ಕರ್ನಾಟಕದಿಂದ ಕಾವೇರಿ ಕಲುಷಿತ : ವರದಿಗೆ ಸುಪ್ರೀಂ ಆದೇಶ
ನವದೆಹಲಿ, ಜುಲೈ 07 : ಕರ್ನಾಟಕ ಕಾವೇರಿ ನೀರನ್ನು ಕಲುಷಿತಗೊಳಿಸುತ್ತಿದೆ ಎಂದು ತಮಿಳುನಾಡು ಹೂಡಿರುವ ಅರ್ಜಿಗೆ ಸಂಬಂಧಿಸಿದಂತೆ 6 ತಿಂಗಳಲ್ಲಿ ಈಕುರಿತು ವರದಿ ಸಲ್ಲಿಸುವಂತೆ ಕೇಂದ್ರ ಕೊಳಚೆ ನಿರ್ಮೂಲನಾ ಮಂಡಳಿಗೆ ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.
ಔದ್ಯೋಗಿಕ ತ್ಯಾಜ್ಯ ಮತ್ತು ಸಂಸ್ಕರಿಸದ ಚರಂಡಿ ನೀರನ್ನು ಕಾವೇರಿಗೆ ಮತ್ತು ಪೆಣ್ಣಿಯಾರ್ ನದಿಗಳಿಗೆ ಕರ್ನಾಟಕ ಬಿಡುತ್ತಿದೆ ಎಂದು ತಮಿಳುನಾಡು ಆರೋಪಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಆ ಅರ್ಜಿಯನ್ನು ಆಲಿಸಿರುವ ಸುಪ್ರೀಂ ಕೋರ್ಟ್ ಮೇಲಿನಂತೆ ಆದೇಶ ನೀಡಿದೆ.
ತಮಿಳುನಾಡಿನಲ್ಲಿ ಮಾತ್ರವಲ್ಲ ಕರ್ನಾಟಕದಲ್ಲೂ ಕಾವೇರಿ ನೀರು ಕಲುಷಿತವಾಗುತ್ತಿದೆ ಎಂಬುದು ಸತ್ಯ ಸಂಗತಿ. ಕರ್ನಾಟಕದಲ್ಲಿ ಹರಿಯುತ್ತಿರುವ ನೀರಿಗೆ 'ಬಿ ಗ್ರೇಡ್' ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿಯೇ ನೀಡಿದೆ. ಕಾವೇರಿ ನೀರನ್ನು ಶುದ್ಧೀಕರಿಸದೆ ಕುಡಿಯುವಂತಿಲ್ಲ ಎಂದು ವರದಿ ನೀಡಿದೆ.
ಒಂದಾನೊಂದು ಕಾಲದಲ್ಲಿ ಎ ಗ್ರೇಡ್ ಪಡೆದು ಶುದ್ಧೀಕರಿಸದೆ ಕುಡಿಯಲು ಯೋಗ್ಯವಾಗಿದ್ದ ಕಾವೇರಿ ನೀರು ಬಿ ಗ್ರೇಡಿಗೆ ಇಳಿದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಕನಕಪುರ ತಾಲೂಕಿನಲ್ಲಿರುವ ಕಾವೇರಿ, ಅರ್ಕಾವತಿ ಸಂಗಮಕ್ಕೆ ಹೋದರೆ ಕಾವೇರಿ ಎಷ್ಟು ಕಲುಷಿತವಾಗಿದೆ ಎಂದು ಬರಿಗಣ್ಣಿನಿಂದ ನೋಡಿದವರಿಗೂ ತಿಳಿಯುತ್ತದೆ.
ಅತಿಯಾದ ನಗರೀಕರಣ, ಉದ್ಯಮೀಕರಣದಿಂದಾಗಿ ಕಾವೇರಿ ಕಲುಷಿತಳಾಗುತ್ತಲೇ ಸಾಗಿದ್ದಾಳೆ. ಕಾವೇರಿ ನದಿಗೆ ನಿರಂತರವಾಗಿ ರಾಸಾಯನಿಕವನ್ನು, ಔದ್ಯಮಿಕ ತ್ಯಾಜ್ಯಗಳನ್ನು ಹರಿಯಬಿಡಲಾಗುತ್ತಿದೆ. ಹಳ್ಳಿಗಳಲ್ಲಿ ಕೂಡ ಕಾವೇರಿಗೆ ಹೊಲಸು ಬಂದು ಸೇರಿಕೊಳ್ಳುತ್ತಿದೆ. ಇಷ್ಟಾದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ.
ಈ ನಡುವೆ, ಕರ್ನಾಟಕ 22.5 ಟಿಎಂಸಿ ಅಡಿಯಷ್ಟು ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲು ವಿಫಲವಾಗಿದೆ ಎಂದು ಸುಪ್ರೀಂ ಕೋರ್ಟ್ ಮುಂದೆ ತಮಿಳುನಾಡು ಹೊಸದಾಗಿ ಅರ್ಜಿ ಸಲ್ಲಿಸಿದ್ದನ್ನು, ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿದೆ.













Click it and Unblock the Notifications