Lok Sabha Election Result 2024: ಕುಟುಂಬ ರಾಜಕಾರಣ ಕಾಪಾಡಿದ ಸಚಿವರ ಮಕ್ಕಳು
ಕರ್ನಾಟಕ ಲೋಕಸಭಾ ಚುನಾವಣೆ ಫಲಿತಾಂಶ ಬಹುತೇಕ ಬಹಿರಂಗವಾದಂತಾಗಿದೆ. ಅಧಿಕೃತ ಫಲಿತಾಂಶ ಸಂಜೆ ಹೊರಬೀಳಲಿದ್ದು ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಸೋಲು ಗೆಲುವು ಖಚಿತವಾಗಿದೆ. ಈ ಬಾರಿಯೂ ರಾಜ್ಯದ ಕೆಲ ಕ್ಷೇತ್ರಗಳಲ್ಲಿ ಸಚಿವರ ಮಕ್ಕಳನ್ನ ಕಣಕ್ಕಿಳಿಸಲಾಗಿತ್ತು. ಅವರಲ್ಲಿ ಕೆಲ ಅಭ್ಯರ್ಥಿಗಳು ಕುಟುಂಬ ರಾಜಕಾರಣ ಕಾಪಾಡಿದ್ದಾರೆ.
ಚಿಕ್ಕೋಡಿ: ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಗೆಲುವು
ರಾಜ್ಯದ ಗಮನ ಸೆಳೆದಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿಬಾರಿಸಿದೆ. ಬಿಜೆಪಿಯ ಅಣ್ಣಾಸಾಹೇಬ್ ಜೊಲ್ಲೆ ಅವರ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ, ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಆ ಮೂಲಕ ಯುವ ನಾಯಕಿ ಪ್ರಯಾಂಕಾ ಜಾರಕಿಹೊಳಿ ಅವರು ಬಿಜೆಪಿಯ ಭದ್ರಕೋಟೆಯನ್ನು ಭೇದಿಸುವ ಜತೆಗೆ ರಾಜ್ಯದ ಗಮನ ಸೆಳೆದಿದ್ದಾರೆ. ಪ್ರಿಯಾಂಕಾ ಜಾರಕಿಹೊಳಿ ಅವರು 96,253 ಮತಗಳ ಅಂತರದಿಂದ ಜಯಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 6,80,179 ಮತ ಗಳಿಸಿದರೆ, ಬಿಜೆಪಿ ಅಭ್ಯರ್ಥಿ 5,83,926 ಮತಗಳನ್ನು ಪಡೆದರು.
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಗೆಲುವು
ತೀವ್ರ ಕುತೂಹಲ ಮೂಡಿಸಿದ್ದ ಬೆಳಗಾವಿ ಲೋಕ ಕದನದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ 1,75,574 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಹಾಗು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಸೋಲುಂಡಿದ್ದಾರೆ. ಜಗದೀಶ್ ಶೆಟ್ಟರ್ 7,56,471 ಮತಗಳನ್ನು ಪಡೆದರೆ, ಮೃಣಾಲ್ ಹೆಬ್ಬಾಳ್ಕರ್ 5,80,897 ಮತ ಪಡೆದರು. ಒಟ್ಟು 13,75,285 ಮತಗಳು ಚಲಾವಣೆಗೊಂಡಿದ್ದವು.
ಬೀದರ್: ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಗೆಲುವು
ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ವಿರುದ್ಧ ಹಿನ್ನಡೆ ಸಾಧಿಸಿದ್ದಾರೆ.26 ವರ್ಷದ ಸಾಗರ್ ಕರ್ನಾಟಕದಲ್ಲಿ ಕಣದಲ್ಲಿರುವ ಅತ್ಯಂತ ಕಿರಿಯ ಅಭ್ಯರ್ಥಿಯಾಗಿದ್ದು, 65,509 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಸಾಗರ್ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಪುತ್ರ. ಬಿಜೆಪಿಯಿಂದ ಟಿಕೆಟ್ ಘೋಷಣೆಗೂ ಮುನ್ನ ಖೂಬಾ ತೀವ್ರ ಆಂತರಿಕ ವಿರೋಧ ಎದುರಿಸಿದ್ದರು.

ಬೆಂಗಳೂರು ದಕ್ಷಿಣ: ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಸೋಲು
ಬಿಜೆಪಿಯ ಭದ್ರ ನೆಲೆಯಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಕೇಸರಿ ಪಕ್ಷ ಹಾಗೂ ಕೈ ನಡುವೆ ನಿಕಟ ಪೈಪೋಟಿ ನಿರೀಕ್ಷಿಸಲಾಗಿತ್ತು. ಆದರೆ ಭರ್ಜರಿ ಗೆಲುವಿನೊಂದಿಗೆ ಬಿಜೆಪಿಯಿಂದ ತೇಜಸ್ವಿ ಸೂರ್ಯ ಎರಡನೇ ಬಾರಿಗೆ ಸಂಸತ್ ಪ್ರವೇಶಿಸಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ತೀರಾ ಅಲ್ಪ ಮತಗಳಿಂದ ಸೋತಿದ್ದ ಕಾಂಗ್ರೆಸ್‌ನ ಅಭ್ಯರ್ಥಿ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರ ಸೌಮ್ಯಾ ರೆಡ್ಡಿ, ತಮ್ಮ ಲೋಕಸಭೆ ಪ್ರವೇಶ ಸಾಧ್ಯವಾಗಲಿದೆ ಎಂಬ ವಿಶ್ವಾಸದಲ್ಲಿದ್ದರು. ಅವರಿಗೆ ಇನ್ನೊಂದು ಸೋಲಿನ ಕಹಿ ಎದುರಾಗಿದೆ.
ಬಾಗಲಕೋಟೆ: ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ ಸೋಲು
ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ವಿರುದ್ಧ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ್ ಗೆಲುವು ಸಾಧಿಸಿದ್ದಾರೆ. ಗದ್ದಿಗೌಡರ್ ಅವರು 54221 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಗದ್ದಿಗೌಡರ್ ಅವರಿಗೆ ಒಟ್ಟಾರೆ 5,12,289 ಮತಗಳು ಲಭಿಸಿದ್ದು, ಸಂಯುಕ್ತಾ ಅವರಿಗೆ 4,58,068 ಮತಗಳು ಲಭಿಸಿವೆ.












Click it and Unblock the Notifications