Shakti scheme effect: ಮೈಸೂರು ನಗರದಲ್ಲಿ ಸಂಚರಿಸಲಿವೆ 40 ಬಿಎಂಟಿಸಿ ಬಸ್‌ಗಳು- ವರದಿ, ವಿವರ
ಬೆಂಗಳೂರು, ಆಗಸ್ಟ್ 18: ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸುವ ಶಕ್ತಿ ಯೋಜನೆ ಬಳಿಕ ಸರ್ಕಾರಿ ಬಸ್‌ಗಳಲ್ಲಿ ವ್ಯಾಪಕ ಜನದಟ್ಟಣೆ ಹೆಚ್ಚಿದೆ. ಅದರಲ್ಲೂ ಬಸ್‌ಗಳಲ್ಲಿ ಸಂಚರಿಸುವ ಮಹಿಳೆಯರ ಸಂಖ್ಯೆ ತೀವ್ರ ಗತಿಯಲ್ಲಿ ಏರಿದೆ. ನಗರಗಳಲ್ಲಿ ಓಡಾಡುವ ಸಿಟಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಂತೂ ಭಾರೀ ಏರಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ನಗರಗಳಲ್ಲಿ ಬಸ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ.
ಪ್ರಸ್ತುತ ಓಡಾಡುತ್ತಿರುವ ಬಸ್‌ಗಳು ಜನದಟ್ಟಣೆಯನ್ನು ನಿಯಂತ್ರಿಸುವಲ್ಲಿ ಹರಸಾಹಸ ಪಡುತ್ತಿವೆ. ವಿಶೇಷವಾಗಿ ಪೀಕ್ ಅವರ್‌ಗಳಲ್ಲಿ ಬಸ್‌ಗಳು ತುಂಬಿ ತುಳುಕುತ್ತಿವೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ಮೈಸೂರು ಸಿಟಿ ವಿಭಾಗ ನಿರ್ಧರಿಸಿದೆ. ಇದಕ್ಕೆ ಬೆಂಗಳೂರಿನ ಬಿಎಂಟಿಸಿ ಸಹಾಯ ಹಸ್ತ ಚಾಚಿದೆ.

ಈ ವಿಚಾರವಾಗಿ ಮಾತನಾಡಿರುವ ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಶ್ರೀನಿವಾಸ್, ಬಿಎಂಟಿಸಿಯು ಕೆಎಸ್‌ಆರ್‌ಟಿಸಿಗೆ ಸುಮಾರು 200 ಬಸ್‌ಗಳನ್ನು ನೀಡುತ್ತಿದೆ. ಮೈಸೂರಿನಲ್ಲಿ ಸುಮಾರು 40 ರಿಂದ 50 ಬಸ್‌ಗಳು ಸೇರ್ಪಡೆಯಾಗುವ ನಿರೀಕ್ಷೆಯಿದೆ. ದಸರಾ ವೇಳೆಗೆ ಬಸ್‌ಗಳು ಮೈಸೂರಿಗೆ ಆಗಮಿಸಲಿವೆ ಎಂದು ತಿಳಿಸಿದ್ದಾರೆ.
ಮುಂದಿನ 10 ವರ್ಷಗಳ ಕಾಲ ಶಕ್ತಿ ಯೋಜನೆ: ರಾಮಲಿಂಗಾ ರೆಡ್ಡಿ ಹೇಳಿದ್ದೇನು?
ಮುಂಬರುವ 10 ವರ್ಷಗಳ ಕಾಲ ರಾಜ್ಯದಲ್ಲಿ ಶಕ್ತಿ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಶೀಘ್ರದಲ್ಲೇ ರದ್ದುಗೊಳಿಸುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವದಂತಿಗಳನ್ನು ಹಬ್ಬಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ರಾಮಲಿಂಗಾ ರೆಡ್ಡಿ ಅವರು ವದಂತಿಗಳನ್ನು ನಿರಾಕರಿಸಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, 'ಕರ್ನಾಟಕದ ಜನತೆಗೆ ಅದರಲ್ಲೂ ಶಾಲಾ ಮಕ್ಕಳಿಗೆ ನಾನು ಹೇಳಲು ಬಯಸುತ್ತೇನೆ. 'ಶಕ್ತಿ' ಯೋಜನೆಯನ್ನು ನಿಲ್ಲಿಸುತ್ತಾರೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ವದಂತಿಗಳನ್ನು ನಂಬಿ ಕೆಲವರು ಬಸ್ ಪಾಸ್ ಕೇಳಲು ತೆರಳಿದ್ದಾರೆ' ಎಂದು ತಿಳಿಸಿದರು.

