Karnataka Rain: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯುವ ಮುನ್ಸೂಚನೆ
ಕರ್ನಾಟಕ, ಜೂನ್, 02: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸಿ ಬೊಬ್ಬೆರೆದಿದ್ದು, ಇದರಿಂದ ಹಲವೆಡೆ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಮುಂಗಾರು ಪೂರ್ವ ಮಳೆಗೆ ಹೀಗಾದರೆ ಇನ್ನು ಮುಂಗಾರು ಮಳೆ ಸಮೀಪವಿದ್ದು, ಇದರಿಂದ ಇನ್ನೆಷ್ಟು ಅನಾಹುತಗಳು ಸಂಭವಿಸುತ್ತವೆಯೋ ಎನ್ನುವ ಭೀತಿ ರಾಜ್ಯದ ಜನರನ್ನು ಕಾಡುತ್ತಿದೆ. ಅಲ್ಲದೆ ಶುಕ್ರವಾರವೂ ಕೂಡ ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಶುಕ್ರವಾರ ಜೂನ್ 2ರಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಹಾಗದಾರೆ ಯಾವ ಭಾಗಗಳಲ್ಲಿ ಹೆಚ್ಚು ಮಳೆಯಾಗಲಿದೆ ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ. ನಿನ್ನೆ ಅಂದರೆ ಗುರುವಾರ ಸಿಲಿಕಾನ್ ಸಿಟಿಯಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಬಿಸಿಲಿನ ವಾತಾವರಣ ಇದ್ದು, ಬಳಿಕ ರಾತ್ರೋರಾತ್ರಿ ಗುಡುಗು, ಸಿಡಿಲು ಸಹಿತ ಮಳೆರಾಯ ಅಬ್ಬಸಿದ್ದಾನೆ.

ಮಳೆ ಪಡೆಯಲಿರುವ ಜಿಲ್ಲೆಗಳು
ರಾಜ್ಯದ ಹಲವೆಡೆ 3-4 ದಿನಗಳ ಕಾಲ ಭಾರಿ ಮಳೆ ಆಗುವ ಮುನ್ಸೂಚನೆ ಇದ್ದು, ಜೂನ್ 2ರಂದು ಬೆಂಗಳೂರು ಸೇರಿದಂತೆ ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗದಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದು, ಸಂಜೆ ಅಥವಾ ರಾತ್ರಿ ವೇಳೆ ಗುಡುಗು ಸಹಿತ ಅಬ್ಬರದ ಮಳೆಯಾಗುವ ಸಾಧ್ಯೆತೆಯಿದೆ ಎಂದು ತಿಳಿಸಿದೆ.
ಇನ್ನು ಕಳೆದ ಮೂರು ದಿನಗಳ ಹಿಂದೆ ಸುರಿದ ಮಳೆ ನಗರ ಹಲವೆಡೆ ಭಾರೀ ಅವಾಂತರಗಳನ್ನೇ ಸೃಷ್ಟಿ ಮಾಡಿತ್ತು. ನಗರದ ಕೆಲವೆಡೆ ಬೃಹತ್ ಮರಗಳು ರಸ್ತೆಗುರುಳಿ, ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಇದರಿಂದ ವಾಹನ ಸವಾರರು ಕೂಡ ಪರದಾಡಿದ್ದರು. ಅಲ್ಲದೆ ರಸ್ತೆಗುರುಳಿದ್ದ ಮರಗಳನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸುವ ಕೆಲಸವನ್ನೂ ಮಾಡಿದ್ದರು. ಹಾಗೆಯೇ ಮತ್ತೊಂದೆಡೆ ಮಳೆ ಬಂದಂತಹ ಸಂದರ್ಭದಲ್ಲಿ ಅಂಡರ್‌ಪಾಸ್‌ಗಳಲ್ಲಿ ತೆರಳದಂತೆ ಪೊಲೀಸರು ವಾಹನ ಸವಾರರಿಗೆ ಜಾಗೃತಿ ಮೂಡಿಸಿದ ಘಟನೆಗಳು ನಡೆದವು.
ಜಿಲ್ಲಾವಾರು ದಾಖಲಾದ ಮಳೆಯ ವಿವರ
ಇನ್ನು ನಿನ್ನೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಆರ್ಭಟ ಮುಂದುವರೆದಿತ್ತು. ಹಾವೇರಿ ಜಿಲ್ಲೆಯ ಶಿಗ್ಗಾವಿ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ತಲಾ 5 ಸೆಂಟಿ ಮೀಟರ್ ಮಳೆ ಸುರಿದಿದ್ದು, ಇನ್ನುಳಿದಂತೆ ಉತ್ತರ ಕನ್ನಡದ ಜಗಲಬೆಟ್‌ನಲ್ಲಿ 4 ಸೆಂಟಿ ಮೀಟರ್ ಮಳೆ ಸುರಿದಿದೆ ಎಂದು ತಿಳಿದುಬಂದಿದೆ.
