ರಾಜ್ಯದಲ್ಲಿ ಹೆಚ್ಚಿದ ಬಿಸಿಲಿನ ಬೇಗೆ: ದಾಖಲೆ ಮಟ್ಟಕ್ಕೆ ತಲುಪಿದ ವಿದ್ಯುತ್ ಬಳಕೆ; ಬೆಸ್ಕಾಂ ವ್ಯಾಪ್ತಿಯಲ್ಲಿ ಹೆಚ್ಚು ಬೇಡಿಕೆ
ಬೆಂಗಳೂರು: ರಾಜ್ಯದಾದ್ಯಂತ ಬೇಸಿಗೆ ಬಿಸಿಲು ಹೆಚ್ಚಾಗುತ್ತಿದೆ. ಎಲ್ಲೆಡೆ ಗರಿಷ್ಠ ತಾಪಮಾನದಲ್ಲಿ ಏರಿಕೆ ದಾಖಲಾಗುತ್ತಿದೆ. ಇತ್ತ ವಿದ್ಯುತ್ ಬೇಡಿಕೆಯೂ ಹೆಚ್ಚುತ್ತಿದೆ. ರಾಜ್ಯ ಲೋಡ್ ಡಿಸ್ಪ್ಯಾಚ್ ಸೆಂಟರ್ (SLDC) ನೀಡಿರುವ ಮಾಹಿತಿ ಪ್ರಕಾರ, ಈ ವರ್ಷ ಜನವರಿ ಅಂತ್ಯದಿಂದ ಈವರೆಗೆ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಜನರು ವಿದ್ಯುತ್ ಬಳಕೆಯು ವ್ಯಾಪಕವಾಗಿ ಏರಿದೆ ಎಂದು ತಿಳಿಸಿದೆ.
SLDC ಪ್ರಕಾರ, 2026 ಜನವರಿ 30 ರಂದು ಒಂದೇ ದಿನ ಕರ್ನಾಟಕದಲ್ಲಿ ಬೆಳಗ್ಗೆ 9.54ಕ್ಕೆ 321.53 ಮಿಲಿಯನ್ ಯೂನಿಟ್ (MU) ಮತ್ತು ಫೆಬ್ರವರಿ 9 ರಂದು ಬೆಳಗ್ಗೆ 10.19 ಕ್ಕೆ 326.78 ಎಂಯುನಷ್ಟು ಗರಿಷ್ಠ ವಿದ್ಯುತ್ ಬಳಕೆ ಆಗಿದೆ ಎಂಬ ಮಾಹಿತಿ ಪತ್ತೆ ಮಾಡಿದೆ. ಕರ್ನಾಟಕದಲ್ಲಿ ವಿದ್ಯುತ್ ಗರಿಷ್ಠ ಉತ್ಪಾದನೆಯು ಅದೇ ಬಳಕೆಯ ಅವಧಿಯಲ್ಲಿ ಕ್ರಮವಾಗಿ 16,791 ಎಂಯು ಹಾಗೂ 16,901ಎಂಯು ದಾಖಲೆಯಷ್ಟು ಹೆಚ್ಚಾಗಿದೆ ಎಂದು TNIE ವರದಿ ಮಾಡಿದೆ.

ಕರ್ನಾಟಕ ಒಟ್ಟು ವಿದ್ಯುತ್ ಬಳಕೆಯಲ್ಲಿ ಶೇ. 50 ರಷ್ಟು ಕೊಡುಗೆಯನ್ನು ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ಲಿಮಿಟೆಡ್ (ಬೆಸ್ಕಾಂ) ನೀಡುತ್ತಿದೆ. ಅದರ ವ್ಯಾಪ್ತಿಯಲ್ಲೂ ಬಳಕೆಯು (ಜನವರಿ 30 ರಂದು 154.02 ಎಂಯು ವಿದ್ಯುತ್ ಬಳಕೆ) ಗರಿಷ್ಠ ಮಟ್ಟವನ್ನು ದಾಖಲಿಸಿದೆ. ಫೆಬ್ರವರಿ 5 ರಂದು ಮತ್ತೆ (153.39 ಎಂಯು) ಗರಿಷ್ಠ ಮಟ್ಟ ದಾಖಲಿಸಿದೆ ಎಂದು SLDC ಅಂಕಿ ಸಂಖ್ಯೆಗಳನ್ನು ನೀಡಿದೆ.
