ಕಾಂಗ್ರೆಸ್ಸಿನ ಮಹಾನಾಯಕನನ್ನೇ ಕಟ್ಟಿಹಾಕಲು ಬಿಜೆಪಿ ತಂತ್ರ: ಕನಕಪುರ ಬಂಡೆ ವಿರುದ್ಧ ಅಪ್ಪಾಜಿಗೌಡ ಕಣಕ್ಕೆ? ಇನ್‌ಸೈಡ್ ಸ್ಟೋರಿ
ಬೆಂಗಳೂರು, ಏಪ್ರಿಲ್ 04: ಕರ್ನಾಟಕ ವಿಧಾನಸಭೆ ಚುನಾವಣೆ ( Karnataka Assembly Elections 2023 ) ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕಾರಣವು ಅಚ್ಚರಿಯ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿದೆ. ಚುನಾವಣೆಯನ್ನು ಗೆದ್ದು ಅಧಿಕಾರಕ್ಕೆ ಏರುವ ಹಮ್ಮಸ್ಸಿನಲ್ಲಿ ಕಾಂಗ್ರೆಸ್ ( Congress ) ಪಕ್ಷವಿದೆ. ಆದರೆ, ಕಾಂಗ್ರೆಸ್‌ನ ಮಹಾನಾಯಕನನ್ನೇ ಕಟ್ಟಿ ಹಾಕುವ ತಂತ್ರವನ್ನು ಬಿಜೆಪಿ ( BJP ) ರೂಪಿಸಿದೆ.
ಮಾರ್ಚ್ 25ರಂದು ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆ ಪಟ್ಟಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮತ್ತೆ ಕನಕಪುರದಿಂದ ಕಣಕ್ಕಿಳಿಯುವದರ ಕುರಿತು ಘೋಷಣೆಯಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಸತತ ಏಳು ಬಾರಿ ಗೆಲುವು ಸಾಧಿಸಿರುವ ಶಿವಕುಮಾರ್ ಸೋಲಿಲ್ಲದ ಸರದಾರರೆಂದೇ ಗುರುತಿಸಿಕೊಂಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಅವರು ಮುಖ್ಯಮಂತ್ರಿ ಆಕಾಂಕ್ಷಿಗಳಲ್ಲಿ ಒಬ್ಬರು. ಕಾಂಗ್ರೆಸ್‌ನ ಈ ಪ್ರಬಲ ನಾಯಕನಿಗೆ ಸೆಡ್ಡೆ ಹೊಡೆಯಲು ಬಿಜೆಪಿ ಸಜ್ಜಾಗಿದೆ. ಒಕ್ಕಲಿಗ ಪ್ರಾಬಲ್ಯದ ಕನಕಪುರದಲ್ಲಿ ಅದೇ ಸಮುದಾಯದ ಪ್ರಬಲ ಮುಖಂಡರೊಬ್ಬರನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ.
ಅಚ್ಚರಿಯ ಬೆಳವಣಿಗೆಯಲ್ಲಿ ರಾಮನಗರ ಜಿಲ್ಲೆಯ ಕನಕಪುರದಲ್ಲಿ ಕ್ಷೇತ್ರಕ್ಕೆ ಒಕ್ಕಲಿಗ ಸಂಘದ ಮಾಜಿ ಅಧ್ಯಕ್ಷ ಅಪ್ಪಾಜಿ ಗೌಡರನ್ನು ಕಣಕ್ಕಿಳಿಸುವ ಬಿಜೆಪಿ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಅಪ್ಪಾಜಿ ಗೌಡರು ಬಿಜೆಪಿ ಸೇರಿವುದು ಖಚಿತವಾಗಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಡಾ. ಅಪ್ಪಾಜಿಗೌಡ ಅವರು ಬೆಂಗಳೂರಿನ ನಾಗರಭಾವಿಯಲ್ಲಿ ನೇತ್ರಶಾಸ್ತ್ರಜ್ಞ / ನೇತ್ರ ಶಸ್ತ್ರ ಚಿಕಿತ್ಸಕರಾಗಿದ್ದಾರೆ. ನಾಗರಭಾವಿಯಲ್ಲಿರುವ ವಿಜಯ ನೇತ್ರಾಲಯದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು 1980 ರಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಿಂದ MBBS ಮತ್ತು 1985 ರಲ್ಲಿ ಮಿಂಟೋ ಕಣ್ಣಿನ ಆಸ್ಪತ್ರೆಯಿಂದ ( ಬೆಂಗಳೂರು ವೈದ್ಯಕೀಯ ಕಾಲೇಜು ) MS ( ನೇತ್ರಶಾಸ್ತ್ರ ) ಪೂರ್ಣಗೊಳಿಸಿದ್ದಾರೆ.

