ಮೇಲ್ನೋಟಕ್ಕೆ ಮಾತ್ರ ಬಿಜೆಪಿ, ಕಾಂಗ್ರೆಸ್ ಆಂತರಿಕ ಸಮಸ್ಯೆಯೇ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣ?
ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಏಳೆಂಟು ತಿಂಗಳಲ್ಲಿ ಹಲವು ಬಾರಿ ಆಪರೇಷನ್ ಕಮಲದ ವಿದ್ಯಮಾನಗಳು ನಡೆದಿದ್ದವು. ಆದರೆ ಅದ್ಯಾವುದೂ ಸಕ್ಸಸ್ ಆಗಿರಲಿಲ್ಲ. ಈಗ ಮತ್ತದೇ ಸುದ್ದಿ, ಈ ಬಾರಿಯಾದರೂ ಬಿಜೆಪಿಗೆ ಯಶಸ್ಸು ಸಿಗುತ್ತಾ? ಕಾದು ನೋಡಬೇಕಿದೆ..
ಪ್ರತೀ ಬಾರಿ ಆಪರೇಷನ್ ಸುದ್ದಿ ಬಂದಾಗ, ಬಿಜೆಪಿ ನಾಯಕರು ಹೇಳುತ್ತಿರುವುದು ಒಂದೇ.. ನಾವೇನೂ ಯಾರನ್ನೂ ಸಂಪರ್ಕಿಸಲು ಹೋಗಿಲ್ಲ.. ಕಾಂಗ್ರೆಸ್ ಪಕ್ಷದ ಆಂತರಿಕ ವೈಷಮ್ಯ, ಪ್ರತಿಷ್ಠೆಯೇ ಇಷ್ಟೆಲ್ಲಾ ಗೊಂದಲಗಳಿಗೆ ಕಾರಣ, ಅವರಾಗಿಯೇ ಬಂದರೆ, ನಮ್ಮ ಪಕ್ಷದ ಬಾಗಿಲು ತೆರೆದಿರುತ್ತದೆ ಎಂದು.
ಬಿಜೆಪಿಯವರು ನಾವು ಆಪರೇಷನ್ ಕಮಲಕ್ಕೆ ಪ್ರಯತ್ನಿಸುತ್ತಿಲ್ಲ ಎನ್ನುವ ಹೇಳಿಕೆಯನ್ನು ಅರಗಿಸಿಕೊಳ್ಳಲು ಕಷ್ಟವಾಗುವುದಾದರೂ, ಬಿಜೆಪಿ ಮುಖಂಡರ ಮಾತಿನ ಸತ್ಯಾಸತ್ಯತೆಯನ್ನು ಕೆದಕುತ್ತಾ ಹೋದಾಗ, ಕೆಲವೊಂದು ಕಾಂಗ್ರೆಸ್ಸಿನ ಆಂತರಿಕ ವಿದ್ಯಮಾನಗಳು ಕಾಂಗ್ರೆಸ್ ಅತೃಪ್ತರನ್ನು ಈ ಹಂತಕ್ಕೆ ತಂದು ನಿಲ್ಲಿಸಿರಬಹುದು ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ.
ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕಾತಿ ವಿಚಾರದಲ್ಲಿ, ಕಾಂಗ್ರೆಸ್ಸಿನಲ್ಲಿ ಅಸಮಾಧಾನವಿದ್ದದ್ದು ಅತ್ಯಂತ ಸ್ಪಷ್ಟ. ಹಿರಿಯರನ್ನು ಕಡೆಗಣಿಸಿದ್ದು, ಸ್ವಹಿತಾಶಕ್ತಿ, ಇನ್ನೊಬ್ಬರ ಮೇಲೆ ರಾಜಕೀಯ ಮೇಲಾಟ ಮಾಡಲು ಹೋದಂತಹ ಉದಾಹರಣೆಗಳು ಧಾರಾಳವಾಗಿ ಸಿಗುವುದರಿಂದ, ರಾಜ್ಯ ರಾಜಕಾರಣ ಇಷ್ಟೆಲ್ಲಾ ರಾದ್ದಾಂತಕ್ಕೆ ಸಾಕ್ಷಿಯಾಗಲು ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷವೂ ಕಾರಣವಾಗಿರಬಹುದು. ಅಂತಹ ಕೆಲವು ಉದಾಹರಣೆಗಳು, ಮುಂದೆ ಓದಿ..

ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಶಾಕಿಂಗ್ ಉತ್ತರ
ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನ ಮತ್ತು ಆಪರೇಷನ್ ಕಮಲದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಶಾಕಿಂಗ್ ಉತ್ತರ ಕೊಟ್ಟಿದ್ದು ಹೀಗೆ, " ನಮ್ಮನ್ನು ಯಾಕೆ ಪ್ರಶ್ನಿಸುತ್ತಿದ್ದೀರಾ? ಹೋಗಿ, ಈ ಪ್ರಶ್ನೆಯನ್ನು ಕರ್ನಾಟಕ ಕಾಂಗ್ರೆಸ್ ಮುಖಂಡರಲ್ಲಿ ಕೇಳಿ. ಸರಕಾರವನ್ನು ನಾವೇನೂ ಬೀಳಿಸುತ್ತಿಲ್ಲ. ಆಂತರಿಕ ವೈಷಮ್ಯದಿಂದ ಅದಾಗಿಯೇ ಬೀಳುತ್ತಿದೆ. ಡಿ ಕೆ ಶಿವಕುಮಾರ್ ಅವರಿಗೆ ತಾವೇ ಸಿಂ ಆಗುವ ಆಸೆಯಿದೆ. ಇದುವೆಯೇ ಈ ಗೊಂದಲಕ್ಕೆ ಕಾರಣ".

ಪಕ್ಷದೊಳಗೆ ಭಿನ್ನಮತ ಹೆಚ್ಚಲು ಕಾರಣವಾದ ಅಂಶಗಳು
ಇನ್ನೊಂದು ಆಯಾಮದ ಪ್ರಕಾರ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಗೊಂದಲದ ನಿರ್ಧಾರ, ಸಮ್ಮಿಶ್ರ ಸರಕಾರದಲ್ಲಿ ನನ್ನ ಮಾತೇ ಅಂತಿಮವಾಗಬೇಕು ಎನ್ನುವ ನಿಲುವು, ತಮ್ಮವರಿಗೆ ಸಚಿವ ಸ್ಥಾನ ಕೊಡಿಸಿದ್ದು, ಪಕ್ಷದೊಳಗೆ ಭಿನ್ನಮತ ಹೆಚ್ಚಲು ಕಾರಣವಾದ ಅಂಶಗಳಲ್ಲೊಂದು ಎಂದು ಹೇಳಲಾಗುತ್ತಿದೆ. ಸಂಪುಟ ವಿಸ್ತರಣೆ ಸಮಯದಲ್ಲಿ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಅಸಮಾಧಾನದ 'ಬಂಡಾಯ ಹೊಗೆ' ಜ್ವಾಲೆಯಾಗಿ ವ್ಯಾಪಿಸಿದ್ದು ಎನ್ನುವ ಮಾತೂ ಕೇಳಿಬರುತ್ತಿದೆ.

ರಮೇಶ್ ಮತ್ತು ಡಿಕೆಶಿ ನಡುವೆ ಶೀತಲ ಸಮರ
ಬೆಳಗಾವಿ ರಾಜಕಾರಣಕ್ಕೆ ಡಿ ಕೆ ಶಿವಕುಮಾರ್ ಎಂಟ್ರಿ ಕೊಟ್ಟಿದ್ದು, ಜಾರಕಿಹೊಳಿ ಸಹೋದರರ ಸಿಟ್ಟಿಗೆ ಕಾರಣ. ಡಿಕೆಶಿ-ಜಾರಕಿಹೊಳಿ ಸಹೋದರರ ಪ್ರತಿಷ್ಠೆಯ ವಿಷಯ, ಸರಕಾರವನ್ನು ಉರುಳಿಸುವ ಹಂತಕ್ಕೆ ಬಂದು ನಿಲ್ಲಿಸಿರಲೂ ಬಹುದು. ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ವಿರುದ್ಧ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗಿ ಬಿದ್ದಿದ್ದರು. ಬೆಳಗಾವಿಯ ಪಿಎಲ್‍ಡಿ ಬ್ಯಾಂಕ್ ಚುನಾವಣೆಯ ವಿಚಾರದಲ್ಲಿ ಡಿಕೆಶಿ, ಅಲ್ಲಿನ ರಾಜಕೀಯಕ್ಕೆ ಎಂಟ್ರಿ ನೀಡಿದ್ದರು. ಅಲ್ಲಿಂದ, ರಮೇಶ್ ಮತ್ತು ಡಿಕೆಶಿ ನಡುವೆ ಶೀತಲ ಸಮರ ನಡೆಯುತ್ತಲೇ ಇದೆ.

