Karnataka Rains: ಮತ್ತೆ ಚಂಡಮಾರುತ ಪರಿಚಲನೆ: ರಾಜ್ಯದ ಈ ಭಾಗಕ್ಕೆ ಮಳೆ ಮುನ್ಸೂಚನೆ, ತಾಪಮಾನ ವಿವರ
ಬೆಂಗಳೂರು, ಮಾರ್ಚ್ 02: ಕರ್ನಾಟಕದಾದ್ಯಂತ ದಾಖಲಾಗುತ್ತಿರುವ ಒಣಹವೆ ನಡುವೆ ಮತ್ತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಬರುವ ಮುನ್ಸೂಚನೆ ಸಿಕ್ಕಿದೆ. ಚಂಡಮಾರುತ ಪರಿಚಲನೆಯ ಕಾರಣದಿಂದಾಗಿ ಮುಂದಿನ ಒಂದೆರಡು ದಿನಗಳ ಕಾಲ ರಾಜ್ಯದ ಕೆಲವೆಡೆ ಗುಡುಗು ಸಹಿತ ವ್ಯಾಪಕ ಮಳೆ ಆಗಲಿದೆ. ಮಳೆ ಬೀಳುವ ಪ್ರದೇಶಗಳನ್ನು ಬಿಟ್ಟು ಉಳಿದೆಡೆ ಒಣಹವೆ ಕಂಡು ಬರುವ ನಿರೀಕ್ಷೆ ಇದೆ ಎಂದು ಕರ್ನಾಟಕ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಾದ ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗಬಹುದು. ಕರಾವಳಿ ಜಿಲ್ಲೆಗಳಾದ ಉಡುಪಿ,ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ, ಹಾಸನ, ಶಿಮವೊಗ್ಗ, ಕೊಡಗು ಸೇರಿ ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ಮುಂದಿನ ಎರಡು ದಿನ ಚದುರಿದಂತೆ ಮಳೆ ಸುರಿಯುವ ಲಕ್ಷಣಗಳು ಇವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನಾ ವರದಿ ತಿಳಿಸಿದೆ.

ಕಳೆದ ಒಂದು ವಾರದ ಹಿಂದೆ ಎರಡು ದಿನ ಸಂಜೆ ಹಾವೇರಿ, ಬೆಳಗಾವಿ, ಗದಗ, ಹುಬ್ಬಳ್ಳಿ, ಕೊಡಗು, ಸಿರಸಿ, ಹಾನಗಲ್, ಉತ್ತರ ಕನ್ನಡದಲ್ಲಿ ಮಳೆ ಆಗಿತ್ತು. ಮಡಿಕೇರಿ, ಶಿರಸಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಅಬ್ಬರಿಸಿತ್ತು. ಇದು 2025ನೇ ವರ್ಷದ ಮೊದಲ ಮಳೆ ಆಗಿದೆ. ಇದೀಗ ರಾಜ್ಯಕ್ಕೆ ಮತ್ತೆ ಮಳೆಯ ಆಗಮನವಾಗುತ್ತಿದೆ.
ದಿಢೀರ್ ಮಳೆಗೆ ಕಾರಣವೇನು?
ಪಶ್ಚಿಮ ಸಮಭಾಜಕ ಹಿಂದೂ ಮಹಾಸಾಗರ ಮತ್ತು ಅದಕ್ಕೆ ಹೊಂದಿಕೊಂಡಿರುವ ಕೊಮೊರಿನ್-ಮಾಲ್ಡೀವ್ಸ್ ಪ್ರದೇಶದ ಮೇಲೆ ಸರಾಸರಿ ಸಮುದ್ರದಲ್ಲಿ ಚಂಡಮಾರುತ ಪರಿಚಲನೆ ಉಂಟಾಗಿದೆ. ಸಮುದ್ರ ವ್ಯಾಪ್ತಿಯಲ್ಲಿ ಬರೋಬ್ಬರಿ 5.8 ಕಿ.ಮೀ ವರೆಗೆ ಗಾಳಿಯು ವಿಸ್ತರಿಸಿಕೊಂಡಿದೆ. ಸರಾಸರಿ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಚಂಡಮಾರುತದ ಪರಿಚಲನೆ ಇದೆ. ಇದು ತನ್ನ ಮೂಲ ಸ್ಥಳದಿಂದ ಲಕ್ಷದ್ವೀಪದತ್ತ ಸಾಗುವ ನಿರೀಕ್ಷೆ ಇದೆ ಎಂದು ಕರ್ನಾಟಕ ಐಎಂಡಿ ವಿಜ್ಞಾನ ಡಾ.ಎನ್.ಪುವಿಯರಸನ್ ಮಾಹಿತಿ ನೀಡಿದ್ದಾರೆ.
