ಮರೆಯಲಾದಿತೇ ಪೊಲೀಸಪ್ಪನವರ ಜೊತೆಗಿನ ನನ್ನ ಒಡನಾಟ?

By: ಹೊಳೆನರಸಿಪುರ ಮಂಜುನಾಥ
Subscribe to Oneindia Kannada

ದೇಶದ ಇತಿಹಾಸದಲ್ಲಿ ಅಪರೂಪ ಎನ್ನುವಂತೆ ಕರ್ನಾಟಕ ಪೊಲೀಸರೇ ಮುಷ್ಕರಕ್ಕೆ ಮುಂದಾಗಿದ್ದಾರೆ. ಈ ಸಂಬಂಧ, ಹೊಳೆನರಸಿಪುರ ಮಂಜುನಾಥ ಅವರು ತಮ್ಮ ಜೀವನದ ಮೆಲುಕನ್ನು ಲೇಖನದ ರೂಪದಲ್ಲಿ ಬರೆದು ಕಳುಹಿಸಿದ್ದಾರೆ, ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಲೇಖನಕ್ಕೆ ಸಾಂದರ್ಭಿಕ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ (ಸಂ)

ಇದೇ ಜೂನ್ ತಿಂಗಳ ನಾಲ್ಕರಂದು ಕರ್ನಾಟಕದ ಪೊಲೀಸರು ಮುಷ್ಕರ ನಡೆಸಲಿದ್ದಾರೆ ಎನ್ನುವುದು ಇಡೀ ದೇಶದ ಪೊಲೀಸ್ ವ್ಯವಸ್ಥೆಯಲ್ಲಿ ಒಂದು ಸಂಚಲನವನ್ನು ಸೃಷ್ಟಿಸಿದೆ. ಸದಾ ಸಮವಸ್ತ್ರ ಧರಿಸಿ ಶಿಸ್ತಿನ ಸಿಪಾಯಿಗಳಂತಿದ್ದು, ಸಮಾಜದ ಸ್ವಾಸ್ಥ್ಯ ಕಾಪಾಡುವ ಪೊಲೀಸರ ಮುಷ್ಕರಕ್ಕೆ ಅವರದ್ದೇ ಆದ ಕಾರಣಗಳಿವೆ. (ಸಾಮೂಹಿಕ ರಜೆಗೆ 50 ಸಾವಿರ ಪೊಲೀಸರ ನಿರ್ಧಾರ)

ವೇತನ ತಾರತಮ್ಯ, ಭಡ್ತಿ ತಡೆ, ಮೇಲಧಿಕಾರಿಗಳ ಕಿರುಕುಳ, ರಾಜಕಾರಣಿಗಳ ಒತ್ತಡ, ಅಪರಾಧಿಗಳಿಂದ ಸದಾ ಪ್ರಾಣ ಬೆದರಿಕೆ, ಸಂಸಾರದ ಆಗುಹೋಗುಗಳಿಗೆ ಸಮಯದ ಅಭಾವ, ಕೌಟುಂಬಿಕ ಕಲಹಗಳು, ಅನಾರೋಗ್ಯಕರ ವಾತಾವರಣದಲ್ಲಿ ನಿರ್ವಹಿಸುವ ಸಂಚಾರ ಪೊಲೀಸರಿಗಂತೂ ಸದಾ ತಮ್ಮ ಆರೋಗ್ಯದ ಚಿಂತೆ.

ಹೀಗೆ ಹತ್ತು ಹಲವಾರು ಪ್ರಬಲ ಕಾರಣಗಳಿಂದಲೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸುಮಾರು ಐವತ್ತು ಸಾವಿರಕ್ಕಿಂತ ಹೆಚ್ಚು ಪೊಲೀಸರು ಸಾಮೂಹಿಕ ರಜೆಯ ಮೇಲೆ ತೆರಳುತ್ತಿದ್ದಾರೆ. ಪೊಲೀಸರು ತುಂಬಾ ಶಿಸ್ತಿನವರು, ಹಾಗೆಲ್ಲಾ ಮುಷ್ಕರ ಮಾಡುವುದಿಲ್ಲ ಎನ್ನುವುದು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಭರವಸೆಯ ಮಾತು.

ಅಪರೂಪದ ಪೊಲೀಸ್ ಮುಷ್ಕರದ ಈ ಹಿನ್ನೆಲೆಯಲ್ಲಿ ಪೊಲೀಸರೊಂದಿಗಿನ ನನ್ನ ಒಡನಾಟದ ಕೆಲವು ನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಾನಾಗ ಆರನೆಯ ತರಗತಿಯಲ್ಲಿ ಓದುತ್ತಿದ್ದೆ, ಅಪ್ಪನ ಹೋಟೆಲ್ಲಿಗೆ ಒಬ್ಬರು ವಯಸ್ಕ ಪೊಲೀಸ್ ಪೇದೆ ಖಾಯಂ ಗಿರಾಕಿಯಾಗಿದ್ದರು. (ಪ್ರತಿಭಟನೆಗೆ ಮುಂದಾದ ಪೊಲೀಸರ 31 ಬೇಡಿಕೆಗಳು)

ಅಪ್ಪ ಮಾಡುತ್ತಿದ್ದ "ಕೇಟೀ" ಅವರಿಗೆ ತುಂಬಾ ಇಷ್ಟ, ಬೆಳಿಗ್ಗೆ ಮತ್ತು ಸಂಜೆ ಅಪ್ಪನ ಹೋಟೆಲಿಗೆ ಬಂದು "ಕೇಟೀ" ಕುಡಿಯುತ್ತಾ ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತುಕೊಳ್ಳುತ್ತಿದ್ದರು. ಅದಾಗಲೇ ನಿವೃತ್ತಿಯ ಅಂಚಿನಲ್ಲಿದ್ದ ಅವರು ತಮ್ಮ ಕೆಲಸದ ಅವಧಿಯ ಬಹು ಭಾಗವನ್ನು ತಮ್ಮ ಮೇಲಧಿಕಾರಿಯ ಮನೆಕೆಲಸದಲ್ಲಿಯೇ ಕಳೆಯುತ್ತಿದ್ದರಂತೆ! ಮುಂದೆ ಓದಿ..

 ಜೀವನದಲ್ಲಿ ಎಂದಿಗೂ ಮರೆಯಲಾಗದ ಪೊಲೀಸಪ್ಪ

ಜೀವನದಲ್ಲಿ ಎಂದಿಗೂ ಮರೆಯಲಾಗದ ಪೊಲೀಸಪ್ಪ

ಬೆಳಿಗ್ಗೆಯೇ ಅವರು ಹೋಗಿ ಅವರ ಮಕ್ಕಳನ್ನು ಶಾಲೆಗೆ ಬಿಡುವುದು, ನಂತರ ಬಂದು ಮನೆಯವರ ಬಟ್ಟೆಗಳನ್ನು ಒಗೆದು , ನಂತರ ಸಾಹೇಬರಿಗೆ ಊಟ ತೆಗೆದುಕೊಂಡು ಠಾಣೆಗೆ ಹೋಗುತ್ತಿದ್ದರಂತೆ! ಊಟದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೆ ಸಾಹೇಬರು ಎಲ್ಲರೆದುರಿಗೆ ಅವರ ವಯಸ್ಸಿಗೂ ಬೆಲೆ ಕೊಡದೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರಂತೆ! ಬಹುಶಃ ನನ್ನ ಜೀವನದಲ್ಲಿ ನಾನೆಂದಿಗೂ ಮರೆಯಲಾಗದ ಪೊಲೀಸಪ್ಪ ಅವರು!