ರಮೇಶ್ ಜಾರಕಿಹೊಳಿ
ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆಯಲ್ಲಿ ಅರಣ್ಯ ಸಚಿವರಾಗಿದ್ದ ಶಂಕರ್ ಅವರಿಗೆ ಕೊಕ್ ನೀಡಿ, ಹೊಸಕೋಟೆ ಶಾಸಕ ಮತ್ತು ತಮ್ಮ ಪರಮಾಪ್ತ ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದು ಒಂದು. ಇನ್ನೊಂದು, ರಮೇಶ್ ಜಾರಕಿಹೊಳಿಯನ್ನು ತೆಗೆದು ಹಾಕಿ, ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಿದ್ದು, ಪಕ್ಷದೊಳಗೆ ಭಿನ್ನಮತ ಹೆಚ್ಚಲು ಕಾರಣವಾಗಿದೆ. ಅದರಂತೆಯೇ, ಶಂಕರ್ ತಮ್ಮ ಬೆಂಬಲವನ್ನು ವಾಪಸ್ ಪಡೆದಿದ್ದರೆ, ಈಗ ಏನು, ಕೆಲವೊಂದು ಕಾಂಗ್ರೆಸ್ ಶಾಸಕರು, ಪಕ್ಷಕ್ಕೆ ಬಿಸಿಮುಟ್ಟಿಸುತ್ತಿದ್ದಾರೋ ಅದರ ನೇತೃತ್ವವನ್ನು ರಮೇಶ್ ಜಾರಕಿಹೊಳಿ ವಹಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಇನ್ನೊಂದೆಡೆ.

ಚಿಕ್ಕಬಳ್ಳಾಪುರದ ಶಾಸಕ ಡಾ. ಸುಧಾಕರ್
ಪಕ್ಷದ ನಾಯಕರ ಮೇಲೆ ಕೆಲವೊಂದು ಸ್ವಪಕ್ಷೀಯ ಮುಖಂಡರಿಗೆ ಬೇಸರವಾಗಲು ಕಾರಣ ಮುಖ್ಯಮಂತ್ರಿಗಳ ಆಡಳಿತ ಶೈಲಿ. ಕಾಂಗ್ರೆಸ್ ಮುಖಂಡರನ್ನು ಕುಮಾರಸ್ವಾಮಿ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎನ್ನುವ ಕೂಗು ಹಲವು ಬಾರಿ ಬಹಿರಂಗವಾಗಿದ್ದವು. ಚಿಕ್ಕಬಳ್ಳಾಪುರದ ಶಾಸಕ ಡಾ. ಸುಧಾಕರ್ ಹಲವು ಬಾರಿ ಈ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡರಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದರು. ಆದರೆ, ಇದ್ಯಾವುದೂ ಸರಿದಾರಿಗೆ ಬರುವ ಲಕ್ಷಣಗಳು ಕಾಣಿಸದೇ ಇದ್ದಿದ್ದರಿಂದ, ಬಿಜೆಪಿಗೆ ಆಪರೇಷನ್ ಕಮಲ ನಡೆಸಲು ಸೂಕ್ತ ವಾತಾವರಣವನ್ನು ಕಾಂಗ್ರೆಸ್ಸಿಗರೇ ಕೊಟ್ಟಿರಬಹುದು.

ಕೆ ಸಿ ವೇಣುಗೋಪಾಲ್ ಮೇಲೆಯೂ ಹಲವು ಕಾಂಗ್ರೆಸ್ ಮುಖಂಡರ ಬೇಸರ
ಕೆಪಿಸಿಸಿ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಮೇಲೆಯೂ ಹಲವು ಕಾಂಗ್ರೆಸ್ ಮುಖಂಡರು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಏನೇ ಕೇಳಿದರೂ 'ಹೈಕಮಾಂಡ್' ಎನ್ನುವ ಉತ್ತರವನ್ನು ನೀಡುವುದು ನಾಯಕರ ಸಿಟ್ಟಿಗೆ ಕಾರಣವಾಗಿದೆ. ಯಾವ ಮಾಹಿತಿಯನ್ನೂ ಸರಿಯಾಗಿ ಹೈಕಮಾಂಡಿಗೆ ತಲುಪಿಸುವ ಕೆಲಸಕ್ಕೆ ವೇಣು ಮುಂದಾಗದೇ ಇರುವುದು, ಪಕ್ಷದೊಳಗೆ ನಾಯಕರ ಆಕ್ರೋಶಕ್ಕೆ ಕಾರಣವಾಗಿರಬಹುದು.












Click it and Unblock the Notifications