Basavaraj Horatti: ಈ ಕಾರಣಕ್ಕೆ ರಾಜೀನಾಮೆಗೆ ತೀರ್ಮಾನಿಸಿದ್ದೇನೆ: ಬಸವರಾಜ ಹೊರಟ್ಟಿ
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮತ್ತೆ ರಾಜೀನಾಮೆ ನೀಡುವ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗಷ್ಟೇ ಅವರು ರಾಜೀನಾಮೆ ನೀಡುವುದಾಗಿ ಬಹಿರಂಗವಾಗಿ ಘೋಷಿಸಿದ್ದರು. ಆದರೆ ಇದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗಿದ್ದರಿಂದ ನಿರ್ಧಾರ ಕೈಬಿಟ್ಟಿದ್ದರು. ಇದೀಗ ಅವರು ಮತ್ತೆ ದಿಢೀರನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವು ಕೊಟ್ಟಿದ್ದಾರೆ. ಇದಕ್ಕೆ ಕಾರಣ ಏನೂ ಎಂಬುದನ್ನೂ ಹೊರಟ್ಟಿ ಅವರು ಬಹಿರಂಗಪಡಿಸಿದ್ದಾರೆ.
ಸದನಕ್ಕೆ ಕಾಲಿಟ್ಟ ಮೇಲೆ ಅಲ್ಲಿ ಎಲ್ಲರೂ ಶಾಸಕರೇ, ಹಾಗಾಗಿ ಅಲ್ಲಿ ಯಾವುದೇ ವಯಸ್ಸಿನ ಪ್ರಶ್ನೆ ಎದುರಾಗುವುದಿಲ್ಲ. ಸದನದಲ್ಲಿ ಅನುಭವಿಗಳು ಹೇಳಿದ ಮಾತನ್ನು ಕೇಳುವ ಪರಿಪಾಠವೂ ಇಲ್ಲ, ಇಲ್ಲಿ ಯಾರಿಗೂ ಯಾರ ಹೆದರಿಕೆಯೂ ಇಲ್ಲ. ಎಲ್ಲರಿಗೂ ಹಣ ಕೊಟ್ಟು ಆಯ್ಕೆಯಾಗಿ ಬರುತ್ತೇನೆ ಎಂಬ ಭಾವನಗೆ ಒಂದೆಡೆಯಾದರೆ, ಮತ್ತೊಂದೆಡೆ ಜಾತಿ ವ್ಯವಸ್ಥೆ ಕೂಡ ದೊಡ್ಡದಾಗಿದೆ ಎಂದು ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು. ಈ ಹಿಂದಿದ್ದ ಹಾಗೂ ಈಗ ಇರುವ ರಾಜಕಾರಣಕ್ಕೆ ಬಹಳ ವ್ಯತ್ಯಾಸವಿದೆ. ಇಲ್ಲಿ ಏನಿದ್ರು ಹಣ ಕೊಟ್ಟು ಗೆದ್ದು ಬರುವುದು, ಬೆಂಗಳೂರಿನಲ್ಲಿ ಕುಳಿತು ಹಣ ಮಾಡಿ ಮತ್ತೆ ಹಣ ಖರ್ಚು ಮಾಡಿ ಪರಿಷತ್‌ಗೆ ಆಯ್ಕೆಯಾಗುವ ಕೆಲಸ ನಡೆಯುತ್ತಿದೆ. ಇನ್ನು ಎಲ್ಲಿವರೆಗೆ ಹಣ ಕೊಟ್ಟು ಮತ ಪಡೆಯುತ್ತಾರೋ ಅಲ್ಲಿಯವರೆಗೆ ಪ್ರಜಾಪ್ರಭುತ್ವವನ್ನ ಕೇಳುವವರು ಯಾರೂ ಇರೋದಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ನಾನು ರಾಜೀನಾಮೆ ಕೊಡಬೇಕೆಂದು ತೀರ್ಮಾನಿಸಿದ್ದೇನೆ ಎಂದು ಹೊರಟ್ಟಿ ಅಭಿಪ್ರಾಯ ತಿಳಿಸಿದ್ದಾರೆ.
ಹನಿಟ್ರ್ಯಾಪ್ ತಲೆ ತಗ್ಗಿಸುವ ವಿಚಾರ
ಸದನ ಎನ್ನುವುದು ದೊಡ್ಡ ದೇವಸ್ಥಾನ. ಅಲ್ಲಿ ಹನಿಟ್ರ್ಯಾಪ್‌ನಂತಹ ಘಟನೆಗಳ ಬಗ್ಗೆ ಚರ್ಚೆ ನಡೆಯುವುದೇ ಒಂದು ತಲೆತಗ್ಗಿಸುವ ದೊಡ್ಡ ವಿಚಾರ. ಇದರಿಂದ ