ಸ್ಥಳೀಯ ಬಿಜೆಪಿ ಮುಖಂಡರು ನನ್ನ ವಿರುದ್ಧ ಕೆಲಸ ಮಾಡಿದ್ದಾರೆ: ಕಾಂಗ್ರೆಸ್ ಸೇರುವ ವದಂತಿ ಬೆನ್ನಲ್ಲೇ ಶಿವರಾಮ್ ಹೆಬ್ಬಾರ್ ಆರೋಪ
ಬೆಂಗಳೂರು, ಆಗಸ್ಟ್ 18: ಕರ್ನಾಟಕದಲ್ಲಿ ಬಿಜೆಪಿಯ ಕೆಲವು ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಬಹುದು ಎಂಬ ವದಂತಿಗಳು ಹರಡಿಕೊಂಡಿವೆ. ಇದರ ಬೆನ್ನಲ್ಲೇ ತಮ್ಮದೇ ಪಕ್ಷದ ಸ್ಥಳೀಯ ನಾಯಕರ ವಿರುದ್ಧ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಗಂಭೀರ ಆರೋಪ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ತಮ್ಮ ವಿರುದ್ಧ ಕೆಲಸ ಮಾಡಿದ ಪಕ್ಷದ ಸ್ಥಳೀಯ ನಾಯಕರ ವಿರುದ್ಧ ಕ್ರಮಕ್ಕೆ ಅವರು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಸೇರುವ ಕುರಿತು ಯಾರ ಜೊತೆಗೂ ಮಾತುಕತೆ ನಡೆದಿಲ್ಲ ಎಂದು ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಸ್ಪಷ್ಟಪಡಿಸಿದ್ದಾರೆ.

ಮೇ 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುವ ಕುರಿತು ಬಿಜೆಪಿಯ ಹಲವು ಶಾಸಕರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆಗೆ ಚರ್ಚೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಅಂತಹ ಶಾಸಕರಲ್ಲಿ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಕೂಡಾ ಒಬ್ಬರು ಎಂದು ಹೇಳಲಾಗುತ್ತಿದೆ.
ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಬ್ಬಾರ್, ರಾಜ್ಯ ನಾಯಕರ ಮುಂದೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದೇನೆ. ಆದರೆ ಪಕ್ಷ ಬಿಡುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
'ಚುನಾವಣೆ ಸಂದರ್ಭದಲ್ಲಿ ಕೆಲವು ಸ್ಥಳೀಯ ಬಿಜೆಪಿ ನಾಯಕರು ನನ್ನ ವಿರುದ್ಧ ಕೆಲಸ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅವರ ಹೆಸರಿನೊಂದಿಗೆ ದೂರು ನೀಡಿದ್ದೇನೆ. ಪಕ್ಷದ ನಿರ್ಧಾರಕ್ಕಾಗಿ ಕಾಯುತ್ತಿದ್ದೇನೆ. ಅವರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾದರೆ ನನಗಾಗಲಿ, ನನ್ನ ಬೆಂಬಲಿಗರಿಗೆ ಆಗಲಿ ಅದನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ' ಎಂದು ಹೆಬ್ಬಾರ್ ಹೇಳಿದ್ದಾರೆ.

ಕಾಂಗ್ರೆಸ್‌ಗೆ ಸೇರಲು ಬೆಂಬಲಿಗರು ಒತ್ತಾಯಿಸುತ್ತಿರುವುದರ ಬಗ್ಗೆ ಕೇಳಿದಾಗ, ತಮ್ಮ ಮುಂದೆ ಅಂತಹ ಯಾವುದೇ ಪ್ರಸ್ತಾಪವಿಲ್ಲ ಎಂದು ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.
'ಕೆಲವು ಬೆಂಬಲಿಗರು ಬೇಡಿಕೆ ಇಡುತ್ತಾರೆ. ಆದರೆ ನಾವು ಅವರ ಆಶಯದಂತೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ನಾನು ಯಾವುದೇ ಕಾಂಗ್ರೆಸ್ ನಾಯಕರೊಂದಿಗೆ ಸಂಪರ್ಕ ಹೊಂದಿಲ್ಲ. ಬಿಜೆಪಿಯಲ್ಲಿಯೇ ಮುಂದುವರಿಯುತ್ತೇನೆ' ಎಂದು ಹೆಬ್ಬಾರ್ ಹೇಳಿದ್ದಾರೆ.
2019 ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ 17 ಶಾಸಕರಲ್ಲಿ ಶಿವರಾಮ್ ಹೆಬ್ಬಾರ್ ಕೂಡಾ ಒಬ್ಬರು.

ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಅವರು ಕಾಂಗ್ರೆಸ್ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎಸ್‌ಟಿ ಸೋಮಶೇಖರ್ ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಹಾಡಿ ಹೊಗಳಿದ ಬಳಿಕ ಹಲವು ಊಹಾಪೋಹಗಳು ಹರಿದಾಡುತ್ತಿವೆ.
ಬಿಜೆಪಿ, ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ: ಚಲುವರಾಯಸ್ವಾಮಿ
ಜೆಡಿಎಸ್ ಮತ್ತು ಬಿಜೆಪಿಯಿಂದ ಕೆಲ ನಾಯಕರನ್ನು ವಾಪಸ್ ಕರೆತರುವ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಶುಕ್ರವಾರ ಹೇಳಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ನಾಯಕರ ಜತೆ ಚರ್ಚೆ ನಡೆಯುತ್ತಿದೆ. ನಾನು ನಿಮಗೆ ಹೆಸರುಗಳು ಮತ್ತು ಸಂಖ್ಯೆಗಳನ್ನು ಹೇಳುವುದಿಲ್ಲ. ನೀವು ಶೀಘ್ರದಲ್ಲೇ ಈ ಕುರಿತು ತಿಳಿಯುತ್ತೀರಿ. ಈ ಬಗ್ಗೆ ವಿಸ್ತೃತ ಚರ್ಚೆಗಳು ನಡೆಯುತ್ತಿವೆ. ಸುಮಾರು 10 ರಿಂದ 15 ಶಾಸಕರು ಮತ್ತು ಮಾಜಿ ಶಾಸಕರು ಶೀಘ್ರದಲ್ಲೇ ಕಾಂಗ್ರೆಸ್ ಸೇರಲಿದ್ದಾರೆ ಎಂದು ಚಲುವರಾಯಸ್ವಾಮಿ ತಿಳಿಸಿದ್ದಾರೆ.












Click it and Unblock the Notifications