Karnataka Rains: ರಾಜ್ಯದ ಈ ಜಿಲ್ಲೆಗಳಲ್ಲಿ ಭಾನುವಾರ ಸುರಿದ ಭಾರೀ ಮಳೆ, ಮುನ್ಸೂಚನೆ ಹೀಗಿದೆ
ಬೆಂಗಳೂರು, ಫೆಬ್ರವರಿ 23: ಕರ್ನಾಟಕ ರಾಜ್ಯದಲ್ಲಿ ರಣ ಬಿಸಿಲಿನೊಂದಿಗೆ ಬೇಸಿಗೆ ಆರಂಭವಾಗಿದ್ದರ ಮಧ್ಯೆಯ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸುರಿಯಲಾರಂಭಿಸಿದೆ. ಕೆಲವು ದಿನಗಳಿಂದ ಉತ್ತರ ಕರ್ನಾಟಕದ ಭಾಗಗಳಲ್ಲಿ ಸಂಜೆ ಅಕಾಲಿಕ ಮಳೆಯಾಗುತ್ತಿದೆ. ಬದಲಾದ ಹವಾಮಾನ ವೈಪರಿತ್ಯಗಳ ಪ್ರಭಾವದಿಂದ ಮಳೆ ದಾಖಲಾಗುತ್ತಿದ್ದು, ಇಂದು ಭಾನುವಾರವು (ಫೆಬ್ರವರಿ 23) ಸಂಜೆ 5ಗಂಟೆಯಿಂದ ಭಾರೀ ಮಳೆ ಆಗಿದೆ.
ಉತ್ತರ ಕರ್ನಾಟಕದ ಹಾವೇರಿ, ಗದಗ, ಬೆಳಗಾವಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಗುಡುಗ ಮಿಂಚು ಸಹಿತ ವ್ಯಾಪಕ ಮಳೆ ದಾಖಲಾಗಿದೆ. ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಒಂದೇ ಸಮನೆ ಮಳೆ ಆಯಿತು. ಮಳೆಗಾಲದಲ್ಲಿ ಸುರಿವ ಮಳೆಯಂತೆ ಭಾನುವಾರ ಜೋರಾಗಿ ಆರ್ಭಟಿಸಿದೆ. ಈ ಮಳೆಗೆ ಉತ್ತರ ಕನ್ನಡದ ಭಾಗದ ಅಡಕೆ ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ.

ಈ ಮಳೆ ಬೀಳುತ್ತಿರುವ ಕೆಲವು ಜಿಲ್ಲೆಗಲ್ಲಿ ಮಧ್ಯಾಹ್ನವರೆಗೆ ಬಿಸಿಲು ಕಂಡು ಬರುತ್ತಿದ್ದು, ಸಂಜೆ ನೋಡ ನೋಡುತ್ತಿದ್ದಂತೆ ಮಿಂಚು, ಗುಡುಗಿನ ಸದ್ದು ಕೇಳಿ ಬರುತ್ತದೆ. ನಂತರ ಕೆಲವೇ ಕ್ಷಣಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗುತ್ತಿದೆ. ಕೆಲವಡೆ ವ್ಯಾಪಕ ಮಳೆ ಅಬ್ಬರ ಕಂಡು ಬಂದಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ, ಶಿಕಾರಿಪುರ, ತಟ್ಟೂರು, ಹೊಸನಗರ, ಹಾನಗಲ್, ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ, ಅಕ್ಕಿ ಆಲೂರು ಹಾಗೂ ಬೆಳಗಾವಿ ಜಿಲ್ಲೆಯ ಖಾನಾಪುರ, ಗುಂಜಿ, ಬಿಡಿ, ಕಿತ್ತೂರು ಸೇರಿದಂತೆ ಇನ್ನಿತರ ಭಾಗಗಳಲ್ಲಿ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.

ಮುಂದಿನ ಮೂರು ದಿನ ಮಳೆ ಮುನ್ಸೂಚನೆ
ಉತ್ತರ ಕರ್ನಾಟಕದ ಇದೇ ಜಿಲ್ಲೆಗಳು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆ ಅಬ್ಬರಿಸಲಿದೆ. ಎಂದಿನಂತೆ ಬೆಳಗ್ಗೆಯಿಂದ ಬಿಸಿಲು ಕಾದರು ನಂತರ ಸಂಜೆ ಇಳೆಗೆ ಮಳೆ ತಂಪೆರೆಯಲಿದೆ. ಗುಡುಗು ಮಿಂಚು ಸಹಿತ ಮಳೆರಾಯ ಆರ್ಭಟಿಸಲಿದ್ದಾನೆ. ಹಿಂಗಾರು ಬಿತ್ತನೆ ಕೈಗೆ ಬಂದ ರೈತಲು ಕೊಯ್ಲು ಮಾಡಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಡಿಕೆ ಬೆಳೆಗಾರರು ಮಾತ್ರ ವಲ್ಲದೇ ಮೆಕ್ಕೆಜೋಳ, ಕಡಲೇ, ಸೂರ್ಯಕಾಂತಿ ಇನ್ನಿತರ ಬೆಳೆ ಬೆಳೆದ ರೈತರು ಅಕಾಲಿಕ ಮಳೆಗೆ ತುತ್ತಾಗುವ ಸಾಧ್ಯತೆ ಇದೆ.
ಅನೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಕೆ
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಬಳ್ಳಾರಿ, ತುಮಕೂರು, ದಾವಣಗೆರೆ, ವಿಜಯನಗರ, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ದಾವಣಗೆರೆ, ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಫೆಬ್ರವರಿ ತಿಂಗಳಲ್ಲಿ ಕಂಡು ಬಂದ ತಾಪಮಾನ ಮುಂದಿನ ಮಾರ್ಚ್‌ನಲ್ಲೂ ಹೀಗೆ ಮುಂದುವರಿಯಲಿದೆ. ಈ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications