ಬಾಡಿಗೆ ಪಾವತಿ ಮಾಡದಿದ್ದರೆ ಅಂಗಡಿಗಳಿಗೆ ಬೀಗ
ಬೆಂಗಳೂರು, ಮೇ.28 : ಕರ್ನಾಟಕದಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ರಾಜ್ಯದ ಒಟ್ಟಾರೆ ಸುದ್ದಿಗಳ ಸಂಗ್ರಹ ನಿಮಗೆ ನೀಡುವ ಪ್ರಯತ್ನ ಇದಾಗಿದೆ.
2.30 : ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರಿ ಸ್ವಾಮ್ಯದ ಮಾರುಕಟ್ಟೆಗಳಲ್ಲಿ ಸ್ಥಳಾವಕಾಶ ಪಡೆದು ಹಲವು ವರ್ಷಗಳಿಂದ ಬಾಡಿಗೆ ಪಾವತಿ ಮಾಡದೇ ಇರುವ ಮಳಿಗೆಗಳಿಗೆ, ಬಾಡಿಗೆ ಪಾವತಿಸಲು ಬಿಬಿಎಂಪಿ ಮಾರುಕಟ್ಟೆ ಸ್ಥಾಯಿ ಸಮಿತಿ ಅಧ್ಯಕ್ಷ್ಯೆ ಗೌರಮ್ಮ 15 ದಿನಗಳ ಗಡುವು ನೀಡಿದ್ದಾರೆ. ಬಾಡಿಗೆ ಪಾವತಿ ಮಾಡದಿದ್ದರೆ, ಮಳಿಗೆಗಳಿಗೆ ಬೀಗ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

12.30 : ಮಂಡ್ಯದಲ್ಲಿ ರಮ್ಯಾ ಸೋಲಿಗೆ ಕಾರಣ ಏನೆಂದು ಪಕ್ಷ ತನಿಖೆ ಮಾಡಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಎಲ್.ಆರ್.ಶಿವರಾಮೇಗೌಡ ಹೇಳಿದ್ದಾರೆ. ಮಂಡ್ಯದಲ್ಲಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸದಿರುವುದು ಅವರ ಸೋಲಿಗೆ ಕಾರಣ ಎಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಹೇಳಿದ್ದಾರೆ.
11.30 : ಕೊಲ್ಲಾಪುರದಲ್ಲಿ ಬಂಧಿಸಲಾಗಿರುವ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬುಧವಾರ ಮಧ್ಯಾಹ್ನ ಬಿಜಾಪುರಕ್ಕೆ ಕರೆತರಲಾಗುವುದು ಎಂದು ಉತ್ತರ ವಲಯ ಐಜಿಪಿ ಭಾಸ್ಕರರಾವ್ ಹೇಳಿದ್ದಾರೆ.
10.30 : ಸೋಮವಾರ ಬಿಜಾಪುರದಲ್ಲಿ ಬಿಜೆಪಿ ವಿಯಜೋತ್ಸವದ ವೇಳೆ ನಡೆದ ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಯತ್ನಾಳ್ ಅವರನ್ನು ಬುಧವಾರ ಬೆಳಗ್ಗೆ ಬಂಧಿಸಲಾಗಿದೆ. [ಯತ್ನಾಳ್ ಗೆ ಬಂಧನ ಭೀತಿ]
ಐಜಿಪಿ ಭಾಸ್ಕರ್ ರಾವ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕೊಲ್ಲಾಪುರದ ಓರಿಯಂಟಲ್ ಹೋಟೆಲ್ ನಲ್ಲಿ ಯತ್ನಾಳ್ ಅವರನ್ನು ಬಂಧಿಸಲಾಗಿದೆ. ಶಾಂತಿಭಂಗ ಪ್ರಕರಣದ ಆರೋಪದಡಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಗಲಭೆ ನಂತರ ಯತ್ನಾಳ್ ತಲೆ ಮರಿಸಿಕೊಂಡಿದ್ದರು.
10 ಗಂಟೆ : ಕೆಪಿಸಿಸಿ ಕಚೇರಿಯಲ್ಲಿ ಇಂದು ಕರೆಯಲಾಗಿದ್ದ ಆತ್ಮಾವಲೋಕನ ಸಭೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ. ಕೆಲ ಡಿಸಿಸಿ ಅಧ್ಯಕ್ಷರ ಕೋರಿಕೆ ಮೇರೆಗೆ ಈ ಬದಲಾವಣೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಸಹ ಸಚಿವರ ಕಾರ್ಯವೈಖರಿ ಪ್ರಗತಿ ಪರಿಶೀಲನೆಯಲ್ಲಿ ತೊಡಗಿರುವುದರಿಂದ ಸಭೆಯನ್ನು ಮೇ 28ರ ಗುರುವಾರಕ್ಕೆ ಮುಂದೂಡಲಾಗಿದೆ.
9.30 : ಸಿಎಂ ಸಿದ್ದರಾಮಯ್ಯ ಇಂದು ಸಂಜೆ 5 ಗಂಟೆಗೆ ಸಚಿವ ಸಂಪುಟ ಸಭೆ ಕರೆದಿದ್ದಾರೆ. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ವಿಧಾನ ಮಂಡಲ ಅಧಿವೇಶ ನಡೆಸುವ ದಿನಾಂಕವನ್ನು ಇಂದು ಅಂತಿಮಗೊಳಿಸುವ ಸಾಧ್ಯತೆ ಇದ್ದು, ಒಟ್ಟು 14 ವಿಷಯಗಳ ಕುರಿತು ಸಭೆ ನಡೆಯಲಿದೆ.
9 ಗಂಟೆ : ಕರ್ನಾಟಕ ಕಾಂಗ್ರೆಸ್ ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಬುಧವಾರ ಕರೆದಿದ್ದ ಆತ್ಮಾವಲೋಕನ ಸಭೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ. ಮೇ 29ರಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಈ ಸಭೆ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿದೆ.
8.30 : ರಾಮನಗರದ ಜಿಲ್ಲೆಯ ಕನಕಪುರ ತಾಲೂಕಿನ ಸಾಸಲಾಪುರ ಗ್ರಾಮದಲ್ಲಿ 9 ಕಾಡಾನೆಗಳು ಕಾಣಿಸಿಕೊಂಡಿವೆ. ಅಪಾರ ಪ್ರಮಾಣದ ಬೆಳೆಯನ್ನು ಆನೆಗಳು ನಾಶ ಮಾಡಿದ್ದು, ಗ್ರಾಮದಂಚಿನಲ್ಲಿರುವ ಅರಣ್ಯದಲ್ಲಿ ಬೀಡುಬಿಟ್ಟಿವೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಧಾವಿಸಿದ್ದಾರೆ.












Click it and Unblock the Notifications