Karnataka Temperature: ಮಳೆಯಾರ್ಭಟಕ್ಕೆ ರಾಜ್ಯದಲ್ಲೆಡೆ ತಂಪು ತಂಪು ಕೂಲ್ ಕೂಲ್: ಜಿಲ್ಲಾವಾರು ಮಾಹಿತಿ
ಬೆಂಗಳೂರು, ಏಪ್ರಿಲ್ 12: ಕರ್ನಾಟಕ ರಾಜ್ಯದಲ್ಲಿ ವಿಪರೀತ ತಾಪಮಾನ, ಶಾಖದ ಅಲೆಯಿಂದಾಗಿ ಬೇಸತ್ತಿದ್ದ ಜನರು ಇದೀಗ ಕೂಲ್ ಕೂಲ್ ವಾತಾವರಣವನ್ನು ಅನುಭವಿಸುತ್ತಿದ್ದಾರೆ. ರಾಜ್ಯದ ಗರಿಷ್ಠ ಉಷ್ಣಾಂಶ 43 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಕಲಬುರಗಿ ಜನರಿಗೆ ತೀವ್ರ ಸಂಕಷ್ಟ ತಂದೊಡ್ಡಿತ್ತು. ಇದೀಗ ರಾಜ್ಯಾದ್ಯಂತ ವಾತಾವರಣ ಸಹಜ ಸ್ಥಿತಿಯತ್ತ ಬರುತ್ತಿದೆ.
ಉದ್ಯಾನ ನಗರಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳು ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳು ಎರಡು ತಿಂಗಳಿಂದ ಒಣಹವೆ ಅನುಭವಿಸಿದ್ದವು. ರಾಜ್ಯದಲ್ಲಿ ಫೆಬ್ರುವರಿ ಆರಂಭದಿಂದ ಬಿಸಿಲು ಆವರಿಸಲು ಆರಂಭವಾಯಿತು. ಮಾರ್ಚ್ ಹಾಗೂ ಏಪ್ರಿಲ್ ಮೊದಲ ವಾರದವರೆಗೂ ಇನ್ನಿಲ್ಲದಂತೆ ತೀವ್ರ ತಾಪಮಾನ ಕಾಡಿತ್ತು. ಹಲವು ಜಿಲ್ಲೆಗಳಲ್ಲಿ ನಿರಂತರವಾಗಿ 40 ಡಿಗ್ರಿ ಸೆಲ್ಸಿಯಸ್ ಗಿಂತಲೂ ಹೆಚ್ಚು ತಾಪಮಾನ ದಾಖಲಾಗಿತ್ತು.

ಮಳೆಯಿಂದಾಗಿ ಕೂಲ್ ವಾತಾವರಣ
ದೈನಂದಿನವಾಗಿ ಗರಿಷ್ಠ ತಾಪಮಾನದಲ್ಲಿ ಏರಿಕೆ ಆದರೆ, ಕನಿಷ್ಠ ತಾಪಮಾನದಲ್ಲಿ ಇಳಿಕೆ ಆಗಿತ್ತು. ಇದರಿಂದ ಬೆಳಗ್ಗೆ 8ಗಂಟೆಯಿಂದ ಸಂಜೆ ವರೆಗೆ ಶಾಖದ ಅಲೆ ಬೀಸಿದರೆ, ರಾತ್ರಿ ಸೆಕೆಯ ವಾತಾವರಣ ಕಂಡು ಬರುತ್ತಿತ್ತು. ತಂಪು ವಾತಾವರಣವೇ ಇಲ್ಲದೇ ಹೈರಾಣಾಗಿದ್ದ ಜನರಿಗೆ ರಾಜ್ಯ ವಿವಿಧೆಡೆ ಮಳೆ ಸುರಿಯುವ ಮೂಲಕ ಕೂಲ್ ವಾತಾವರಣ ನಿರ್ಮಿಸಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ಬಿಸಿಲು ದಾಖಲಾಗಿ ಜನರು ಹೊರ ಬರದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಏಪ್ರಿಲ್ ಮೊದಲ ವಾರದಿಂದ ಮಳೆರಾಯನ ದರ್ಶನವಾಗುತ್ತಿದೆ.
ಒಣಹವೆ ಕಂಡಿದ್ದ ಈ ಜಿಲ್ಲೆಗಳಲ್ಲಿ ಮಳೆ ಸಿಂಚನ
ಕೊಡಗು, ಚಿಕ್ಕಮಗಳೂರು, ವಿಜಯಪುರ, ಹಾವೇರಿ, ಧಾರವಾಡ, ಕೊಪ್ಪಳ, ಬೀದರ್, ಕಲಬುರಗಿ, ಶಿವಮೊಗ್ಗ, ಚಾಮರಾಜನಗರ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆಗಾಗ ಮಳೆಯ ಆಗಮನವಾಗುತ್ತಿದೆ. ಅಕ್ಕಪಕ್ಕದ ಪ್ರದೇಶಗಳಲ್ಲಿ ಬಿದ್ದ ಮಳೆಯಿಂದಲೂ ವಾತಾವರಣ ಕೂಲ್ ಆಗಿದೆ.

ಜಿಲ್ಲಾವಾರು ತಾಪಮಾನ ಮಾಹಿತಿ
ಅಲ್ಲಲ್ಲಿ ಮಳೆ ತಂಪೆರೆಯುತ್ತಿರುವ ಕಾರಣ ಹಲವು ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಕೆಲವೆಡೆ ಮೊದಲಿಗಿಂತಲೂ 2-3 ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆ ತಾಪಮಾನ ದಾಖಲಾಗುತ್ತಿದೆ. ಹೀಗಾಗಿ ಜನರು ನಿಟ್ಟುಸಿರುವ ಬಿಡುವಂತಾಗಿದೆ.
ಅತ್ಯಧಿಕ ಬಿಸಿಲು/ಶಾಖದ ಅಲೆ ಕಂಡಿದ್ದ ಕಲಬುರಗಿಯಲ್ಲಿ ಇದೀಗ 40 ಡಿಗ್ರಿ ಆಸುಪಾಸು ಬಿಸಿಲು ಕಂಡು ಬರುತ್ತಿದೆ. ಅದೇ ರೀತಿ, ಕಾರವಾರದಲ್ಲಿ 36.3 ಡಿಸೆ, ಬೀದರ್ 36.4 ಡಿಸೆ, ಧಾರವಾಡ 37 ಡಿಸೆ, ರಾಚಯೂರು 38.4ಡಿಸೆ, ದಾವಣಗೆರೆ, 38.5 ಡಿಸೆ, ವಿಜಯಪುರ 37 ಡಿಸೆ ತಾಪಮಾನ ದಾಖಲಾಗಿದೆ.
ಮುಂದಿನ ಏಪ್ರಿಲ್ 18ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅದರಲ್ಲಿ ಒಣಹವೆ ಸೃಷ್ಟಿಯಾಗಿದ್ದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಲ್ಲಿ ಬಿರುಗಾಳಿ ಸಹಿತ ಜೋರು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications