DK Shivakumar: ಕರಾವಳಿಯಲ್ಲಿ ಕಾಂಗ್ರೆಸ್ ಗೆಲ್ಲುವ ಸ್ಥಾನ ಎಷ್ಟು? ಡಿ ಕೆ ಶಿವಕುಮಾರ್ ಭವಿಷ್ಯವೇನು?
ಉಡುಪಿ,ಏಪ್ರಿಲ್24: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗಿದೆ. ಮುಖ್ಯಮಂತ್ರಿ ರೇಸ್ ನಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ರಾಜ್ಯಾದ್ಯಂತ ಅಬ್ಬರದ ಪ್ರಚಾರವನ್ನ ನಡೆಸುತ್ತಿದ್ದು, ಕರವಾಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಜನರ ವಿಶ್ವಾಸ ಹೆಚ್ಚಾಗಿದೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಬೈಂದೂರಿನಲ್ಲಿ ಮಾತನಾಡಿದ ಅವರು, ಇನ್ನೂ ಕರಾವಳಿ ಭಾಗದಲ್ಲಿ ನಮ್ಮ ಪಕ್ಷಕ್ಕೆ ಉತ್ತಮ ವಾತಾವರಣವಿದ್ದು, ಕನಿಷ್ಠ 10 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಭವಿಷ್ಯ ನುಡಿದಿದ್ದಾರೆ. ಬಿಜೆಪಿಯ ಹಲವು ನಾಯಕರುಗಳು ಕಾಂಗ್ರೆಸ್ ಸೇರಿದ್ದಾರೆ. ಜನರ ಈ ವಿಶ್ವಾಸ ಉಳಿಸಿಕೊಂಡು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದು ಜನರ ಸೇವೆ ಮಾಡಬೇಕು. ರಾಹುಲ್ ಗಾಂಧಿ ಅವರು ಈ ಭಾಗದಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದರು.

ಇನ್ನೂ ಈ ಭಾಗದಲ್ಲಿ ಬಿಜೆಪಿ ಹಿಂದುತ್ವದ ವಿಚಾರದಲ್ಲಿ ಚುನಾವಣೆ ಮಾಡುತ್ತಿದೆ ಇದು ಫಲ ನೀಡುವುದೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಾರಿ ಆ ತಂತ್ರ ಫಲ ನೀಡುವುದಿಲ್ಲ. ಈ ಚುನಾವಣೆ ಭಾವನೆ ಹಾಗೂ ಬದುಕಿನ ನಡುವಣ ಚುನಾವಣೆ. ಬಿಜೆಪಿ ಭಾವನೆಗಳ ಮೇಲೆ ಚುನಾವಣೆ ಮಾಡಿದರೆ, ನಾವು ಬದುಕಿನ ಮೇಲೆ ಚುನಾವಣೆ ಮಾಡುತ್ತೇವೆ. ಅವರು ಭ್ರಷ್ಟಾಚಾರ ನಿರ್ಮೂಲನೆಗೆ ನಾವು ಪಣ ತೊಟ್ಟಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ವಿರುದ್ಧ ಬಂಡಾಯ ಸ್ಪರ್ಧಿಗಳ ವಿಚಾರವಾಗಿ ಮಾತನಾಡಿ, ಬಹುತೇಕ ಎಲ್ಲಾ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯುತ್ತಾರೆ. ಕೆಲವರಿಗೆ ಪಕ್ಷೇತರರಾಗಿ ಸ್ಪರ್ಧಿಸುವ ಚಟ ಇದ್ದು, ಮೊದಲಿನಿಂದಲೂ ಹಾಗೆ ಮಾಡಿದ್ದಾರೆ. ಅಂತಹವರನ್ನು ಹೋಗಬಹುದು, ಉಳಿದವರು ಅರ್ಜಿ ಹಿಂಪಡೆಯಲಿದ್ದಾರೆ. ನಿನ್ನೆ ಉಡುಪಿಯಲ್ಲಿ ಮಾತನಾಡಿದ್ದೇನೆ, ಅವರು ಹಾಗೂ ಚಿಕ್ಕಪೇಟೆಯಲ್ಲಿ ಮಾಜಿ ಮೇಯರ್ ಅವರು ಅರ್ಜಿ ಹಿಂಪಡೆಯಲಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರ ಲಿಂಗಾಯತ ಸಮುದಾಯ ಕುರಿತ ವಿವಾದದ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಅವರ ಕಾಲದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದ್ದಾರೆ ಹೊರತು, ಇಡೀ ಸಮುದಾಯ ಉದ್ದೇಶಿಸಿ ಹೇಳಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ನಾಯಕರಾದ ಯತ್ನಾಳ್, ವಿಶ್ವನಾಥ್, ಗೂಳಿಹಟ್ಟಿ ಶೇಖರ್, ಕೆಂಪಣ್ಣ ಅವರು ಹೇಳಿದ್ದಾರೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಯಾರು ಮುಚ್ಚಿ ಹಾಕಲು ಸಾಧ್ಯವಿಲ್ಲ.
ರಾಜ್ಯದಲ್ಲಿ 40% ಕಮಿಷನ್, ಪಿ ಎಸ್ ಐ ಸೇರಿದಂತೆ ನೇಮಕಾತಿ ಹಗರಣ, ವಿವಿ ಉಪಕುಲಪತಿ ನೇಮಕಕ್ಕೆ ಹಣ ಪಡೆದಿರುವುದು ನಮ್ಮ ಕಾಲದಲ್ಲಿ ಆಗಿದೆಯಾ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದೆ. ಸಿದ್ದರಾಮಯ್ಯ ಸರ್ಕಾರದ ವಿಚಾರ ಮಾತನಾಡಿದ್ದು, ಸಮುದಾಯದ ವಿಚಾರ ಮಾತನಾಡಿಲ್ಲ ಎಂದು ತಿಳಿಸಿದರು.
ಈ ಬಾರಿ ಲಿಂಗಾಯತ ಸಮುದಾಯ ಕಾಂಗ್ರೆಸ್ ಪಕ್ಷದ ಕೈ ಹಿಡಿಯಲಿದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಆಣೆಕಟ್ಟು ಒಡೆದಿದೆ. ಕೇವಲ ಲಿಂಗಾಯತ ಸಮುದಾಯ ಮಾತ್ರವಲ್ಲ, ಎಲ್ಲಾ ಸಮುದಾಯದ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಉತ್ತಮ ಆಡಳಿತ ನೀಡಲಾಗುವುದು. ಹೊರಗಡೆ ಇರುವ ಎಲ್ಲ ಮತದಾರರು ತಮ್ಮ ಊರಿಗೆ ಬಂದು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು ಎಂದು ಮನವಿ ಮಾಡುತ್ತೇನೆ ಎಂದು ತಿಳಿಸಿದರು.












Click it and Unblock the Notifications