ಕರ್ನಾಟಕದಲ್ಲಿ ಮುಂದಿನ 10 ವರ್ಷಗಳ ವರೆಗೆ ಶಕ್ತಿ ಯೋಜನೆ ಇರುತ್ತದೆ. ನಿರ್ದಿಷ್ಟ ಪಕ್ಷದ ಕೆಲವರು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಪಕ್ಷದ ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ ಎಂದರು.
ಮೊದಲ ತಿಂಗಳಲ್ಲಿ 16.73 ಕೋಟಿ ಮಹಿಳಾ ಪ್ರಯಾಣಿಕರು
ಕರ್ನಾಟಕ ಸಾರಿಗೆ ಇಲಾಖೆಯ ಪ್ರಕಾರ, ಮೊದಲ ತಿಂಗಳಲ್ಲಿ 16.73 ಕೋಟಿ ಮಹಿಳಾ ಪ್ರಯಾಣಿಕರು ಎಲ್ಲಾ ನಾಲ್ಕು ರಾಜ್ಯಗಳ ರಸ್ತೆ ಸಾರಿಗೆಯಲ್ಲಿ ಪ್ರಯಾಣಿಸಿದ್ದಾರೆ. ಅದರಲ್ಲಿ ಸುಮಾರು 70 ಲಕ್ಷ ಮಹಿಳೆಯರು ಜುಲೈ 4 ರಂದು ಮಾತ್ರ ಪ್ರಯಾಣಿಸಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ( ಬಿಎಂಟಿಸಿ ) ಬಸ್‌ಗಳು ಮೊದಲ ತಿಂಗಳಲ್ಲಿ ಅತಿ ಹೆಚ್ಚು ಮಹಿಳಾ ಪ್ರಯಾಣಿಕರನ್ನು ಕಂಡಿವೆ. ಐದು ಕೋಟಿಗೂ ಹೆಚ್ಚು ಮಹಿಳೆಯರು ಈ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದಾರೆ.

ಸಾಮಾನ್ಯ ಸರ್ಕಾರಿ ಬಸ್ ಸೇವೆಗಳಿಗೆ ಮಾತ್ರ ಅನ್ವಯ
ಶಕ್ತಿ ಯೋಜನೆಯು ಕರ್ನಾಟಕದ ಸಾಮಾನ್ಯ ಸರ್ಕಾರಿ ಬಸ್ ಸೇವೆಗಳಿಗೆ ಮಾತ್ರ ಅನ್ವಯಿಸುತ್ತದೆ. ಐರಾವತ್, ಐರಾವತ್ ಕ್ಲಬ್ ಕ್ಲಾಸ್, ಐರಾವತ್ ಗೋಲ್ಡ್ ಕ್ಲಾಸ್, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ, ಫ್ಲೈ ಬಸ್, ವಾಯು ವಜ್ರ, ವಜ್ರ, ನಾನ್ ಎಸಿ ಸ್ಲೀಪರ್, ರಾಜಹಂಸ ಮತ್ತು ಇವಿ ಪವರ್ ಪ್ಲಸ್ ಎಸಿ ಬಸ್‌ಗಳನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ.
ಈ ಯೋಜನೆಯು ರಾಜ್ಯದ ಹೊರಗೆ ಪ್ರಯಾಣಿಸುವ ಬಸ್‌ಗಳಿಗೆ ಅನ್ವಯಿಸುವುದಿಲ್ಲ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿರುವ ಐದು ಚುನಾವಣಾ ಭರವಸೆಗಳಲ್ಲಿ ಶಕ್ತಿ ಯೋಜನೆಯೂ ಒಂದಾಗಿದೆ.












Click it and Unblock the Notifications