ಜಿಲ್ಲಾ ಸುದ್ದಿಗಳು: ಹುಬ್ಬಳ್ಳಿಯಲ್ಲಿ ಹಿಂದೂ ಅಧಿವೇಶನ

Posted By:
Subscribe to Oneindia Kannada

ಹುಬ್ಬಳ್ಳಿ, ಅ.20: ಕರ್ನಾಟಕ ರಾಜ್ಯ ಹಿಂದೂ ಅಧಿವೇಶವನ್ನು ನವೆಂಬರ್ 8 ರಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮಸೇನೆ ಹಾಗೂ ಹಿಂದೂ ಜನಜಾಗೃತಿ ಸಮಿತಿ ಜಂಟಿ ಪತ್ರಿಕಾ ಹೇಳಿಕೆಯನ್ನು ಪ್ರಮೋದ್ ಮುತಾಲಿಕ್ ನೀಡಿದರು.

ಸುಮಾರು 50ಕ್ಕೂ ಅಧಿಕ ಹಿಂದೂಪರ ಸಂಘಟನೆಗಳು ಈ ಹಿಂದೂ ಅಧಿವೇಶನದಲ್ಲಿ ಪಾಲ್ಗೊಳ್ಳಲಿವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಹುಬ್ಬಳ್ಳಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಅಧಿವೇಶನ ನಡೆಯಲಿದೆ. ಅಧಿವೇಶನವನ್ನು ಸೇವಾಲಾಲ್ ಬಂಜಾರ ಸಮಾಜದ ಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಸ್ಲಿಮರ ತುಷ್ಟೀಕರಣ ನೀತಿ ಅನುಸರಿಸುತ್ತ ಬಹು ಸಂಖ್ಯಾತರನ್ನು ಕಡೆಗಣಿಸುತ್ತಿರುವುದನ್ನು ಖಂಡಿಸಿ ಈ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಮುತಾಲಿಕ್ ತಿಳಿಸಿದರು, ಇನ್ನಷ್ಟು ಸುದ್ದಿಗಳನ್ನು ನಿರೀಕ್ಷಿಸಿ

ಶಾಸಕರಿಂದ ಆನೆ ದತ್ತು ಸ್ವೀಕಾರ

ಶಾಸಕರಿಂದ ಆನೆ ದತ್ತು ಸ್ವೀಕಾರ

ಮೈಸೂರಿನ: ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಾಣಿ ದತ್ತು ಸ್ವೀಕಾರ ಯೋಜನೆಯಡಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ 45 ಸಾವಿರ ಪಾವತಿಸಿ, ಅಭಿಷೇಕ್ ಹೆಸರಿನ ಆನೆಯನ್ನು ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿದ್ದಾರೆ.

ಕೋಲ್ಕತ್ತಾದ ಎಸ್. ಪ್ರೇಶಿತ್ ಅವರು 7500 ಪಾವತಿಸಿ ರೆಡ್ ಬಿಲ್ಡ್ ಟೋಕನ್, ಮೈಸೂರಿನ ಆರ್. ದೀಪಕ್ ಅಲನ್ ಅವರು 3500 ಪಾವತಿಸಿ ಕಿಂಗ್ ಕ್ರೋಬಾ, ಬೆಂಗಳೂರಿನ ಮಾನಸ್ ಪಾಲ್ ಅವರು 3500 ಪಾವತಿಸಿ ಬಿಳಿ ನವಿಲು ಹಾಗೂ ಮೈಸೂರಿನ ಎಸ್. ರಂಜನ್ ಅವರು 13 ಸಾವಿರ ಪಾವತಿಸಿ ಲವ್ ಬರ್ಡ್, ಸ್ಟಾರ್ ಟಾರ್ಟೈಸ್ ಹಾಗೂ ಕ್ಯಾಸೊವರಿ ಪಕ್ಷಿಗಳನ್ನು ದತ್ತು ಸ್ವೀಕರಿಸಿದ್ದಾರೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ಅವರು ತಿಳಿಸಿದ್ದಾರೆ.