ಅಪ್ಪಾಜಿಗೌಡರು ಪ್ರತಿಷ್ಠಿತ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಒಕ್ಕಲಿಗರ ಪ್ರಾಬಲ್ಯವಿರುವ ಕನಕಪುರದಲ್ಲಿ ಅಪ್ಪಾಜಿಗೌಡರನ್ನು ಕಣಕ್ಕಿಳಿಸುವ ಮೂಲಕ ಡಿಕೆಶಿ ಅವರನ್ನು ಕಟ್ಟಿ ಹಾಕುವ ಯತ್ನವನ್ನು ಬಿಜೆಪಿ ನಡೆಸಿದೆ. ಅಪ್ಪಾಜಿಗೌಡರು ಬಿಜೆಪಿಯನ್ನು ಯಾವಾಗ ಸೇರಲಿದ್ದಾರೆ ಎಂಬುದೀಗ ಕುತೂಹಲ ಕೆರಳಿಸಿದೆ. ಒಂದೇ ವೇಳೆ, ಕನಕಪುರದಿಂದ ಅಪ್ಪಾಜಿಗೌಡರು ಕಣಕ್ಕಿಳಿದಿದ್ದೇ ಆದಲ್ಲಿ, ಒಕ್ಕಲಿಗ ಮತಗಳನ್ನು ಸೆಳೆಯಲಿದ್ದಾರೆ ಎಂಬುದಂತೂ ಸತ್ಯ. ಆದರೆ, ಡಿಕೆ ಶಿವಕುಮಾರ್ ಅವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ ಎಂಬುದನ್ನೂ ಅಲ್ಲಗಳೆಯುವಂತಿಲ್ಲ.
ಡಿಕೆಶಿ ವಿರುದ್ಧ ದಾಖಲಾದ ಪ್ರಕರಣ
ಚುನಾವಣಾ ಪ್ರಚಾರದ ವೇಳೆ ನಗದು ಹಂಚಿಕೆ ಆರೋಪದ ಮೇಲೆ ಡಿ ಕೆ ಶಿವಕುಮಾರ್ ವಿರುದ್ಧ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿದ್ದಾರೆ. ಮಾರ್ಚ್ 28 ರಂದು ಮಂಡ್ಯ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಪ್ರಚಾರದ ಬಸ್ ಮೇಲಿಂದ ಜನರ ಕಡೆಗೆ ನೋಟುಗಳನ್ನು ಎಸೆದ ಆರೋಪ ದಡಿಯಲ್ಲಿ ಶಿವಕುಮಾರ್ ವಿರುದ್ಧ ಪೊಲೀಸರು ನಾನ್-ಕಾಗ್ನಿಸೆಬಲ್ ಕೇಸನ್ನು ದಾಖಲಿಸಿದ್ದಾರೆ. ಈ ವಿಷಯವನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಮಂಡಿಸಲಾಗಿದ್ದು, ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ.

ಕಾಂಗ್ರೆಸ್ ಏಕಾಂಗಿಯಾಗಿ ಹೋರಾಡಲಿದೆ
ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಡಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. 'ಯಾರೊಂದಿಗೂ ಮೈತ್ರಿ ಇಲ್ಲ, ನಾವು ಏಕಾಂಗಿಯಾಗಿ ಹೋಗುತ್ತಿದ್ದೇವೆ. ನಮ್ಮ ಪಕ್ಷವೊಂದೇ ಏಕಾಂಗಿಯಾಗಿ ಅಧಿಕಾರಕ್ಕೆ ಬರಲಿದೆ' ಎಂದು ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications