Karnataka rain: ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ದಾಖಲು, ಅಂಕಿ-ಸಂಖ್ಯೆ ಮಾಹಿತಿ ಇಲ್ಲಿದೆ
ಜುಲೈ 23: ನೈಋತ್ಯ ಮುಂಗಾರು ಮಳೆ ತಡವಾಗಿ ಆರಂಭವಾಯಿತಾದರೂ ಸಹ ಜುಲೈನಲ್ಲಿ ಉತ್ತಮವಾಗಿ ಮಳೆ ಸುರಿದಿದೆ. ಕಳೆದ 22 ದಿನಗಳಲ್ಲಿ ಕರ್ನಾಟಕ ವಾಡಿಕೆಗಿಂತಲೂ ಅಧಿಕ ಮಳೆ ಕಂಡಿದೆ. ಇದರಲ್ಲಿ ಬಹುತೇಕ ಮಳೆ ಕರಾವಳಿ ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಆಗಿದೆ.
ಹವಾಮಾನ ಇಲಾಖೆಯ ಜುಲೈ 22 ರ ವರದಿ ಪ್ರಕಾರ, ಕರ್ನಾಟಕ ರಾಜ್ಯ ಜುಲೈ 1 ರಿಂದ 22 ವರೆಗೆ ವಾಡಿಕೆಗಿಂತ ಉತ್ತಮ ಮಳೆ ದಾಖಲಿಸಿದೆ. ಈ ಮೂಲಕ ಬರಗಾಲ ಛಾಯೆ ಎದುರಿಸುತ್ತಿದ್ದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ವರ್ಷಧಾರೆ ಆಗಿದೆ.

ಜುಲೈ ಇಪ್ಪತ್ತೆರಡು ದಿನಗಳ ಅವಧಿಯಲ್ಲಿ ವಾಡಿಕೆ 192 ಮಿಲಿ ಮೀಟರ್ ಮಳೆ ಆಗುವ ನಿರೀಕ್ಷೆ ಹುಸಿಯಾಗಿದ್ದು, ಒಟ್ಟು 215 ಮಿಲಿ ಮೀಟರ್ ಮಳೆ ದಾಖಲಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಶೇಕಡಾ 12ರಷ್ಟು ಅಧಿಕ ಮಳೆ ಕಂಡಿದ್ದು, ಬರಗಾಲದ ಜಿಲ್ಲೆಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಆದರೆ ಕೃಷಿಯ ಇನ್ನಿತರ ಚಟುವಟಿಕೆಗಳನ್ನು ಮುಂದುವರಿಸಲು ರೈತರಿಗೆ ಈ ನಿರಂತರ ಮಳೆ ಅಡ್ಡಿ ಉಂಟು ಮಾಡಿದೆ.
ಹೆಚ್ಚು ಕಡಿಮೆ ಒಂದು ತಿಂಗಳು ಕಾಲ ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಸುರಿದಿದೆ. ಇತ್ತ ಕಳೆದ ಒಂದು ವಾರದಿಂದ ಬಿಸಿಲಿನ ದರ್ಶನವೇ ಆಗದ ಹಾಗೇ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ದಿನದ 24 ಗಂಟೆಯು ಮಳೆ ಸುರಿಯುತ್ತಲೇ ಇದೆ. ನೀರಿಲ್ಲದೇ ಬೀಕೋ ಎಂದಿದ್ದ ಜಲಾಶಯಗಳು ಭರ್ತಿಯಾಗುತ್ತಿವೆ.
ವಾರದಿಂದ ಸುರಿಯುತ್ತಿರುವ ಮಳೆ
ಜುಲೈ 17ರಿಂದ ನಿತ್ಯ ಬೆಳಗ್ಗೆಯಿಂದ ರಾತ್ರಿವರೆಗೆ ತಪ್ಪದೇ ಮಳೆ ಬರುತ್ತಿದೆ. ಮಲೆನಾಡಿನಂತಹ ವಾತಾವರಣವು ಇದೀಗ ಬರಗಾಲ ಎದುರಿಸಿದ್ದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸೃಷ್ಟಿಯಾಗಿದೆ. ದಾವಣಗೆರೆ, ಹರಿಹರ, ಹಾವೇರಿ, ಗದಗ, ಶೀಗ್ಗಾವ್, ಹುಬ್ಬಳ್ಳಿ, ಸಿರಸಿ, ಹಾನಗಲ್, ಧಾರವಾಡ, ಬೆಳಗಾವಿ, ದಾಂಡೇಲಿ, ಕೊಪ್ಪಳ, ಬೀದರ್ ಸೇರಿದಂತೆ ಅನೇಕ ಕಡೆಗಳಲ್ಲಿ ವ್ಯಾಪಕ ಮಳೆ ಆಗಿದ್ದು, ಮುಂದಿನ ಕೆಲವು ದಿನಗಳ ಇದು ಮುಂದುವರಿಯಿದೆ.

ಕರಾವಳಿಯಲ್ಲಿ ಜೂನ್ ಅಂತ್ಯದಿಂದಲೇ ಮಳೆ ಪ್ರಾರಂಭವಾಗಿದ್ದು, ಇದವರೆಗೂ ಬಿಟ್ಟಿಲ್ಲ. ರೆಡ್ ಅಲರ್ಟ್ ಪಡೆದಿದ್ದ ಜಿಲ್ಲೆಗಳು ಹಂತ ಹಂತವಾಗಿ ಯೆಲ್ಲೋ ಅಲರ್ಟ್ ಗೆ ಮರಳಿವೆ.
ಇನ್ನೂ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಹಾಸನ, ಮಂಡ್ಯ, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಸೇರಿ ಇನ್ನಿತರ ಜಿಲ್ಲೆಗಳಲ್ಲಿ ಉತ್ತಮ ಮಳೆ ಆಗಿದೆ. ಈ ಹಿಂದಿನ ವರ್ಷಗಳಿಗೆ ಮುಂಗಾರು ಆರಂಭದಲ್ಲಿ ಸುರಿಯುವ ಮಳೆಗೆ ಹೋಲಿಕೆ ಮಾಡಿದರೆ ಈ ಬಾರಿ ಬೆಂಗಳೂರು ನಗರಕ್ಕೆ ಮಳೆ ತುಸು ಕಡಿಮೆ ಎನ್ನಲಾಗುತ್ತಿದೆ.
ಐದು ದಿನ ರಾಜ್ಯಕ್ಕೆ ಭಾರಿ ಮಳೆ ಎಚ್ಚರಿಕೆ
ಕರ್ನಾಟಕದ ಹಲವೆಡೆ ಮುಂದಿನ ಐದು ಸಾಧಾರಣದಿಂದ ಭಾರೀ ಮಳೆ ಮುಂದುವರಿಯಲಿದೆ. ಕರಾವಳಿಯ ಮೂರು ಜಿಲ್ಲೆಗಳು ಇಂದು ಮತ್ತು ನಾಳೆ ಸೋಮವಾರ ಆರೆಂಜ್ ಅಲರ್ಟ್ ಪಡೆದರೆ, ನಂತರದ ಮೂರು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇತ್ತ ಒಳನಾಡಿನ ಬೆಳಗಾವಿ, ಧಾರವಾಡ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಒಂದು ದಿನ ಜೋರು ಮಳೆ ಆಗಲಿದೆ. ಉಳಿದಂತೆ ಸಾಧಾರಣದಿಂದ ವ್ಯಾಪಕ ಮಳೆ ಸುರಿಯಲಿದೆ. ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಮುಂದಿನ ನಾಲ್ಕು ದಿನ ಯೆಲ್ಲೋ ಅಲರ್ಟ್ ಪಡೆದುಕೊಂಡಿವೆ.












Click it and Unblock the Notifications