ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು?
ಬೆಂಗಳೂರು: ರಾಜ್ಯದಾದ್ಯಂತ ಈಗಾಗಲೇ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಗಳು ಭರದಿಂದ ಸಾಗುತ್ತಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಈ ನಡುವೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಒಂದು ಪ್ರಮುಖ ಮಾಹಿತಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ನೀಡಿದೆ. 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ವೇಳಾಪಟ್ಟಿಯಲ್ಲಿ ಇದೀಗ ದಿಢೀರ್ ಹಾಗೂ ಮಹತ್ವದ ಬದಲಾವಣೆ ಮಾಡಲಾಗಿದ್ದು, ಮಾರ್ಚ್ 30ರಂದು ನಿಗದಿಯಾಗಿದ್ದ ತೃತೀಯ ಭಾಷೆ (ಹಿಂದಿ) ಪರೀಕ್ಷೆಯನ್ನು ಒಂದು ದಿನ ಮುಂದೂಡಲಾಗಿದೆ. ಪರಿಷ್ಕೃತ ಆದೇಶದ ಪ್ರಕಾರ, ಈ ಪರೀಕ್ಷೆಯು ಈಗ ಮಾರ್ಚ್ 31ರಂದು ನಡೆಯಲಿದೆ.
ಪರೀಕ್ಷೆ ಮುಂದೂಡಿಕೆಗೆ ಕಾರಣವೇನು?
ಪರೀಕ್ಷಾ ಮಂಡಳಿಯು ಈ ಹಿಂದೆ ಪ್ರಕಟಿಸಿದ್ದ ಅಂತಿಮ ವೇಳಾಪಟ್ಟಿಯ ಪ್ರಕಾರ ಮಾರ್ಚ್ 30ರ ಸೋಮವಾರದಂದು ತೃತೀಯ ಭಾಷೆ (ಹಿಂದಿ, ಸಂಸ್ಕೃತ, ಉರ್ದು, ಇತ್ಯಾದಿ) ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿತ್ತು. ಆ ಸಮಯದಲ್ಲಿ ಜೈನ ಸಮುದಾಯದ ಪ್ರಮುಖ ಹಬ್ಬವಾದ ಮಹಾವೀರ ಜಯಂತಿ ಪ್ರಯುಕ್ತ ಮಾರ್ಚ್ 31ರಂದು ಸಾರ್ವತ್ರಿಕ ರಜೆ ಘೋಷಿಸಲಾಗಿತ್ತು. ಆದರೆ, ಇದೀಗ ರಾಜ್ಯ ಸರ್ಕಾರವು ಮಹಾವೀರ ಜಯಂತಿ ರಜೆಯನ್ನು ಪರಿಷ್ಕರಿಸಿದೆ. ಮಾರ್ಚ್ 31ರ ಬದಲಾಗಿ ಮಾರ್ಚ್ 30ರ ಸೋಮವಾರದಂದೇ ಮಹಾವೀರ ಜಯಂತಿ ರಜೆಯನ್ನು ಘೋಷಿಸಿ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಸಾರ್ವತ್ರಿಕ ರಜೆಯ ದಿನದಂದು ಪರೀಕ್ಷಾ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಎದುರಾಗುವ ಹಾಗೂ ಪರೀಕ್ಷೆ ನಡೆಸಲು ಸಾಧ್ಯವಾಗದ ಅನಿವಾರ್ಯತೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪರಿಷ್ಕೃತ ದಿನಾಂಕ ಮತ್ತು ಸಮಯ
ಸರ್ಕಾರದ ರಜೆ ಬದಲಾವಣೆಯಿಂದ ಉಂಟಾದ ಅಡಚಣೆಯನ್ನು ನಿವಾರಿಸಲು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಮಾರ್ಚ್ 30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆಯನ್ನು ಮಾರ್ಚ್ 31ರ ಮಂಗಳವಾರದಂದು ನಡೆಸಲು ತೀರ್ಮಾನಿಸಿದೆ. ದಿನಾಂಕ ಬದಲಾಗಿದ್ದರೂ, ಪರೀಕ್ಷಾ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಮೊದಲು ನಿಗದಿಪಡಿಸಿದಂತೆಯೇ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ ಪರೀಕ್ಷೆ ನಡೆಯಲಿದೆ. ಹಾಗೆಯೇ, ವಿದ್ಯಾರ್ಥಿಗಳ ಪ್ರವೇಶ ಪತ್ರ ಹಾಗೂ ಪರೀಕ್ಷಾ ಕೇಂದ್ರಗಳಲ್ಲಿಯೂ ಯಾವುದೇ ವ್ಯತ್ಯಾಸವಿರುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಮಾರ್ಚ್ 18ರಿಂದ ಆರಂಭವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಈಗಾಗಲೇ ಸುಗಮವಾಗಿ ನಡೆಯುತ್ತಿವೆ. ಹಿಂದಿ ಭಾಷೆಯ ಪರೀಕ್ಷೆಯ ದಿನಾಂಕ ಮಾತ್ರ ಬದಲಾಗಿದ್ದು, ಉಳಿದ ಯಾವುದೇ ವಿಷಯಗಳ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿಲ್ಲ. ಏಪ್ರಿಲ್ 3ರಂದು ಕೊನೆಯಾಗಲಿರುವ ನಿಗದಿತ ವೇಳಾಪಟ್ಟಿಯಂತೆಯೇ ಗಣಿತ ಹಾಗೂ ಸಮಾಜ ವಿಜ್ಞಾನ ಪರೀಕ್ಷೆಗಳು ಮುಂದುವರಿಯಲಿವೆ.
ವಿದ್ಯಾರ್ಥಿಗಳಿಗೆ ಮತ್ತು ಶಾಲಾ ಆಡಳಿತ ಮಂಡಳಿಗೆ ಸೂಚನೆ
ಧಿಡೀರ್ ಆಗಿ ಪರೀಕ್ಷಾ ದಿನಾಂಕ ಬದಲಾಗಿರುವುದರಿಂದ ವಿದ್ಯಾರ್ಥಿಗಳಲ್ಲಿ ಯಾವುದೇ ಗೊಂದಲ ಉಂಟಾಗಬಾರದು ಎಂಬ ಉದ್ದೇಶದಿಂದ ಮಂಡಳಿಯು ಈ ಮಾಹಿತಿಯನ್ನು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಪೋಷಕರಿಗೆ ತುರ್ತಾಗಿ ತಲುಪಿಸಲು ಸೂಚಿಸಿದೆ. ರಾಜ್ಯದ ಮೂಲೆ ಮೂಲೆಗಳಿಂದ ಒಟ್ಟು 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುವ ಈ ಪ್ರಮುಖ ಘಟ್ಟದಲ್ಲಿ, ಇಂತಹ ವೇಳಾಪಟ್ಟಿ ಬದಲಾವಣೆಗಳ ಬಗ್ಗೆ ನಿರಂತರವಾಗಿ ಗಮನಹರಿಸುವುದು ಅವಶ್ಯಕವಾಗಿದೆ.












Click it and Unblock the Notifications