ಮೋದಿ ಪ್ರಭಾವದಿಂದ ಅಮೆರಿಕಾದ ಉದ್ಯೋಗ ಬಿಟ್ಟು ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಯುವ ನಾಯಕ!
ದೊಡ್ಡಬಳ್ಳಾಪುರ,ಏಪ್ರಿಲ್26: ರಾಜ್ಯ ವಿಧಾನಸಭಾ ಚುನಾವಣಾ ಕಾವು ರಂಗೇರಿದೆ. ಅಳೆದು ತೂಗಿ ಟಿಕೆಟ್ ನೀಡಿರುವ ಬಿಜೆಪಿ ಹೈಕಮಾಂಡ್ ಈ ಬಾರಿ ಹಲವು ಹೊಸ ಮುಖಗಳಿಗೆ ಮಣೆ ಹಾಕಿದೆ. ಇನ್ನೂ ರಾಜ್ಯ ವಿಧಾನಸಭಾ ಚುನಾವಣೆ ಅಖಾಡದಲ್ಲಿ ಸಾಕಷ್ಟುಹೊಸ ಮುಖಗಳು ಗಮನ ಸೆಳೆದಿದ್ದು, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಿರಿಯ ವಯಸ್ಸಿನ ಅಭ್ಯರ್ಥಿಯನ್ನ ಬಿಜೆಪಿ ಕಣಕ್ಕಿಳಿಸಿದೆ.
ಹೌದು, ಸಾಕಷ್ಟು ಪೈಪೋಟಿ ನಡುವೆ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಹೈಕಮಾಂಡ್ ನಾಯಕರು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ 31 ವರ್ಷ ವಯಸ್ಸಿನ ತರುಣನಿಗೆ ಟಿಕೆಟ್ ನೀಡಿದೆ. ಅಮೆರಿಕಾದ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ ಸ್ನಾತಕೋತ್ತರ ಪದವಿ ಪಡೆದಿರುವ ಧೀರಜ್ ಮುನಿರಾಜ್ ಅವರಿಗೆ ಇದೀಗ ದೊಡ್ಡಬಳ್ಳಾಪುರ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಕೃಷಿ ಹಿನ್ನಲೆಯಿಂದ ಬಂದರೂ ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಯೋಗಗಳ ಮೂಲಕ ಯಶಸ್ಸಿದ್ದ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜ್ ಅವರು, ಅಮೆರಿಕಾದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ವಿದೇಶೀ ವ್ಯಾಮೋಹಕ್ಕೊಳಗಾಗದೆ, ಮತ್ತೆ ದೇಶಕ್ಕೆ ಹಿಂತಿರುಗಿದ್ದಾರೆ. ಇನ್ನೂ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೇ ಸಮಾಜಮುಖಿ ಚಿಂತನೆಗಳ ತುಡಿತ ಹಾಗೂ ಜನರ ಸಂಕಷ್ಟಗಳಿಗೆ ನೇರವಾಗಿ ಜನರ ಮನ್ನಣೆಯನ್ನ ಗಳಿಸಿದ್ದಾರೆ.
ಧೀರಜ್ ಮುನಿರಾಜ್ ಅವರು ಆರ್.ವಿ.ಕಾಲೇಜಿನಲ್ಲಿ ಬಿ.ಇ ಪದವಿ ಪಡೆದ ಬಳಿಕ ಹೆಚ್ಚಿನ ವ್ಯಾಸಂಗಕ್ಕಾಗಿ ಅಮೆರಿಕಾಗೆ ತೆರಳಿದರು. ಟೆಕ್ಸಾಸ್‌ನಲ್ಲಿ ಎಂ.ಎಸ್ ಪದವಿ ಪಡೆದ ಬಳಿಕ ಅಮೆರಿಕಾದಲ್ಲಿ ಉದ್ಯೋಗಾವಕಾಶ ದೊರೆತರೂ ಅದನ್ನು ಬಿಟ್ಟು ತವರಿಗೆ ವಾಪಸ್ ಆಗಿದ್ದು, ಕೆಲ ದಿನ ಸಿಬಿಆರ್‌ಇ ಸೇರಿದಂತೆ ಕೆಲ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಸಣ್ಣ ವಯಸ್ಸಿನಲ್ಲೇ ತುಮಕೂರು ವಿವಿಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಬಿಜೆಪಿ ಫಲಾನುಭವಿಗಳ ಪ್ರಕೋಷ್ಠ ಜಿಲ್ಲಾ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಇನ್ನೂ ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರ ನಿರ್ಮಾಣ ಚಿಂತನೆಗಳಿಂದ ಪ್ರಭಾವಿತರಾಗಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ 'ದೇಶ ಮೊದಲು' ಪರಿಕಲ್ಪನೆಯ ಆರಾಧಕರಾಗಿ ತಮ್ಮ ತಾತ್ವಿಕ ನಿಲುವುಗಳನ್ನು ಗಟ್ಟಿಯಾಗಿ ಕಟ್ಟಿಕೊಂಡಿದ್ದಾರೆ. ದೇಶ ಕಟ್ಟಲು ಮೋದಿ ಪ್ರೇರಣೆ ಎಂದು ಹೇಳಿದ್ದಾರೆ.
ಕಳೆದ 3 ವರ್ಷಗಳಿಂದ ನಿರಂತರ ಜನಸಂಪರ್ಕದಲ್ಲಿರುವ ಧೀರಜ್ ಮುನಿರಾಜ್, ದೊಡ್ಡಬಳ್ಳಾಪುರ ಕ್ಷೇತ್ರದ ಜನರ ಸಮಸ್ಯೆಗಳ ಬಗ್ಗೆ ನಿರ್ದಿಷ್ಟಅರಿವು ಹೊಂದಿರುವುದಾಗಿ ಹೇಳಿದ್ದು, ಇಲ್ಲಿನ ಕೃಷಿ, ನೇಕಾರಿಕೆ, ಕಾರ್ಮಿಕ ವರ್ಗದ ಸಂಕಷ್ಟಗಳು ಮತ್ತು ಅವುಗಳ ಪರಿಹಾರದ ಬಗ್ಗೆ ತಮ್ಮದೇ ಆದ ಆಲೋಚನೆಗಳು ತಮ್ಮಲ್ಲಿವೆ ಎಂದು ಹೇಳಿದರು.
ಇನ್ನೂ ಈ ಕುರಿತು ದೊಡ್ಡಬಳ್ಳಾಪುರ ಬಿಜೆಪಿ ಅಭ್ಯರ್ಥಿ ಧೀರಜ್ ಮಾತನಾಡಿ, ನನ್ನ ಜನಪರ ಕಾರ್ಯಕ್ರಮಗಳನ್ನು ನೋಡಿ ಪಕ್ಷ ತಮಗೆ ಟಿಕೆಟ್ ನೀಡಿದೆ. ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಸಂತೃಪ್ತ ಬದುಕಿನ ಸೂತ್ರಗಳು ರಾಜಕೀಯ ವ್ಯಕ್ತಿಗಳ ಪ್ರಥಮ ಆದ್ಯತೆಯಾಗಬೇಕು. ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಬದಲಾವಣೆಯ ಮಹತ್ವಾಕಾಂಕ್ಷೆಯೊಂದಿಗೆ ಕಣಕ್ಕಿಳಿದಿದ್ದೇನೆ ಅಂತ ತಿಳಿಸಿದ್ದಾರೆ.












Click it and Unblock the Notifications