ಸಂಜೆ ತನಕ ಕಾದುನೋಡಿ: ಹೊಸ ಬಾಂಬ್ ಸಿಡಿಸಿದ ಡಿ.ಕೆ. ಶಿವಕುಮಾರ್
Recommended Video
ಬೆಂಗಳೂರು, ಜುಲೈ 11: ಸಮ್ಮಿಶ್ರ ಸರಕಾರವನ್ನು ಹೇಗಾದರೂ ಉಳಿಸಿಕೊಳ್ಳಲೇ ಬೇಕು ಎನ್ನುವ ಹಠಕ್ಕೆ ಬಿದ್ದಿರುವ ಸಚಿವ ಡಿ ಕೆ ಶಿವಕುಮಾರ್, ಸಂಜೆಯೊಳಗೆ ಕಾದು ನೋಡಿ ಎನ್ನುವ ಹೊಸ ಬಾಂಬ್ ಸಿಡಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ, ಮುಂಬೈನಲ್ಲಿರುವ ಅತೃಪ್ತ ಶಾಸಕರು, ಬೆಂಗಳೂರಿಗೆ ಬಂದು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗಬೇಕಿದೆ, ನೋಡೋಣ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಅವರೆಲ್ಲರೂ ನಮ್ಮವರೇ, ಅವರು ಬೆಂಗಳೂರಿಗೆ ಬಂದಾಗ ಅವರ ಜೊತೆ ಮಾತನಾಡಿ, ಅವರ ಮನವೊಲಿಕೆಯ ಪ್ರಯತ್ನವನ್ನು ಮಾಡಲಾಗುವುದು ಎನ್ನುವ ಆಶಾಭಾವನೆಯನ್ನು ಡಿ ಕೆ ಶಿವಕುಮಾರ್ ಹೊರಹಾಕಿದ್ದಾರೆ.

ಸರಕಾರಕ್ಕೆ ಏನೂ ತೊಂದರೆಯಾಗುವುದಿಲ್ಲ ಎಂದು ಹೇಳಿಕೊಂಡು ಬರುತ್ತಲೇ ಇರುವ ಡಿ ಕೆ ಶಿವಕುಮಾರ್, ಅತೃಪ್ತರು ಬೆಂಗಳೂರಿಗೆ ಬಂದಾಗ ಯಾವ ರೀತಿ ಹೆಜ್ಜೆಯಿಡಲಿದ್ದಾರೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಸಂಜೆ ಆರು ಗಂಟೆಯೊಳಗೆ ಎಲ್ಲರ ರಾಜೀನಾಮೆ ಇತ್ಯರ್ಥ ಮಾಡಲು ಸಾಧ್ಯವಿಲ್ಲ, ಸಮಯಾವಕಾಶ ಬೇಕಿದೆ ಎಂದು ಸ್ಪೀಕರ್ ರಮೇಶ್ ಕುಮಾರ್, ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಾಳೆ (ಜುಲೈ 12) ಕೈಗೆತ್ತಿಕೊಳ್ಳಲಿದೆ.
ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ಆದಿಯಾಗಿ, ಸಮ್ಮಿಶ್ರ ಸರಕಾರದ ಮುಖಂಡರು, ಅತ್ಟುಪ್ತ ಶಾಸಕರು ಮುಂಬೈನಿಂದ ಬೆಂಗಳೂರಿಗೆ ಬಂದಾಗ, ಮತ್ತೆ ಮನವೊಲಿಕೆಗೆ ಮುಂದಾಗುವ ಸಾಧ್ಯತೆಯಿದೆ.












Click it and Unblock the Notifications