ನನಗೆ 100% ಖಚಿತ; ಈ ಬಾರಿ 130-135 ಸ್ಥಾನಗಳನ್ನು ಗೆಲ್ಲುತ್ತೇವೆ: ಬಿ ಎಸ್ ಯಡಿಯೂರಪ್ಪ
ಬೆಂಗಳೂರು, ಮೇ10: ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ. 75-80% ಕ್ಕಿಂತ ಹೆಚ್ಚು ಜನರು ಬಿಜೆಪಿಯನ್ನು ಬೆಂಬಲಿಸುತ್ತಾರೆ. ನಾವು ಈ ಬಾರೀ 130 ರಿಂದ 135 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕುಟುಂಬ ಸಮೇತವಾಗಿ ಮತದಾನ ಮಾಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿ, ಬಿಜೆಪಿ ಪರವಾಗಿ ಮತ ಹಾಕುತ್ತಾರೆ ಎಂಬುದು ನನಗೆ 100% ಖಚಿತವಾಗಿದೆ ಎಂದು ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ, ರಾಜ್ಯದ ಉದ್ದಗಲಕ್ಕೂ ಸುತ್ತಿ ಜನರಿಂದ ಪಡೆದ ಮಾಹಿತಿ ಮೇರೆಗೆ ಹೇಳುತ್ತಿದ್ದೇನೆ, ರಾಜ್ಯದಲ್ಲಿ ಬಹುಮತದಿಂದ ಬಿಜೆಪಿ ಗೆಲುವು ಸಾಧಿಸುತ್ತದೆ. ಶಿಕಾರಿಪುರದಲ್ಲಿ ವಿಜಯೇಂದ್ರ 40000 ಮತಗಳ ಅಂತರದಿಂದ ಗೆಲ್ಲುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ರಾಜ್ಯದ ಬಗ್ಗೆ ಸಾಕಷ್ಟು ಒಲವು ಹೊಂದಿದ್ದಾರೆ. ಅವರ ಆಶೀರ್ವಾದದಿಂದ ನಾವು ಗೆಲುವು ಸಾಧಿಸುತ್ತೇವೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು
ಎಲ್ಲ ಜನರು ಆದಷ್ಟು ಬೇಗ ಮತ ಚಲಾಯಿಸುವಂತೆ ವಿನಂತಿಸುತ್ತೇನೆ. ನಾಡಿನ ಸಮಸ್ತ ಮತದಾರ ಬಂಧುಗಳಲ್ಲಿ, ಅದರಲ್ಲೂ ವಿಶೇಷವಾಗಿ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವಕ ಯುವತಿಯರಲ್ಲಿ, ತಪ್ಪದೇ ಮತ ಚಲಾಯಿಸಿ, ಪ್ರಜಾಪ್ರಭುತ್ವದ ಈ ಸಂಭ್ರಮದ ಉತ್ಸವದಲ್ಲಿ ಪಾಲ್ಗೊಳ್ಳಿ ಎಂದು ಕೋರುತ್ತೇನೆ. ನಾಡಿನ ಉಜ್ವಲ ಭವಿಷ್ಯಕ್ಕಾಗಿ, ಸರ್ವಾಂಗೀಣ ಅಭಿವೃದ್ಧಿಗಾಗಿ ತಪ್ಪದೇ ಎಲ್ಲರೂ ಮತ ಚಲಾಯಿಸಿ ಎಂದು ಈ ಮೂಲಕ ವಿನಂತಿಸುತ್ತೇನೆ.












Click it and Unblock the Notifications