ಅತೃಪ್ತ ಶಾಸಕರಿಗೆ ಮಾತು ಮಾತಿನಲ್ಲೇ ಚುಚ್ಚಿದ ಸ್ಪೀಕರ್
ಉತ್ತಮ ವಾಗ್ಮಿಯೂ ಆಗಿರುವ ಸ್ಪೀಕರ್ ರಮೇಶ್ ಕುಮಾರ್, ತಮ್ಮ ಪತ್ರಿಕಾಗೋಷ್ಠಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಲೇರಿದ್ದ ಅತೃಪ್ತ ಶಾಸಕರನ್ನು ಮಾತು ಮಾತಿನಲ್ಲೂ ಚುಚ್ಚಿದರು.
ದೇಶದಲ್ಲಿ ಈ ರೀತಿಯ ವಿದ್ಯಮಾನಗಳು ಈ ಹಿಂದೆ, ಒಂದೊಂದು ವರ್ಷ ತುಕ್ಕು ಹಿಡಿದ ಉದಾಹರಣೆಗಳಿವೆ, ಆದರೆ ನನ್ನ ಉದ್ದೇಶ ಅದಲ್ಲ ಎಂದಿರುವ ರಮೇಶ್, ಪರೋಕ್ಷವಾಗಿ, ಸುಪ್ರೀಂ ಮೆಟ್ಟಲೇರಿದ ಶಾಸಕರ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸ್ಪೀಕರ್ ಕಚೇರಿಯ ತೀರ್ಮಾನ ರಾಜ್ಯದ ಮನೆಮನೆಗೂ ತಲುಪಬೇಕಾದರೆ ನನಗಿರುವ ಒಂದೇ ಒಂದು ದಾರಿಯೆಂದರೆ ಅದು ಮಾಧ್ಯಮಗಳು ಎಂದಿರುವ ಸ್ಪೀಕರ್, ಅತೃಪ್ತ ಶಾಸಕರ ರಾಜೀನಾಮೆಯನ್ನು ಸ್ವೀಕರಿಸಿದರೇ ಹೊರತು, ಇನ್ನೂ ಆಂಗೀಕರಿಸಲಿಲ್ಲ.

ನೀವು ಮುಂಬೈಗೆ ಹೋಗುತ್ತೀರಾ, ಅಲ್ಲಿಂದ ಪ್ರೆಸ್ ಮೀಟ್ ಮಾಡುತ್ತೀರಾ, ನನ್ನ ಕಚೇರಿಗೆ ಬಂದಾಗ, ನಾನಿರಲಿಲ್ಲ ಎಂದು ಮಾಧ್ಯಮದರ ಮುಂದೆ ಹೇಳುತ್ತೀರಾ. ನೀವು ನನ್ನ ಕಚೇರಿಗೆ ಬರುತ್ತೇನೆಂದು ಪೂರ್ವ ಅನುಮತಿ ಪಡೆದುಕೊಂಡಿದ್ದೀರಾ ಎಂದು ಅತೃಪ್ತ ಶಾಸಕರನ್ನು ಪ್ರಶ್ನಿಸಿದ್ದಾರೆ.
ರಾಜ್ಯಪಾಲರ ಬಳಿ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತೀರಾ, ರಾಜಭವನ ಮತ್ತೆ ಅದನ್ನು ನನಗೇ ಕಳುಹಿಸುತ್ತದೆ ಎನ್ನುವುದು ನಿಮಗೆ ತಿಳಿದಿಲ್ಲವೇ. ಅತೃಪ್ತ ಶಾಸಕರ ನಡೆಯ ಬಗ್ಗೆ ನನಗೆ ತೀವ್ರ ಅಸಮಾಧಾನವಿದೆ ಎಂದು ಹೇಳಿರುವ ಸ್ಫೀಕರ್, ನಾನು ರಾಜ್ಯದ ಜನತೆಗೆ ಮತ್ತು ಸಂವಿಧಾನಕ್ಕೆ ಮಾತ್ರ ಉತ್ತರ ಕೊಡಬೇಕಾದವನು ಎಂದು ಹೇಳಿದ್ದಾರೆ.
ನನ್ನ ಕಚೇರಿ ತೆಗೆದುಕೊಳ್ಳುವ ನಿರ್ಧಾರದಿಂದ ಸರಕಾರ ಏನಾಗುತ್ತದೆ ಎನ್ನುವುದು ನನಗೆ ಬೇಡವಾದ ವಿಚಾರ ಮತ್ತು ಅದರಿಂದ ನನಗೆ ಏನೂ ಆಗಬೇಕಾಗಿರುವುದು ಇಲ್ಲ. ನೀವು ರಾಜೀನಾಮೆ ನೀಡಲು ಬರುತ್ತೇನೆ ಎಂದು ಮುಂಚಿತವಾಗಿಯೇ ಹೇಳಿದ್ದರೆ, ನಾನು ಕಚೇರಿಯಲ್ಲಿ ಇರುತ್ತಿದ್ದೆ ಎಂದು ಸ್ಪೀಕರ್ ಹೇಳಿದ್ದಾರೆ.
ರಾಜೀನಾಮೆ ಸ್ವೀಕಾರ ಮಾಡಲು ಸ್ಪೀಕರ್ ಕಚೇರಿ ವಿಳಂಬ ಮಾಡುತ್ತಿದೆ ಎಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದೀರಾ, ನಾನೇನು ನನ್ನ ಕಚೇರಿಗೆ ಬರದಂತೆ ನಿಮ್ಮನ್ನು ತಡೆದಿದ್ದೆನೇ ಎಂದು ರಮೇಶ್ ಕುಮಾರ್, ಅತೃಪ್ತ ಶಾಸಕರ ವಿರುದ್ದ ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications