Karnataka Rains: ಕೆಲವೇ ಕ್ಷಣಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ರಣಮಳೆ ಮುನ್ಸೂಚನೆ
Karnataka Rains: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ಪರಿಣಾಮ ನದಿ, ಕೆರೆ-ಕಟ್ಟೆಗಳು, ಹಲವು ಪ್ರಮುಖ ಜಲಾಶಯಗಳು ತುಂಬಿ ಹರಿಯುತ್ತಿವೆ. ಹಾಗೆಯೇ ಇಂದು (ಆಗಸ್ಟ್ 01) ಇನ್ನೂ ಕೆಲವೇ ಗಂಟೆಗಳಲ್ಲಿ ಈ ಭಾಗಗಳಲ್ಲಿ ಭಾರೀ ಮಳೆ ಸುರಿಯಲಿದೆ ಎನ್ನುವ ಮುನ್ಸೂಚನೆ ಇದೆ. ಹಾಗಾದರೆ ಎಲ್ಲೆಲ್ಲಿ ಮಳೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಭಾರೀ ಮಳೆ ಮುಂದುವರೆದ ಹಿನ್ನೆಲೆ ಮಲೆನಾಡು ಜಿಲ್ಲೆಗಳು, ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಗುಡ್ಡ ಕುಸಿತ ಪ್ರಾರಂಭವಾಗಿದೆ. ಈ ಹಿನ್ನೆಲೆ ಈ ಭಾಗದ ಜನರು ಜೀವವನ್ನು ಕೈಯಲ್ಲಿ ಹಿಡಿದು ಜೀವನ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಉಡುಪಿ ಜಿಲ್ಲೆಗೆ ನಾಳೆ (ಆಗಸ್ಟ್ 2) ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಬೆಳಗಾವಿ, ಹಾಸನ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಅವಾಂತರಗಲೆ ಸೃಷ್ಟಿಯಾಗಿವೆ. ಹಾಗೆಯೇ ಇನ್ನೂ ಕೆಲವೇ ಕ್ಷಣಗಳಲ್ಲಿ ಈ ಭಾಗಗಳಲ್ಲಿ ಮಳೆ ಮತ್ತಷ್ಟು ಚುರುಕು ಪಡೆಯಲಿದೆ ಎನ್ನುವ ಮುನ್ಸೂಚನೆ ಇದೆ. ಮತ್ತೊಂದೆಡೆ ಬೀದರ್, ಚಾಮರಾಜನಗರ, ಮೈಸೂರು, ಕಲಬುರಗಿ, ದಾವಣಗೆರೆ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆ ಇದೆ.
ಈಗಾಗಲೇ ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಗುಡ್ಡ ಕುಸಿದು ಅಪಾರ ಹಾನಿಯಾಗಿದ್ದು, ಈ ಹಿನ್ನೆಲೆ ರಸ್ತೆ ಸಂಪರ್ಕಗಳನ್ನು ಬಂದ್ ಮಾಡಲಾಗಿದೆ. ಅದರಲ್ಲೂ ಶಿರೂರು, ಶಿರಾಡಿ ಘಾಟ್‌ಗಳಲ್ಲಿ ಗುಡ್ಡ ಕುಸಿದಿದ್ದು, ಪರಿಣಾಮ ಈ ಮಾರ್ಗಗಳಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಇನ್ನು ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಈ ಭಾಗದ ನೀರನ್ನು ಕೃಷ್ಣ ನದಿ ಮೂಲಕ ಕರ್ನಾಟಕಕ್ಕೆ ಹರಿಸಲಾಗಯತ್ತಿದೆ. ಇದರ ಪರಿಣಾಮ ನೇರವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳ ಮೇಲೆ ಬೀರಿದ್ದು, ಹೊಲಗಳೆಲ್ಲ ಕೆರೆಯಂತಾಗಿ ಮಾರ್ಪಟ್ಟಿದ್ದು, ಇದರಿಂದ ಈ ಭಾಗದ ಅನ್ನದಾತರು ಕಣ್ಣೀರಲ್ಲಿ ಕೈತೊಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯ ಮೇಲೆ ಕೃಷ್ಣ ನದಿಯ ಪ್ರಭಾವ ಹೆಚ್ಚು ಬೀರಿದೆ.
ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಕೇರಳದಲ್ಲಿ ಮಳೆರಾಯನ ಆರ್ಭಟ ಹೀಗೆ ಮುಂದುವರೆದರೆ ಕರ್ನಾಟಕದ ಕೊಡಗು, ಮೈಸೂರು ಜಿಲ್ಲೆಗಳಿಗೆ ಹೆಚ್ಚು ಅಪಾಯ ಎನ್ನುವ ಎಚ್ಚರಿಕೆ ಸಂದೇಶವನ್ನು ಈಗಾಗಲೇ ರವಾನಿಸಲಾಗಿದೆ.












Click it and Unblock the Notifications