ಆಕಾಶವಾಣಿಗೆ ರಾಷ್ಟ್ರೀಯ ಪ್ರಶಸ್ತಿ

ಆಕಾಶವಾಣಿಗೆ ರಾಷ್ಟ್ರೀಯ ಪ್ರಶಸ್ತಿ

ಅಖಿಲ ಭಾರತ ಆಕಾಶವಾಣಿ ವಾರ್ಷಿಕ ಸ್ಪರ್ಧೆ-2012ರಲ್ಲಿ ಮಂಗಳೂರು ಆಕಾಶವಾಣಿ ಕೇಂದ್ರದ ಹಿರಿಯ ಶ್ರೇಣಿ ಉದ್ಘೋಷಕರಾಗಿದ್ದ ಮುದ್ದು ಮೂಡುಬೆಳ್ಳೆ ರಚಿಸಿ ನಿರೂಪಿಸಿ ನಿರ್ಮಿಸಿದ 'ಪದ ಪಾರ್ದನ ಪಣ್ಪನಾ' ತುಳು ಸಾಕ್ಷ್ಯರೂಪಕ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಸಿಕ್ಕಿದೆ.

ರೂಪಕದಲ್ಲಿ ಕೃಷಿ ವಿವರ, ವಿನೋದ, ಹಳ್ಳಿ ಹೆಣ್ಣಿನ ಚೆಲುವು, ಸುಖ ದುಃಖ, ಕೃಷಿ ಸಲಕರಣೆಗಳು, ಪ್ರಾಣಿ ಪಕ್ಷಿ ವಿವರಗಳೊಂದಿಗೆ ಆಯಾಸ ಮರೆಸಲು ಹಾಡುಗಳನ್ನು ಅಳವಡಿಸಲಾಗಿದೆ. 2009ರಲ್ಲಿ ರಾಜ್ಯ ಮಟ್ಟದ ಬಾನುಲಿ ಸ್ಪರ್ಧೆಯಲ್ಲಿ ನಾಟಕ ನಿರ್ಮಾಣಕ್ಕೆ ಇವರಿಗೆ ಪ್ರಥಮ ಪ್ರಶಸ್ತಿ ಲಭಿಸಿತ್ತು ಎಂದು ಕಾರ್ಯಕ್ರಮ ಮುಖ್ಯಸ್ಥ ಡಾ.ವಸಂತ ಕುಮಾರ ಪೆರ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲೆ ಸ್ತಬ್ಧಚಿತ್ರ ಪ್ರಥಮ

ಕೊಪ್ಪಳ ಜಿಲ್ಲೆ ಸ್ತಬ್ಧಚಿತ್ರ ಪ್ರಥಮ

ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಆನೆಗುಂದಿಯ ಕೋಟೆ ಮತ್ತು ಗಗನ್ ಮಹಲ್ ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿದೆ.

ಸ್ತಬ್ಧಚಿತ್ರ ಕಲಾವಿದರಾದ ಫಕೀರೇಶ ಕುಳಗೇರಿ, ಶಜಾನ್ ಮುದಕವಿ, ರವಿ ಶಿಶುವಿನಹಳ್ಳಿ, ಜಿ.ಕೆ. ಬಡಿಗೇರ ಹಾಗೂ ತಂಡದವರು 15 ದಿನಗಳ ಕಾಲ ಕೋಟೆ ಮತ್ತು ಗಗನ್ ಮಹಲ್ ಕಟ್ಟಡಗಳ ಅಳತೆಗೆ ಸಮನಾಗಿ ಸ್ತಬ್ಧ ಚಿತ್ರ ನಿರ್ಮಿಸಿದ್ದರು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಹೇಳಿದ್ದಾರೆ.

ಹಂಪಿ ಉತ್ಸವ

ಹಂಪಿ ಉತ್ಸವ

ಬಳ್ಳಾರಿ; ಡಿಸೆಂಬರ್ 3ನೇ ವಾರದಲ್ಲಿ ಹಂಪಿ ಉತ್ಸವ ನಡೆಸಲು ಸರಕಾರ ತೀರ್ಮಾನಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಹೇಳಿದರು.

''ಉತ್ಸವ ನಡೆಸುವ ಕುರಿತು ಅ.17ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ದಿನಾಂಕ ನಿಗದಿ, ಕಾರ್ಯಕ್ರಮಗಳ ಆಯೋಜನೆ ರೂಪುರೇಷೆಗಳ ಕುರಿತು ಮುಂದಿನ ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಜತೆ ಮುಖ್ಯಮಂತ್ರಿಗಳು ಸಮಾಲೋಚಿಸಿದ್ದಾರೆ.

