ಸಿದ್ಧಾರ್ಥ ಕನಸು ಕಾಫಿ ಡೇ ಉಳಿಸಲು ಒಂದಾದ ರಾಜ್ಯದ ಜನ, ಮಲೆನಾಡಿಗರು ಮುಂದೆ
ಬೆಂಗಳೂರು, ಆಗಸ್ಟ್ 03: ಸಿದ್ಧಾರ್ಥ ಅವರ ಅಗಲಿಕೆಯ ನಂತರ ಅವರು ಕಟ್ಟಿ ಬೆಳೆಸಿದ ಕೆಫೆ ಕಾಫಿ ಡೇ ಸಂಸ್ಥೆಯ ಷೇರುಗಳು ತೀವ್ರ ಕುಸಿತ ಕಂಡು ಸಂಕಷ್ಟಕ್ಕೆ ಸಿಲುಕಿದೆ. ಆದರೆ ಸಿದ್ಧಾರ್ಥ ಕನಸಿನ ಕೂಸು ಕೆಫೆ ಕಾಫಿ ಡೇಯನ್ನು ಉಳಿಸಿಕೊಳ್ಳಲು ಕರ್ನಾಟಕ ಜನ ಪಣತೊಟ್ಟಿದ್ದಾರೆ.
ಸಿದ್ಧಾರ್ಥಾ ಅವರು ಕಾಣೆ ಆದಾಗಿನಿಂದಲೂ ಕೆಫೆ ಕಾಫಿ ಡೇ ಷೇರು ಭಾರಿ ಪ್ರಮಾಣದಲ್ಲಿ ಕುಸಿಯಲಾರಂಭಿಸಿತು. ಅವರು ನಿಧನದ ಸುದ್ದಿ ಹೊರಬಿದ್ದ ನಂತರವಂತೂ ಕುಸಿತ ಇನ್ನಷ್ಟು ಹೆಚ್ಚಾಯಿತು. ಆದರೆ ಈಗ ಕೆಫೆ ಕಾಫಿ ಡೇ ಷೇರನ್ನು ಕೊಂಡು ನಷ್ಟದಲ್ಲಿರುವ ಸಂಸ್ಥೆಗೆ ಸಹಾಯ ಮಾಡಲು ರಾಜ್ಯದ ಜನ ಮುಂದಾಗಿದ್ದಾರೆ, ಅದರಲ್ಲಿ ಮಲೆನಾಡಿಗರೇ ಹೆಚ್ಚಾಗಿದ್ದಾರೆ.
ನಷ್ಟದ ಕಡೆ ವಾಲುತ್ತಿದ್ದ ಕೆಫೆ ಕಾಫಿ ಡೇ ಷೇರನ್ನು ಕೊಳ್ಳುವಂತೆ ಆ ಮೂಲಕ ಸಿದ್ಧಾರ್ಥ ಅವರ ಕನಸನ್ನು ಜೀವಂತ ಉಳಿಸುವಂತೆ ಮಲೆನಾಡು ಭಾಗದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಯಿತು. ಅದರಂತೆ ಸಾವಿರಾರು ಜನ ಕೆಫೆ ಕಾಫಿ ಡೇ ಯ ಷೇರು ಖರೀದಿ ಮಾಡುತ್ತಿದ್ದಾರೆ.

ರಾಜ್ಯದ ಜನರು ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲಿರುವ ಕನ್ನಡಿಗರೂ ಸಹ ಕೆಫೆ ಕಾಫಿ ಡೇ ಷೇರು ಖರೀದಿಸಲು ಮುಂದಾಗಿದ್ದಾರೆ. ಆದರೆ ಮಲೆನಾಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಷೇರು ಖರೀದಿಯಲ್ಲಿ ತೊಡಗಿದ್ದಾರೆ.
ಸಿದ್ಧಾರ್ಥ ಅವರು ಮಲೆನಾಡಿಗರೇ ಆಗಿದ್ದು, ಮಲೆನಾಡಿನ ಸಾವಿರಾರು ಮಂದಿ ಯುವಕರಿಗೆ ತರಬೇತಿ ನೀಡಿ ಉದ್ಯೋಗಗಳನ್ನೂ ನೀಡಿದ್ದರು. ಮಲೆನಾಡಿನಲ್ಲಿ ಸಿದ್ಧಾರ್ಥ ಅವರು ಆದರ್ಶ ವ್ಯಕ್ತಿಯಾಗಿದ್ದರು, ಪೂಜನೀಯರೂ ಆಗಿದ್ದರು. ಹಾಗಾಗಿ ಅಂತಹಾ ವ್ಯಕ್ತಿಯ ಕನಸನ್ನು ಉಳಿಸಿಕೊಳ್ಳುವುದು ತಮ್ಮ ಜವಾಬ್ದಾರಿ ಎಂಬಂತೆ ಮಲೆನಾಡಿಗರು ಷೇರು ಖರೀದಿಸುತ್ತಿದ್ದಾರೆ.
ಆದರೆ ನಷ್ಟದ ಅಂಚಿಗೆ ಜಾರುತ್ತಿರುವ ಕೆಫೆ ಕಾಫಿ ಡೇ ಉಳಿಸಲು ಷೇರು ಖರೀದಿ ಹೆಚ್ಚಾಗಬೇಕಿದೆ. ಇನ್ನಷ್ಟು ಮಂದಿ ಷೇರು ಖರೀದಿಗೆ ಮುಂದಾಗಬೇಕಿದೆ.












Click it and Unblock the Notifications