ರಾಜ್ಯಕ್ಕೆ ಉಷ್ಣ ಅಲೆ ಎಚ್ಚರಿಕೆ
ಮುನ್ಸೂಚನೆ ಪ್ರಕಾರ, ಮಳೆ ಬೀಳುವ ಒಂದೆರಡು ಪ್ರದೇಶಗಳ ಹೊರತಾಗಿ, ಕರಾವಳಿ, ಉತ್ತರ ಕರ್ನಾಟಕ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಹಾವೇರಿ, ಬೆಳಗಾವಿ, ಬೀದರ್, ಭಾಗಲಕೋಟೆ, ಕಾರವಾರ, ವಿಜಯಪುರ, ಕಲಬುರಗಿ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಚಿತ್ರದುರ್ಗ, ವಿಜಯಪುರ, ಹಾಸನ, ಬಳ್ಳಾರಿ ಸೇರಿದಂತೆ ಬಹುತೇಕ ಎಲ್ಲ ಭಾಗಗಳಲ್ಲಿ ಉರಿವ ಬಿಸಿಲಿನ ತಾಪಮಾನ ಕಂಡು ಬರಲಿದೆ.
ಉ.ಕ. ಜಿಲ್ಲಾಧಿಕಾರಿಗಳ ಸಲಹೆ
ಉತ್ತರ ಕನ್ನಡದ ಜಿಲ್ಲಾಧಿಕಾರಿಗಳು ಗರಿಷ್ಠ ಬಿಸಿಲಿನ ತಾಪಮಾನ ವೇಳೆ ಜನರು ಮನೆಯಿಂದ ಹೊರ ಬರದೇ ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು. ಮಹಿಳೆಯರು, ಮಕ್ಕಳು, ವೃದ್ಧರು ಹೆಚ್ಚಿನ ಜಾಗೃತಿ ವಹಿಸಬೇಕು. ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳಬೇಕು. ತೆಳುವಾದ ಬಟ್ಟೆ ಧರಿಸಬೇಕು ಎಂದೆಲ್ಲ ಸಲಹೆ ನೀಡಿ ಆದೇಶ ಹೊರಡಿಸಿದ್ದಾರೆ.
ಮುಂದಿನ 48 ಗಂಟೆಗಳ ಮುನ್ಸೂಚನೆ
ರಾಜ್ಯದಲ್ಲಿ ಮುಂದಿನ 48 ಗಂಟೆಗಳ ಭಾಗಶಃ ಮೋಡ ಕವಿದ ಆಕಾಶ ಕೆಲವೆಡೆ ಕಂಡು ಬರಲಿದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ಹೆಚ್ಚಾಗಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಮಂಜು ಬೀಳುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 32°C ಮತ್ತು 20°C ಇರುವ ಸಾಧ್ಯತೆ ಇದೆ ಎಂದು ಹಾವಾಮಾನ ಇಲಾಖೆ ತಿಳಿಸಿದೆ.
ಇನ್ನೂ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಂಜು ಇರುವ ಸಾಧ್ಯತೆ ಹೆಚ್ಚು. ಉತ್ತರ ಒಳನಾಡಿನಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 30-40 ಕಿಲೋ ಮೀಟರ್ ವೇಗ ಕಂಡು ಬರುವ ನಿರೀಕ್ಷೆಗಳು ಇವೆ.












Click it and Unblock the Notifications