ನವೆಂಬರ್ ನಲ್ಲಿ ಉತ್ಸವ ಆಯೋಜಿಸುವ ಚಿಂತನೆಗೆ ಕಾಲಾವಕಾಶ ಕಡಿಮೆ ಇರುವುದು ತೊಡಕಾಯಿತು. ಕಡಿಮೆ ದಿನದಲ್ಲಿ ಕಾರ್ಯಕ್ರಮ ರೂಪಿಸಲು ಆಗದ ಕಾರಣಕ್ಕೆ ಡಿಸೆಂಬರ್ ಆಯ್ಕೆ ಮಾಡಿಕೊಳ್ಳಲಾಗಿದೆ'' ಎಂದರು.

ಒತ್ತುವರಿ ಭೂಮಿ ತೆರವು

ಒತ್ತುವರಿ ಭೂಮಿ ತೆರವು

ಚಿಕ್ಕಮಗಳೂರು: ತಾಲೂಕಿನ ಇಂದಾವರ ಮೀಸಲು ಅರಣ್ಯ ವ್ಯಾಪ್ತಿಯ ಹುಕ್ಕುಂದದಲ್ಲಿ ಒತ್ತುವರಿ ಮಾಡಿ ಬೆಳೆಸಿದ್ದ 38.25 ಎಕರೆ ಕಾಫಿ ತೋಟವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಕಾರ್ಯಾಚರಣೆ ಮೂಲಕ ತೆರವುಗೊಳಿಸಿದರು.

ಒತ್ತುವರಿ ಪ್ರದೇಶದಲ್ಲಿ ಬೆಳೆಸಿದ್ದ 38 ಸಾವಿರಕ್ಕೂ ಹೆಚ್ಚು ಕಾಫಿ ಗಿಡಗಳು, 500ಕ್ಕೂ ಹೆಚ್ಚು ಅಡಕೆ ಮರ ಹಾಗೂ ಕಾಳುಮೆಣಸಿನ ಬಳ್ಳಿಗಳನ್ನು ತೆರವುಗೊಳಿಸಲಾಗಿದೆ.

ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ನಾರಾಯಣಗೌಡ ಅವರು ಒತ್ತುವರಿ ಮಾಡಿದ್ದ 15 ಎಕರೆ, ಇಂದಾವರ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಮುನೀರ್ ಅಹಮದ್ ಎಂಬುವರು ಒತ್ತುವರಿ ಮಾಡಿದ್ದ 33.36 ಎಕರೆ, ಚಿಕ್ಕೊಳಲೆ ನಾರಾಯಣಗೌಡರ 26 ಎಕರೆ, ಅವರ ಪತ್ನಿ ಹೆಸರಿನಲ್ಲಿದ್ದ 6 ಎಕರೆ ಒತ್ತುವರಿ ತೆರವು ಮಾಡಲಾಗಿದೆ.

ತಲಕಾಡಿನಲ್ಲಿ ಪಂಚಲಿಂಗ ದರ್ಶನ

ತಲಕಾಡಿನಲ್ಲಿ ಪಂಚಲಿಂಗ ದರ್ಶನ

ಮೈಸೂರು: ತಲಕಾಡಿನಲ್ಲಿ ಡಿ.2ರಂದು ಪಂಚಲಿಂಗ ದರ್ಶನ ಮಹೋತ್ಸವ ನಡೆಯಲಿದೆ ಅಂದು ಬೆಳಗ್ಗೆ 10ರಿಂದ ರಾತ್ರಿ 12ರವರೆಗೆ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ಹೇಳಿದರು.

ತಲಕಾಡಿನಲ್ಲಿ ಶನಿವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ತಲಕಾಡು ವೈದ್ಯನಾಥೇಶ್ವರ ಹಾಗೂ ಸಮೂಹ ದೇವಾಲಯಗಳ ಆಗಮಿಕರಾದ ಎನ್. ಕೃಷ್ಣ ದೀಕ್ಷಿತ್ ಪಂಚಲಿಂಗ ದರ್ಶನದ ಬಗ್ಗೆ ಮಾಹಿತಿ ನೀಡಿದರು.

ನ.28ರಿಂದ ಪ್ರಾರಂಭಗೊಂಡು ಡಿ.7ರವರೆಗೆ ನಡೆಯಲಿದೆ. ನ.28ರಂದು ಅಂಕುರಾರ್ಪಣ ಹಾಗೂ ಯಾಗಶಾಲಾ ಪ್ರವೇಶ, ನ.29ರಂದು ಧ್ವಜಾರೋಹಣ ಹಾಗೂ ರಕ್ಷಬಂಧನ, ನ.30ರಂದು ಪುಷ್ಪಮಂಟಪಾರೋಹಣೋತ್ಸವ, ಡಿ.1ರಂದು ವೃಷಭಾರೋಹಣೋತ್ಸವ ನಡೆಯಲಿದೆ. ಡಿ.2ರಂದು ದಿವ್ಯ ಪಂಚಲಿಂಗ ದರ್ಶನ ಮಹೋತ್ಸವ, ಡಿ.3ರಂದು ಬ್ರಹ್ಮರಥೋತ್ಸವ, ಡಿ.4ರಂದು ಶಯನೋತ್ಸವ ಪೂರ್ವಕ ಅಶ್ವರೋಹಣೋತ್ಸವ, ಡಿ.5ರಂದು ಅವಬೃತ ಪೂರ್ವಕ ತೀರ್ಥಸ್ನಾನ ತೆಪ್ಪೋತ್ಸವ, ಡಿ.6ರಂದು ಮಹಾಭಿಷೇಕ, ಡಿ.7ರಂದು ಶನಿವಾರ ನಂದಿ ಮಹೋತ್ಸವದ ಜೊತೆ ಪಂಚಲಿಂಗ ದರ್ಶನ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ

ಸಾವಯವ ಮಾರಾಟ ಮೇಳ

ಸಾವಯವ ಮಾರಾಟ ಮೇಳ

‘ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸಾವಯವ (Organic) ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತಿದೆ. ತುಮಕೂರಿನ ಸಾವಯವ ಕೃಷಿಕ ನೀಲಕಂಠ ಮೂರ್ತಿ ದಂಪತಿಗಳ ಓದೆಕಾರ್ ಫಾರ್ಮ್ಸ್ ಆಯೋಜಿಸಿರುವ ಈ ಮೇಳಕ್ಕೆ ರಾಜ್ಯದ ಬಹುತೇಕ ಭಾಗಗಳಿಂದ ಬಂದಿರುವ ಕೃಷಿಕರು ತಮ್ಮ ಉತ್ಪನ್ನಗಳನ್ನು ಮಾರಾಟಕ್ಕಿಟ್ಟಿದ್ದಾರೆ.

ಸಾವಯವ ವಸ್ತುಗಳಿಂದ ತಯಾರಾದ ಸೌಂದರ್ಯ ವರ್ಧಕಗಳು, ಸೋಪು, ಕ್ರೀಮು, ಮುಲಾಮುಗಳು ಮೇಳದ ಮುಖ್ಯ ಆಕರ್ಷಣೆ
ಉಳಿದಂತೆ ಶುಗರ್ರು, ಬಿಪಿ ಇತ್ಯಾದಿಯವರಿಗೆ ಬೇಕಾದ ಆಹಾರ ಪದಾರ್ಥಗಳು, ಡಯಟ್ ಧಾನ್ಯಗಳು, ಅಪರೂಪದ ಪೌಷ್ಟಿಕಾಂಶಗಳ ಸಿರಿ ಧಾನ್ಯಗಳು ..ಹೀಗೆ ಮೇಳ ಹಲವು ವಿಶೇಷಗಳ ಸಂತೆ. ಮೇಳ ನಾಳೆ(oct. 21) ಮುಕ್ತಾಯ

ಸ್ಥಳ : ಬೆಂಗಳೂರಿನ ಚಾಮರಾಜಪೇಟೆಯ ರಾಷ್ಟೋತ್ಠಾನ ಪರಿಷತ್ ನ ಎರಡನೆ ಮಹಡಿ
ಹೆಚ್ಚಿನ ವಿವರಕ್ಕೆ ಸಂಪರ್ಕಿಸಿ: 94487 41129

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka State district news coverage : Sriram Sena and HIndu Janajagriti Samiti organising a 3 day Hindu seminar in Hubli and in Talakadu Panchalinga darshan will be from Dec.2 said Mysore DC C, Sikha and many more news from across the state
Please Wait while comments are loading...