ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಹಿನ್ನೆಲೆ ರಾಜ್ಯದ ಈ ಜಿಲ್ಲೆಗಳಲ್ಲಿ ಮೂರು ದಿನ ಭಾರೀ ಮಳೆ ಮುನ್ಸೂಚನೆ
Karnataka Rains: ಬಂಗಾಳಕೊಲ್ಲಿಯಲ್ಲಿ ಮೋಂಥಾ ಚಂಡಮಾರುತ ಪ್ರಭಾವ ಕರ್ನಾಟಕ ಮೇಲೂ ಬೀರಿದೆ. ಪರಿಣಾಮ ಕೆಲ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ. ಹಾಗೆಯೇ ಮುಂದಿನ ಮೂರು ದಿನಗಳ ಕಾಲ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಚಂಡಮಾರುತ ಹಿನ್ನೆಲೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೆಲವೇ ಕ್ಷಣಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ರಾತ್ರಿಯೂ ಕೂಡ ಮುಂದುವರೆದರೂ ಆಶ್ಚರ್ಯವಿಲ್ಲ ಎನ್ನುವ ಮುನ್ಸೂಚನೆ ಇದೆ. ಇನ್ನು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ಮೋಂಥಾ ಚಂಡಮಾರುತ ಸೃಷ್ಟಿಯಾಗಿದ್ದು, ಇದರ ಪ್ರಭಾವ ಈಗಾಗಲೇ ಆಂಧ್ರಪ್ರದೇಶ ಹಾಗೂ ಒರಿಸ್ಸಾ ಕರಾವಳಿವರೆಗೂ ಎಂಟ್ರಿ ಕೊಟ್ಟಿದೆ. ಇದೀಗ ಬೆಂಗಳೂರು ಮತ್ತು ಆಂಧ್ರಪ್ರದೇಶಕ್ಕೆ ಹೊಂದಿಕೊಂಡಂತಿರುವ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.
ಚಂಡಮಾರುತದ ಕೇಂದ್ರಬಿಂದು ಕರ್ನಾಟಕದಿಂದ ದೂರವಿದ್ದರೂ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಗಡಿ ಭಾಗಗಳಿಗೆ ಹತ್ತಿರದಲ್ಲಿರುವ ಕರ್ನಾಟಕದ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆ ಬೀಳುವ ಸಾಧ್ಯತೆಗಳು ದಟ್ಟವಾಗಿವೆ. ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್ ಹೀಗೆ ಗಡಿಯಲ್ಲಿರುವ ಹಲವಾರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಎಲ್ಲೆಲ್ಲಿ ಮಳೆ?: ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಅಕ್ಟೋಬರ್ 29ರ ವರೆಗೂ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶ ನೀಡಿದೆ.
ಈಗಾಗಲೇ ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಹೊಂದಿಕೊಂಡಿರುವ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಯಾಗುತ್ತುದೆ. ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಚಿಕ್ಕಮಗಳೂರು ಹಲವು ಜಿಲ್ಲೆಗಳ ಅಲ್ಲಲ್ಲಿ ಮಳೆ ಆರಂಭವಾಗಿದೆ. ಒಂದು ವೇಳೆ ಚಂಡಮಾರುತ ಆರ್ಭಟ ತಗ್ಗಿದರೆ, ರಾಜ್ಯದಲ್ಲಿ ಇದೀಗ ಮಂಜಿನ ಮುಸುಕಿದ ವಾತಾವರಣ ಮುಂದುವರೆಯಲಿದೆ ಅಂತಲೂ ತಿಳಿಸಿದೆ.
ಇನ್ನೂ ಈಗಾಗಲೇ ಮುಂಗಾರು ಮಳೆ ಆರ್ಭಟಿಸಿದ ಹಿನ್ನೆಲೆ ಬಹುತೇಕ ಕೆರೆ-ಕಟ್ಟೆಗಳು, ನದಿಗಳು, ಜಲಾಶಯಗಳು, ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಇದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಮನೆ ಮಾಡಿದೆ. ಮತ್ತೊಂದೆಡೆ ಹಲವೆಡೆ ಅತೀವೃಷ್ಟಿಯಿಂದ ಅನ್ನದಾತರು ಬೆಳೆದ ಬೆಳೆಗಳು ಜಲಾವೃತವಾಗಿರುವ ಘಟನೆಗಳು ನಡೆದಿವೆ. ಇದೀಗ ಮುಂಗಾರು ಮಾಯವಾಗಿದ್ದು, ಚಂಡಮಾರುತದ ಹಾವಳಿ ಶುರುವಾಗಿದೆ. ಪರಿಣಾಮ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಅದರಲ್ಲೂ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ರಣಮಳೆ ಸುರಿಯುವ ಸಾಧ್ಯತೆಯಿದೆ ಅಂತಲೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಯಾಕಂದ್ರೆ ಆ ಭಾಗದಲ್ಲೇ ಇದೀಗ ಚಂಡಮಾರುತ ತೀವ್ರತೆ ಪಡೆದುಕೊಂಡಿದೆ.












Click it and Unblock the Notifications