 ಅಪ್ಪನ ಹೋಟೆಲ್ಲಿನಿಂದ ಟೀ ಸರಬರಾಜು

ಅಪ್ಪನ ಹೋಟೆಲ್ಲಿನಿಂದ ಟೀ ಸರಬರಾಜು

ಅಮ್ಮನಿಗೆ ತಿಪಟೂರಿಗೆ ವರ್ಗವಾದಾಗ ಅಪ್ಪ ಅಲ್ಲಿನ ತರಕಾರಿ ಮಾರ್ಕೆಟ್ ಪಕ್ಕದಲ್ಲಿ ಒಂದು ಸಣ್ಣ ಹೋಟೆಲ್ ಆರಂಭಿಸಿದ್ದರು. ಪಕ್ಕದಲ್ಲಿದ್ದ ತಾಲೂಕು ಕಚೇರಿ, ಪೊಲೀಸ್ ಠಾಣೆ ಹಾಗೂ ಇತರ ಸರ್ಕಾರಿ ಕಚೇರಿಗಳಿಗೆ ಅಪ್ಪನ ಹೋಟೆಲ್ಲಿನಿಂದ ಟೀ ಸರಬರಾಜಾಗುತ್ತಿತ್ತು. ಆಗ ಅಲ್ಲಿದ್ದ ಪ್ರತಿಯೊಬ್ಬ ಪೊಲೀಸ್ ಪೇದೆಯಿಂದ ಹಿರಿಯ ಅಧಿಕಾರಿಗಳವರೆಗೂ ಎಲ್ಲರೂ ಪರಿಚಿತರಾಗಿದ್ದರು.

 BSA ಸೈಕಲ್

BSA ಸೈಕಲ್

ಆಗ ಹೊಸದಾಗಿ ಬಿಡುಗಡೆಯಾಗಿದ್ದ BSA ಸೈಕಲ್ಲನ್ನು ಕೊಂಡಿದ್ದ ಪೇದೆಯೊಬ್ಬರು ನಾನು ಕೇಳಿದಾಗಲೆಲ್ಲಾ ತುಳಿಯಲು ಕೊಡುತ್ತಿದ್ದರು. ಟೀ ಕೊಡಲು ಠಾಣೆಗೆ ಹೋದಾಗ ಅಲ್ಲಿದ್ದ ಬಂದೂಕುಗಳನ್ನು ನನ್ನ ಕೈಗಳಿಂದ ಮುಟ್ಟಿ ಸಂಭ್ರಮಿಸುತ್ತಿದ್ದೆ. ಗತ್ತಿನಿಂದ ನಡೆದು ಬರುವ ಹಿರಿಯ ಅಧಿಕಾರಿಗಳಿಗೆ ಪೇದೆಗಳೆಲ್ಲಾ ಠಕ್ಕೆಂದು ಸೆಲ್ಯೂಟ್ ಹೊಡೆಯುವಾಗ ನಾನೂ ಸಹ ಅವರಂತೆಯೇ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಾಣುತ್ತಿದ್ದೆ.

 ಠಾಣೆಯಲ್ಲಿ ಅಧಿಕಾರಿಗಳ ಅಟ್ಟಹಾಸ

ಠಾಣೆಯಲ್ಲಿ ಅಧಿಕಾರಿಗಳ ಅಟ್ಟಹಾಸ

ಒಮ್ಮೊಮ್ಮೆ ಠಾಣೆಯಲ್ಲಿ ಅಧಿಕಾರಿಗಳ ಅಟ್ಟಹಾಸಕ್ಕೆ ಪೇದೆಗಳು ನಡುಗುತ್ತಿದ್ದರು, ಎದುರು ಮಾತನಾಡಲಾಗದೆ ಭಯಭೀತರಾಗಿ ತಲೆಬಗ್ಗಿಸಿ ನಿಲ್ಲುತ್ತಿದ್ದರು, ಆಗೆಲ್ಲಾ ಯಾವುದೇ ಕಾರಣಕ್ಕೂ ಪೊಲೀಸ್ ಪೇದೆಯ ಕೆಲಸಕ್ಕೆ ಮಾತ್ರ ಸೇರಲೇಬಾರದು ಅಂದುಕೊಳ್ಳುತ್ತಿದ್ದೆ!

 ಪ್ರಭಾಕರ್ ಎಂಬ ಪೊಲೀಸ್ ಅಧಿಕಾರಿ

ಪ್ರಭಾಕರ್ ಎಂಬ ಪೊಲೀಸ್ ಅಧಿಕಾರಿ

ಕಾಲೇಜು ದಿನಗಳಲ್ಲಿ ಕಂಡ ಪ್ರಭಾಕರ್ ಎಂಬ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ದರ್ಪ, ನೇರ ನಡವಳಿಕೆ, ಗತ್ತಿನ ಮಾತುಗಳಿಂದ ಇಂದಿಗೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ವೈದ್ಯನೊಬ್ಬ ಹೆಂಡತಿಗೆ ವಿಷದ ಇಂಜೆಕ್ಷನ್ ಕೊಟ್ಟು ಕೊಂದಾಗ, ಅವನನ್ನು ಬಂಧಿಸಿ ಮೆರವಣಿಗೆ ಮಾಡಿ ಜೈಲಿಗಟ್ಟಿದ್ದ ಅವರ ಖದರ್ ಇಂದಿಗೂ ಚಿರನೂತನ. ಆದರೆ ಆಗ ಮುಖ್ಯಮಂತ್ರಿಯಾಗಿದ್ದವರ ಪ್ರಭಾವದಿಂದ ಆ ವೈದ್ಯರು ಜೈಲಿನಿಂದ ಹೊರಬಂದಿದ್ದಲ್ಲದೆ ಮತ್ತೊಂದು ಮದುವೆಯನ್ನೂ ಮಾಡಿಕೊಂಡಿದ್ದರು.

 ಹೆಮ್ಮೆ ಎನಿಸಿದ ಪೊಲೀಸರ ಶೈಲಿ

ಹೆಮ್ಮೆ ಎನಿಸಿದ ಪೊಲೀಸರ ಶೈಲಿ

ನಮ್ಮ ಜೊತೆಗೆ ಕಾಲೇಜಿನಲ್ಲಿ ಓದುತ್ತಿದ್ದ ಗೆಳೆಯನೊಬ್ಬ ಮನೆಯಲ್ಲಿ ಪೋಷಕರು ಅವನಿಗೆ ಒಂದು "ಲೂನಾ" ಕೊಡಿಸಲಿಲ್ಲ ಎನ್ನುವ ಕಾರಣಕ್ಕಾಗಿ ಮಹಾಲಕ್ಷ್ಮಿ ಎಕ್ಸ್ಪ್ರೆಸ್ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಆಗ ಅವನ ಮೃತ ಶರೀರವನ್ನು ಕಾವಲು ಕಾಯ್ದು, ಅಲ್ಲಿಂದ ಆಸ್ಪತ್ರೆಗೆ ಸಾಗಿಸಿ, ಶವಪರೀಕ್ಷೆಯ ನಂತರ ಪೋಷಕರಿಗೊಪ್ಪಿಸಿ, ಅಪಾರ ದುಃಖದಲ್ಲಿದ ಅವರನ್ನು ಸಮಾಧಾನಪಡಿಸುತ್ತಿದ್ದ ಪೊಲೀಸರನ್ನು ಕಂಡು ನಮಗೆ ಅವರ ಬಗ್ಗೆ ಹೆಮ್ಮೆ ಎನ್ನಿಸಿತ್ತು.

 ಮಂಡಲ್ ವರದಿ ವಿರೋಧಿ ಚಳುವಳಿ

ಮಂಡಲ್ ವರದಿ ವಿರೋಧಿ ಚಳುವಳಿ

ವಿ.ಪಿ.ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದಾಗ ನಡೆದ ಮಂಡಲ್ ವರದಿ ವಿರೋಧಿ ಚಳುವಳಿಯಲ್ಲಿ ನನಗೆ ಪೊಲೀಸರ ಲಾಠಿಯ ಪರಿಚಯವಾಗಿತ್ತು. ವಿದ್ಯಾರ್ಥಿ ಸಂಘದ ಮುಖಂಡನಾಗಿ ಮೀಸಲಾತಿ ವಿರೋಧಿ ಚಳುವಳಿಯ ಮುಂಚೂಣಿಯಲ್ಲಿದ್ದ ನನಗೆ ಸಾಕಷ್ಟು ಏಟುಗಳು ಬಿದ್ದಿದ್ದವಲ್ಲದೇ ಜೈಲಿನ ದರ್ಶನವೂ ಆಗಿತ್ತು. ಮೊದಲ ಬಾರಿಗೆ ಪೊಲೀಸರ ಕ್ರೌರ್ಯದ ಪರಿಚಯವಾಗಿ ಅವರ ಮೇಲಿದ್ದ ಗೌರವ ಕಡಿಮೆಯಾಗಿತ್ತು.

 ಪೊಲೀಸರ ನಡುವಿನ ಸಂಪರ್ಕ

ಪೊಲೀಸರ ನಡುವಿನ ಸಂಪರ್ಕ

ಪದವಿ ಮುಗಿಸಿ ಉದ್ಯೋಗನಿಮಿತ್ತ ಬೆಂಗಳೂರಿಗೆ ಬಂದು ನೆಲೆಸಿದಾಗ ನನ್ನ ಹಾಗೂ ಪೊಲೀಸರ ನಡುವಿನ ಸಂಪರ್ಕ ತುಂಬಾ ಹೆಚ್ಚಾಯಿತು. ಪೊಲೀಸ್ ಇಲಾಖೆ ಸೇರಬೇಕೆಂದಿದ್ದ ನನಗೆ ಅಲ್ಲಿ ಉದ್ಯೋಗ ದೊರಕದೆ ಖಾಸಗಿ ಭದ್ರತಾ ಸಂಸ್ಥೆಯಲ್ಲಿ ಮೇಲ್ವಿಚಾರಕನಾಗಿ ಸೇರಿಕೊಂಡಿದ್ದೆ.

 ಪೊಲೀಸರ ಜೀವನದ ಹಲವಾರು ಮಹತ್ವದ ವಿಷಯಗಳು

ಪೊಲೀಸರ ಜೀವನದ ಹಲವಾರು ಮಹತ್ವದ ವಿಷಯಗಳು

ಗಸ್ತು ಬರುವ ಪೊಲೀಸರೆಲ್ಲ ನನಗೆ ಮಿತ್ರರಾಗಿದ್ದರು, ನನ್ನ ಉದ್ಯೋಗಕ್ಕೆ ಸಂಬಂಧಿಸಿದಂತೆ ಹಲವಾರು ಕಳ್ಳತನ, ಅಪಘಾತ ಪ್ರಕರಣಗಳಲ್ಲಿ ಸಂಬಂಧಿತ ಪೊಲೀಸ್ ಠಾಣೆಗಳೊಡನೆ ನನ್ನ ಸಂಪರ್ಕ ಅವ್ಯಾಹತವಾಗಿತ್ತು. ಆಗೆಲ್ಲಾ ಪೊಲೀಸರ ಜೀವನದ ಹಲವಾರು ಮಹತ್ವದ ವಿಷಯಗಳು ತಿಳಿದು ಬರುತ್ತಿದ್ದವು.

 ಹಿರಿಯ ಅಧಿಕಾರಿಗಳ ಕಿರುಕುಳ

ಹಿರಿಯ ಅಧಿಕಾರಿಗಳ ಕಿರುಕುಳ

ಕೆಲವು ಪೊಲೀಸ್ ಪೇದೆಗಳಂತೂ ಹಿರಿಯ ಅಧಿಕಾರಿಗಳ ಕಿರುಕುಳ ತಾಳಲಾಗದೆ ರಾಜೀನಾಮೆ ನೀಡುವ ಮಟ್ಟಕ್ಕೆ ರೋಸಿ ಹೋಗಿದ್ದರು. ಕೆಲವು ಪೊಲೀಸರು ಐಷಾರಾಮಿ ಜೀವನ ನಡೆಸುತ್ತಿದ್ದರೆ ಮತ್ತೆ ಕೆಲವರು ತಮ್ಮಆದರ್ಶಗಳಿಗೆ ಜೋತು ಬಿದ್ದು ತಮಗೆ ಬರುವ ಸಂಬಳದಲ್ಲಿಯೇ ಜೀವನ ನಡೆಸಲು ಹೆಣಗುತ್ತಿದ್ದರು.

 ಜೀವಂತವಾಗಿ ಬರುವ ಗ್ಯಾರಂಟಿಯೇ ಇಲ್ಲ

ಜೀವಂತವಾಗಿ ಬರುವ ಗ್ಯಾರಂಟಿಯೇ ಇಲ್ಲ

ಅದೆಷ್ಟೋ ಸಂದರ್ಭಗಳಲ್ಲಿ ಬೆಳಿಗ್ಗೆ ಕೆಲಸಕ್ಕೆಂದು ಹೋದವರು ಮನೆಗೆ ಜೀವಂತವಾಗಿ ಬರುವ ಗ್ಯಾರಂಟಿಯೇ ಇಲ್ಲದೇ, ಯಾವಾಗಲೂ ಅನಿಶ್ಚಿತತೆಯಲ್ಲಿಯೇ ಬದುಕಬೇಕಾದ ಅನಿವಾರ್ಯತೆ ಪೊಲೀಸರ ಕುಟುಂಬದವರಿಗಿದೆ. ಬೆಂಗಳೂರಿನಲ್ಲಿ ಕಾವೇರಿ ನೀರಿನ ಗಲಾಟೆಯಾದಾಗ ಮಾಗಡಿ ರಸ್ತೆಯಲ್ಲಿ ಒಬ್ಬ ಪೊಲೀಸ್ ಪೇದೆಯ ಕೈಯ್ಯನ್ನೇ ದುಷ್ಕರ್ಮಿಗಳು ಕತ್ತರಿಸಿ ಹಾಕಿದ್ದರು.

 ಡಾ. ರಾಜ್ ಕುಮಾರ್ ಅಂತಿಮಯಾತ್ರೆ

ಡಾ. ರಾಜ್ ಕುಮಾರ್ ಅಂತಿಮಯಾತ್ರೆ

ಕರ್ತವ್ಯ ನಿರತರಾಗಿದ್ದಾಗ ವೇಗವಾಗಿ ಬಂದ ವಾಹನವೊಂದರಿಂದ ಪಾದಚಾರಿಗಳನ್ನು ಉಳಿಸಲು ಹೋಗಿ ತಮ್ಮ ಪ್ರಾಣವನ್ನೇ ಬಲಿದಾನ ನೀಡಿದ ಗಿರಿಜಾ ಮೀಸೆಯ "ಪೊಲೀಸ್ ತಿಮ್ಮಯ್ಯ" ನವರನ್ನು ಯಾರಾದರೂ ಮರೆಯಲಾದೀತೆ? ಡಾ. ರಾಜ್ ಕುಮಾರ್ ಅಂತಿಮಯಾತ್ರೆಯ ವೇಳೆ ನಡೆದ ಗಲಭೆಯಲ್ಲಿನ ಹಿಂಸಾಚಾರಕ್ಕೆ ಬಲಿಯಾದ ಮಂಜುನಾಥ ಎಂಬ ಪೊಲೀಸ್ ಅಧಿಕಾರಿಯ ತ್ಯಾಗವನ್ನು ಮರೆಯಲು ಸಾಧ್ಯವೇ?

 ಮಲ್ಲಿಕಾರ್ಜುನ್ ಬಂಡೆ

ಮಲ್ಲಿಕಾರ್ಜುನ್ ಬಂಡೆ

ಖದೀಮರ ಗುಂಡೇಟಿಗೆ ಬಲಿಯಾದ ಮಲ್ಲಿಕಾರ್ಜುನ್ ಬಂಡೆ, ನೆಲಮಂಗಲದಲ್ಲಿ ಕಳ್ಳರ ಆಕ್ರಮಣಕ್ಕೆ ಬಲಿಯಾದ ಜಗದೀಶ್ ಮುಂತಾದ ಪೊಲೀಸ್ ಅಧಿಕಾರಿಗಳನ್ನು ಹೇಗೆ ಮರೆಯಲಾದೀತು? ಇನ್ನು ನಕ್ಸಲರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ದಿನನಿತ್ಯವೂ ಒಂದಿಲ್ಲೊಂದು ಪ್ರಕರಣಗಳಲ್ಲಿ ಪೊಲೀಸರು ಸಾಯುತ್ತಲೇ ಇದ್ದಾರೆ.

 ನಮ್ಮ ದೃಷ್ಟಿಕೋನ ಬದಲಾಗಲಿ

ನಮ್ಮ ದೃಷ್ಟಿಕೋನ ಬದಲಾಗಲಿ

ಸ್ವಸ್ಥ ಸಮಾಜಕ್ಕಾಗಿ, ಸಾರ್ವಜನಿಕರ ರಕ್ಷಣೆಗಾಗಿ, ನಮ್ಮ ಸುರಕ್ಷಿತ ನಾಳೆಗಳಿಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟಿರುವ ಪೊಲೀಸರ ಬಗ್ಗೆ ನಮ್ಮ ದೃಷ್ಟಿಕೋನ ಬದಲಾಗಬೇಕಿದೆ, ಏಕೆಂದರೆ ಅವರೂ ನಮ್ಮಂತೆಯೇ ಮನುಷ್ಯರು ಎನ್ನುವುದು ಎಲ್ಲರಿಗೂ ಅರಿವಾಗಬೇಕಿದೆ.

 ಅವರಿಗೆ ನಿಮ್ಮ ಬೆಂಬಲವಿರಲಿ

ಅವರಿಗೆ ನಿಮ್ಮ ಬೆಂಬಲವಿರಲಿ

ತಮ್ಮ ವೇತನ ತಾರತಮ್ಯ, ರಜೆಯಿಲ್ಲದೆ ನಿರಂತರ ದುಡಿತ, ಹಿರಿಯಧಿಕಾರಿಗಳ ಹಾಗೂ ರಾಜಕಾರಣಿಗಳ ದಬ್ಬಾಳಿಕೆಯನ್ನು ವಿರೋಧಿಸಿ ಪೊಲೀಸರು ನಡೆಸುತ್ತಿರುವ ಈ ಮುಷ್ಕರಕ್ಕೆ ನನ್ನ ಬೆಂಬಲವಿದೆ. ಎಂದೋ ಎಲ್ಲೋ ಒಬ್ಬ ಪೊಲೀಸ್ ಪೇದೆ ನಿಮ್ಮಿಂದ ನೂರು ರೂಪಾಯಿ ಲಂಚ ಪಡೆದ ಸನ್ನಿವೇಶವನ್ನು ಮರೆತುಬಿಡಿ, ಇಡೀ ಸಮಾಜದ ಹಿತದೃಷ್ಟಿಯಿಂದ ಯೋಚಿಸಿ, ಪೊಲೀಸರ ತ್ಯಾಗ, ಬಲಿದಾನಗಳನ್ನು ಮನದಲ್ಲಿ ಸ್ಮರಿಸಿ, ಅವರ ಈ ಪ್ರತಿಭಟನೆಗೆ ನಿಮ್ಮ ಸಹಕಾರವಿರಲಿ, ಬೆಂಬಲವಿರಲಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Police proposed strike on June 4: An article by Holenarasipura Manjunath
Please Wait while comments are loading...