16 ಅಧಿಕಾರಿಗಳಿಗೆ ಸೇರಿದ 60 ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ
ಬೆಂಗಳೂರು, ಮಾರ್ಚ್ 27: ಲೋಕಸಭೆ ಚುನಾವಣೆಯ ಹೊತ್ತಿನಲ್ಲಿಯೇ ಲೋಕಾಯುಕ್ತ ಪೊಲೀಸರು ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಪಿಡಿಓ ಸೇರಿದಂತೆ ವಿವಿಧ ಹಂತದ 16 ಅಧಿಕಾರಿಗಳ ಮನೆಗಳ ಮೇಲೆ ಬುಧವಾರ ಲೋಕಾಯುಕ್ತ ದಾಳಿ ನಡೆದಿದೆ.
ಬುಧವಾರ 16 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 60 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು, ಎಷ್ಟು ಅಕ್ರಮ ಆಸ್ತಿ ಪತ್ತೆಯಾಗಿದೆ? ಎಂದು ಸಂಜೆಯ ವೇಳೆಗೆ ಮಾಹಿತಿ ಸಿಗಲಿದೆ.

ಬೆಂಗಳೂರು, ಉತ್ತರ ಕನ್ನಡ, ಬೀದರ್, ರಾಮನಗರ, ಕಾರವಾರ, ಚನ್ನಪಟ್ಟಣ ಸೇರಿದಂತೆ 60 ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಪರಿಶೀಲನೆ ಕಾರ್ಯವನ್ನು ಮುಂದುವರೆಸಿದ್ದಾರೆ.
ಪಿಡಿಓ ಅಧಿಕಾರಿಗಳ ವಶಕ್ಕೆ: ಲೋಕಾಯುಕ್ತ ಪೊಲೀಸರು ರಾಮನಗರ ಜಿಲ್ಲೆಯ ಬಿಡದಿಯ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ವಶಕ್ಕೆ ಪಡೆದಿದ್ದಾರೆ. ಪಿಡಿಒ ಯತೀಶ್ ಚಂದ್ರಗೆ ಸೇರಿದ 7 ಕಡೆಗಳಲ್ಲಿ ಏಕಕಾಲದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಪತ್ನಿ ಹೆಸರಿನಲ್ಲಿ ಅಕ್ರಮ ಆಸ್ತಿ ಮಾಡಿದ್ದಾರೆ ಎಂಬುದು ಆರೋಪ. ರಾಮನಗರ ಈಗಲ್ಟನ್ ರೆಸಾರ್ಟ್‌ನಲ್ಲಿದ್ದ ಯತೀಶ್ ಚಂದ್ರನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಇಂಜಿನಿಯರ್ ರಂಗನಾಥ್ ಅವರಿಗೆ ಸೇರಿದ 5 ಕಡೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ಅಲ್ಲದೇ ಚನ್ನಪಟ್ಟಣ ತಾಲೂಕಿನ ಮೈಲನಾಯಕಹಳ್ಳಿ ಪಿಡಿಒ ಶಿಬಾ ಮನೆ ಮೇಲೆಯೂ ದಾಳಿ ಮಾಡಲಾಗಿದೆ.
ಅಕ್ರಮ ಆಸ್ತಿಗಳಿಕೆ ಆರೋಪ: ಬಿಡದಿ ಹೋಬಳಿ ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಯತೀಶ್ ಚಂದ್ರ ಹಾಗೂ ಚನ್ನಪಟ್ಟಣದ ಮೈಲನಾಯಕನಹಳ್ಳಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಶಿಬಾ ಮೇಲೆ ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಜಿಲ್ಲೆಯ ಅತಿ ಶ್ರೀಮಂತ ಗ್ರಾಮ ಪಂಚಾಯತಿ ಎಂಬ ಹೆಸರು ಪಡೆದಿರುವ ಬಿಡದಿ ಹೋಬಳಿಯ ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಯತೀಶ್ ಚಂದ್ರ ಮನೆ ಹಾಗೂ ಗ್ರಾಮ ಪಂಚಾಯತಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಮಾಡಿ, ದಾಖಲೆ ಪರಿಶೀಲಿಸುತ್ತಿದ್ದಾರೆ.
ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿ ಕಚೇರಿ ಹಾಗೂ ಮೈಸೂರಿನ ನಿವಾಸದ ಮೇಲೆ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ಮಾಡಿದ್ದಾರೆ. ಗ್ರಾಮ ಪಂಚಾಯತಿ ಕಛೇರಿಯಲ್ಲಿ ಹಲವು ಕಡತಗಳನ್ನ ಪರಿಶೀಲನೆ ಮಾಡಲಾಗುತ್ತಿದೆ.
ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿ ಕಚೇರಿ, ಮೈಸೂರಿನ ನಿವಾಸ, ಹಾಗೂ ಬಿಡದಿಯ ಈಗಲ್ಟನ್ ರೆಸಾರ್ಟ್‌ನಲ್ಲಿನ ಪ್ಲಾಟ್ ಮೇಲೆ ಏಕಕಾಲದಲ್ಲಿ ದಾಳಿ ಮಾಡಿರುವ, ಓರ್ವ ಡಿವೈಎಸ್ಪಿ ಸೇರಿದಂತೆ 10ಕ್ಕೂ ಹೆಚ್ಚು ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಅಕ್ರಮ ಆಸ್ತಿಗಳಿಕೆ ಬಗ್ಗೆ ಲೋಕಾಯುಕ್ತ ಪೋಲಿಸರಿಗೆ ಶೇಷಗಿರಿಹಳ್ಳಿ ಗ್ರಾಮದ ವ್ಯಕ್ತಿ ನೀಡಿದ್ದ ದೂರಿನ ಹಿನ್ನಲೆಯಲ್ಲಿ ದಾಳಿ ನಡೆದಿದೆ.
ಮೈಸೂರು ಲೋಕಾಯುಕ್ತ ಅಧಿಕಾರಿಗಳು ಚನ್ನಪಟ್ಟಣ ಎಸ್‌ಬಿಐ ಬ್ಯಾಂಕ್ ಬಳಿಯಿರುವ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿಬಾ ಮನೆಯ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಮೈಸೂರು ಲೋಕಾಯುಕ್ತ ಪೋಲಿಸರು ಸಿಪಿಐ ಜಯರತ್ನ ನೇತೃತ್ವದಲ್ಲಿ ದಾಖಲೆಗಳ ಶೋಧ ಕರ್ಯ ಮುಂದುವರೆಸಿದ್ದಾರೆ.
ತಾಲ್ಲೂಕಿನ ಮೈಲನಾಯಕನಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸತ್ತಿರುವ ಶಿಬಾ ಕಳೆದ ಒಂದೂವರೆ ತಿಂಗಳಿನಿಂದ ರಜೆಯಲ್ಲಿದ್ದರು. ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿ ಪಿಡಿಓ ಯತೀಶ್ ಚಂದ್ರ ಸ್ನೇಹಿತೆಯಾಗಿರುವ ಪಿಡಿಓ ಶಿಬಾ ಮನೆಯಲ್ಲಿ ಯತೀಶ್ ಚಂದ್ರ ದಾಖಲೆಗಳು ಸಿಗಬಹುದು ಎಂಬ ಗುಮಾನಿಯ ಮೇಲೆ ದಾಳಿ ನಡೆದಿದೆ.












Click it and Unblock the Notifications