್ ಡಿ.ನಾಗರಾಜಯ್ಯ- 11027
ಕೋಲಾರ ಮತ್ತು ಚಿಕ್ಕಬಳ್ಳಾಪುರ
ವಿಜೇತರರು ಪಡೆದ ಮತಗಳು
1. ಡಾ.ಡಿ.ಕೆ.ರಮೇಶ್- 40435
2. ಟಿ.ಕೋನಪ್ಪರೆಡ್ಡಿ- 32451
3. ಎಲುವಳ್ಳಿ ಎನ್.ರಮೇಶ್- 24676
ಚಿತ್ರದುರ್ಗ
ವಿಜೇತರರು ಪಡೆದ ಮತ
1. ಜೆ.ರಾಜು- 4074
ದಕ್ಷಿಣ ಕನ್ನಡ ಮತ್ತು ಉಡುಪಿ
ವಿಜೇತ-ಪಡೆದ ಮತ
1. ಡಾ.ಕೆ.ವಿ.ರೇಣುಕಾಪ್ರಸಾದ್- 3309
ಕೊಡಗು
ವಿಜೇತ ಪಡೆದ ಮತ
1.ಎಚ್.ಎನ್.ರವೀಂದ್ರ- 9157
ಶಿವಮೊಗ್ಗ ಮತ್ತು ಉತ್ತರ ಕನ್ನಡ
ವಿಜೇತ ಪಡೆದ ಮತಗಳು
1. ಎಸ್.ಕೆ.ಧರ್ಮೇಶ್- 5808
ಚಿಕ್ಕಮಗಳೂರು
ವಿಜೇತ ಪಡೆದ ಮತ
1. ಎ.ಪೂರ್ಣೇಶ್- 20144