Karnataka Rains: ಚಂಡಮಾರುತ ಪ್ರಸರಣ! ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂದಿನ 5 ದಿನ ವ್ಯಾಪಕ ಮಳೆ
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಸಕ್ರಿಯವಾಗಿದೆ. ಆದರೆ ವಿಶೇಷವೆಂದರೆ ಈ ಬಾರಿ ದಕ್ಷಿಣ ಒಳನಾಡು ಜಿಲ್ಲೆಗಳ ಭಾಗದಲ್ಲಿ ಹೆಚ್ಚಿನ ಮಳೆ ಸುರಿಸುವ ಸಾಧ್ಯತೆ ಇದೆ. ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯುವ ಲಕ್ಷಣಗಳು ಇವೆ. ಕಳೆದ 24 ಗಂಟೆಯಲ್ಲಿ ವಿವಿಧ ಕಡೆಗಳಲ್ಲಿ ಜೋರು ಮಳೆ ದಾಖಲಾಗಿದೆ. ಇನ್ನು ಚಂಡಮಾರುತ ಪ್ರಸರಣ ಉಂಟಾಗಿದ್ದು, ಮುಂಗಾರು ವಿಸ್ತರಣೆ ಆಗುವ ಸಾಧ್ಯತೆಗಳು ಇವೆ ಎಂಬ ಮುನ್ಸೂಚನೆ ಇದೆ.
ಹವಾಮಾನ ಇಲಾಖೆ ಪ್ರಕಾರ, ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತ, ಬಂಗಾಳ ಕೊಲ್ಲಿಯಲ್ಲಿನ ವಾಯು ಚಂಡಮಾರುತ ಪ್ರಸರಣದ ಪ್ರಭಾವ ರಾಜ್ಯದ ಮೇಲಾಗಿದೆ. ಹೀಗಾಗಿ ಮುಂದಿನ ಮೂರರಿಂದ ಐದು ದಿನ ದಕ್ಷಿಣ ಒಳನಾಡಿನ ಚಾಮರಾಜನಗರ, ರಾಮನಗರ, ಮೈಸೂರು, ಮಂಡ್ಯ, ಕೋಲಾರ ಮತ್ತು ಬೆಂಗಳೂರು (ಗ್ರಾಮಾಂತರ) ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಲಕ್ಷಣಗಳು ಇವೆ ಎಂದು ತಿಳಿಸಲಾಗಿದೆ.

ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಹಾಸನ ಜಿಲ್ಲೆಗಳ ಕೆಲವು ಕಡೆಗಳಲ್ಲೂ ಜೋರು ಗಾಳಿ ಬೀಸಲಿದೆ. ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಸಹಿತ ಹಗುರ ಮಳೆ ಅಥವಾ ಗುಡುಗು ಸಹಿತ ವ್ಯಾಪಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈ ಭಾಗದಲ್ಲಿ ಒಣಹವೆ ಮುಂದುವರಿಕೆ
ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕರಾವಳಿ ಭಾಗ ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಇಲ್ಲಿ ಕೆಲವೆಡೆ ಮೋಡ ಮುಸುಕಿನ ವಾತಾವರಣ ಕಂಡು ಬಂದರೂ ಸದ್ಯಕ್ಕೆ ಮಳೆ ಆಗುವುದು ಅನುಮಾನ. ಕಲಬುರಗಿ, ಬಳ್ಳಾರಿ, ಬಾಗಲಕೋಟೆ, ಗದಗ, ಕೊಪ್ಪಳ, ಬೀದರ್, ವಿಜಯಪುರ, ಬೆಳಗಾವಿ, ಹಾವೇರಿ ಭಾಗದಲ್ಲಿ ಅತ್ಯಧಿಕ ಬಿಸಿಲಿನ ವಾತಾವರಣ ಕಂಡು ಬರಲಿದೆ.
ವಾಯುಭಾರ ಕುಸಿತ, ಚಂಡಮಾರುತ ಪ್ರಸರಣ
ಈಶಾನ್ಯ ಅರೇಬಿಯನ್ ಸಮುದ್ರದ ಮೇಲಿನ ವಾಯುಭಾರ ಕುಸಿತ ಉಂಟಾಗಿದೆ. ಅದು ಅಲ್ಲಿಂದ ಲಕ್ಕೋ, ಗಯಾ, ಸಾಗರ್ ದ್ವೀಪ ಮತ್ತು ಆಗ್ನೆಯ ದಿಕ್ಕಿನಲ್ಲಿ ಈಶಾನ್ಯ ಬಂಗಾಳ ಕೊಲ್ಲಿಯವರೆಗೆ ಹಾದುಹೋಗಲಿದೆ. ನೆನ್ನೆ ಉತ್ತರ ಥೈಲ್ಯಾಂಡ್‌ನ ಮೇಲೆ ಮೇಲೆ ವಾಯುಮಂಡಲದ ಚಂಡಮಾರುತದ ಪರಿಚಲನೆಯು ಕಂಡು ಬಂದಿದೆ. ಅದು ಸಮುದ್ರ ಮಟ್ಟದಿಂದ 7.6 ಕಿ.ಮೀ ಎತ್ತರದವರೆಗೆ ವ್ಯಾಪಿಸಿದೆ.
ಈ ವೈಪರೀತ್ಯವು ಸೆ.18ರ ಸಂಜೆಯ ವೇಳೆಗೆ ಉತ್ತರ ಅಂಡಮಾನ್ ಸಮುದ್ರದತ್ತ ಪ್ರವೇಶಿಸಲಿದೆ. ಅದರಿಂದ ಸೆ.19 ರಂದು ಸಂಜೆಯ ವೇಳೆಗೆ ಅದೇ ಪ್ರದೇಶದಲ್ಲಿ ವಾಯುಭಾರ ಕುಸಿತದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ. ಬಳಿಕ ಅದು ತೀವ್ರಗೊಂಡು ಮುಂದಿನ 3-4 ದಿನಗಳಲ್ಲಿ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ದಕ್ಷಿಣ ಒಡಿಶಾ-ಉತ್ತರ ಆಂಧ್ರಪ್ರದೇಶ ಕರಾವಳಿಯತ್ತ ಚಲಿಸಲಿದೆ. ಈ ವೇಳೆ ಕರ್ನಾಟಕದ ದಕ್ಷಿಣ ಭಾಗಗಳಲ್ಲಿ ಮತ್ತಷ್ಟು ಮಳೆ ನಿರೀಕ್ಷಿಸಬಹುದಾಗಿದೆ.
ಬೆಂಗಳೂರು ಹವಾಮಾನ ವರದಿ
ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಇದೇ ರೀತಿಯ ತಂಪು ವಾತಾವರಣ ಆಗಾಗ ಹಗುರದಿಂದ ಸಾಮಾನ್ಯ ಮಳೆ ಆಗಬಹುದು. ಕೆಲವು ಪ್ರತ್ಯೇಕ ಸ್ಥಳಗಳಲ್ಲಿ ವ್ಯಾಪಕ ಮಳೆ ನಿರೀಕ್ಷಿಸಬಹುದು. ಒಟ್ಟಾರೆ ನಗರಾದ್ಯಂತ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಟಬಹುದು. ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ.
ನೆನ್ನೆ ಎಲ್ಲೆಲ್ಲಿ ಎಷ್ಟು ಮಳೆ ಆಯಿತು
ಹೆಸರಘಟ್ಟ (ಬೆಂಗಳೂರು ನಗರ ಜಿಲ್ಲೆ.) 6 ಸೆಂಟಿ ಮೀಟರ್, ಬೆಂಗಳೂರು ನಗರ ವೀಕ್ಷಣಾಲಯ (ಬೆಂಗಳೂರು ನಗರ ಜಿಲ್ಲೆ.) 6 ಸೆಂ.ಮೀ, ಮದ್ದೂರು (ಮಂಡ್ಯ ಜಿಲ್ಲೆ.) 5 ಸೆಂ.ಮೀ, ಚಿಂತಾಮಣಿ ಪಿಟಿಒ (ಚಿಕಬಳ್ಳಾಪುರ ಜಿಲ್ಲೆ.) 4ಸೆಂ.ಮೀ, ಹೊನಕೆರೆ (ಮಂಡ್ಯ ಜಿಲ್ಲೆ.) 4ಸೆಂ.ಮೀ, ಕಿಬ್ಬನಹಳ್ಳಿ (ತುಮಕೂರು ಜಿಲ್ಲೆ.) ಕೆ ಆರ್ ನಗರ (ಮೈಸೂರು ಜಿಲ್ಲೆ.) ತಲಾ 3 ಸೆಂ.ಮೀ, ಕೃಷ್ಣರಾಜಸಾಗರ (ಮಂಡ್ಯ ಜಿಲ್ಲೆ.) 3ಸೆಂ.ಮೀ, ಮೈಸೂರು (ಪಿಟಿಒ) 2ಸೆಂ.ಮೀ, ನಾಗಮಂಗಲ (ಮಂಡ್ಯ ಜಿಲ್ಲೆ.) 1ಸೆಂ.ಮೀ ಮಳೆ ದಾಖಲಾಗಿದೆ ಎಂದು ಐಎಂಡಿ ವರದಿ ತಿಳಿಸಿದೆ.


Click it and Unblock the Notifications