ಮಾರ್ಚ್ ನಲ್ಲಿ ಇಂಧನ ಇಲಾಖೆಯ ಕೆಲಸ ಪೂರ್ಣ
ಈ ಮೇಲಿನ ವಿದ್ಯುತ್ ಬಳಕೆ ಹೆಚ್ಚಳವು ಬರೀ ವಸತಿ ಮಾತ್ರವಲ್ಲದೇ ವಾಣಿಜ್ಯ ವಲಯದಲ್ಲೂ ಹೆಚ್ಚಾಗಿದೆ. ಸಂಜೆಗಳು ತಂಪಾಗಿದ್ದರೂ ಹಗಲು ಬಿಸಿಲು ಏರುಗತಿಯಲ್ಲಿದೆ. ಸರ್ಕಾರ ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳುತ್ತಿದೆ. ಅದಕ್ಕಾಗಿ ಪ್ರತಿ ವಿಭಾಗದಿಂದ ನಿರಂತರ ವರದಿ ಪಡೆಯಲಾಗುತ್ತಿದೆ. ವಿದ್ಯುತ್ ಪೂರೈಕೆಯ ಮಾರ್ಗ, ಗ್ರಿಡ್‌ಗಳ ನಿರ್ವಹಣೆ ತೀವ್ರಗೊಂಡಿದೆ. ಮಾರ್ಚ್ ಅಂತ್ಯದ ಮೊದಲು ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸುವುದು ನಮ್ಮ ಗುರಿ ಎಂದು ಇಂಧನ ಇಲಾಖೆಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ಇಂಧನ ಬೇಡಿಕೆ ಹೆಚ್ಚಾಗಿಲ್ಲ
ಖುಷಿಯ ವಿಚಾರವೆಂದರೆ ಕಳೆದ ವರ್ಷಗಳಲ್ಲಿ ಇದೇ ಅವಧಿಯಲ್ಲಿ ಇದ್ದ ಅತ್ಯಧಿಕ ಬೇಡಿಕೆ ಈ ವರ್ಷ ಇನ್ನೂವರೆಗೆ ಬಂದಿಲ್ಲ. ಹೀಗಾಗಿ ಇಲಾಖೆ ಎಚ್ಚರದಿಂದಿರಲು ಬಯಸಿಲ್ಲ. ಬದಲಾಗಿ ಲೈನ್ ನಿರ್ವಹಣಾ ಸಮಸ್ಯೆ ಪರಿಹರಿಸಿದೆ. ವಿದ್ಯುತ್ ಪೂರೈಕೆಯ ಗ್ರಾಫ್‌ಗಳನ್ನು ಅಧ್ಯಯನ ಮಾಡಲು ಮತ್ತು ಹವಾಮಾನ ವ್ಯವಸ್ಥೆಗಳನ್ನು ನಿರಂತರವಾಗಿ ಟ್ರ್ಯಾಕ್ ಮಾಡುತ್ತಿದೆ. ಐಎಂಡಿ ವಿಜ್ಞಾನಿಗಳು ತಿಳಿಸಿರುವ ಪ್ರಕಾರ, ಹಗಲು ತಾಪಮಾನ ಹೆಚ್ಚಳ, ಒಣಹವೆ ದಾಖಲಾಗುತ್ತಿದೆ. ಉಳಿದಂತೆ ಬೆಳಗ್ಗೆ, ರಾತ್ರಿ ಕನಿಷ್ಠ ತಾಪಮಾನ ಎಂದಿನಂತೆ ಸಾಮಾನ್ಯವಾಗಿದೆ ಎಂದು ತಿಳಿಸಿದೆ. ಹೀಗಾಗಿ ವಿದ್ಯುತ್ ಬೇಡಿಕೆ ಹೆಚ್ಚಾಗಿಲ್ಲ ಎನ್ನಲಾಗಿದೆ.
ಉತ್ತರ ಕರ್ನಾಟಕದ ಧಾರವಾಡ, ಗದಗ, ಹಾವೇರಿ, ಬೀದರ್, ಬಾಗಲಕೋಟೆ, ವಿಜಯಪುರ, ರಾಯಚೂರು ಸೇರಿದಂತೆ ಈ ಭಾಗಗಳಲ್ಲಿ ಕನಿಷ್ಠ ತಾಪಮಾನವು 11 ರಿಂದ 15 ಡಿಗ್ರಿ ಸೆಲ್ಸಿಯಸ್ ನಷ್ಟಿದೆ. ಇನ್ನೂ ದಕ್ಷಿಣ ಒಳನಾಡಿನಲ್ಲಿ ಹಾಸನ, ದಾವಣಗೆರೆ, ಮಂಡ್ಯ, ಶಿವಮೊಗ್ಗ, ಬೆಂಗಳೂರು, ಚಿತ್ರದುರ್ಗ ಮತ್ತು ಮೈಸೂರು ಸೇರಿದಂತೆ ಕನಿಷ್ಠ ತಾಪಮಾನ 15-18 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಕರಾವಳಿಯಲ್ಲಿ ಶುಷ್ಕ ವಾತಾವರಣ ಹೆಚ್ಚಿದೆ.












Click it and Unblock the Notifications