ಹಾಗೆಯೆ ಸುಬ್ರಹ್ಮಣ್ಯ, ಮಂಚಿಕೆರೆ, ಲೋಂಡಾ, ಸವಣೂರು, ಕಡೂರು, ಯಗಟಿ, ಬಾಳೆಹೊನ್ನೂರು, ಚಿಕ್ಕಮಗಳೂರು, ಸುತ್ತೂರು ತಲಾ 3 ಸೆಂಟಿ ಮೀಟರ್, ಉಡುಪಿ, ರಾಯಚೂರು, ಹಂಗಲ್, ಗುತ್ತಲ್, ಭದ್ರಾವತಿ, ಆನವಟ್ಟಿ, ಮಳವಳ್ಳಿ, ಬುಕ್ಕಪಟ್ಟಣದ ಭಾಗಗಳಲ್ಲಿ 2 ಸೆಂಟಿ ಮೀಟರ್ ಮಳೆ ಸುರಿದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮತ್ತೊಂದೆಡೆ ಬನವಾಸಿ, ಹಳಿಯಾಳ, ಸಿದ್ದಾಪುರ, ಲೋಕಾಪುರ, ಇಳಕಲ್, ಗದಗ, ಸಂಕೇಶ್ವರ, ಲಕ್ಷ್ಮೇಶ್ವರ, ಧಾರವಾಡ, ಕಲಘಟಗಿ, ಹುಬ್ಬಳ್ಳಿ, ಕೆಂಭಾವಿ, ಮುದಗಲ್, ಚಾಮರಾಜನಗರ, ಚನ್ನಪಟ್ಟಣ, ಬಿ ದುರ್ಗ, ಚನ್ನಗರಿ, ಸಲಕೇಶಪುರ, ಶ್ರವಣಬೆಳಗೊಳದಲ್ಲಿ ತಲಾ 1 ಸೆಂಟಿ ಮೀಟರ್ ಮಳೆ ಸುರಿದಿದ ಎಂದು ತಿಳಿದುಬಂದಿದೆ.
ಮುಂಗಾರು ಮಳೆ ಮುನ್ಸೂಚನೆ
ಒಂದು ವಾರದಿಂದ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬೆರೆದುದ್ದಾನೆ. ಹಾಗೆಯೆ ಜೂನ್ 4 ರಂದು ಪಕ್ಕದ ರಾಜ್ಯ ಕೇರಳಕ್ಕೆ ಮುಂಗಾರು ಪ್ರವೇಶ ಮಾಡಲಿದೆ. ಆಗ ರಾಜ್ಯದ ಕರಾವಳಿ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಮಂಡ್ಯ, ಹಾಸನ, ಮೈಸೂರು ಸೇರಿದಂತೆ ಹಲವೆಡೆ ಭಾರಿ ಮಳೆ ಬೀಳುವ ಸಾಧ್ಯೆತೆಯಿದೆ ಎಂದು ತಿಳಿಸಿದೆ.
ಇನ್ನು ಜೂನ್ 7ರಂದು ಕರ್ನಾಟಕಕ್ಕೆ ಮುಂಗಾರು ಮಳೆ ಪ್ರವೇಶ ಮಾಡಲಿದೆ ಎನ್ನುವ ಮುನ್ಸೂಚನೆ ಇದೆ. ಆದ್ದರಿಂದ ರಾಜ್ಯದಲ್ಲಿ ಹಲವೆಡೆ ಅನ್ನದಾತರು ಬಿತ್ತನೆ ಕಾರ್ಯಕ್ಕೆ ಎಲ್ಲಾ ರೀತಿಯ ತಯಾರಿಗಳನ್ನು ಈಗಿನಿಂದಲೇ ಮಾಡಿಕೊಂಡಿದ್ದಾರೆ. ಅಲ್ಲದೆ ಇನ್ನೇನು ಮುಂಗಾರು ಸಮೀಪದಲ್ಲಿದ್ದು, ಈ ಮಳೆಯಿಂದ ಯಾವುದೇ ಅನಾಹುತಗಳು ಆಗಬಾರದೆಂದು ಜಿಲ್ಲಾವರು ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.












Click it and Unblock the Notifications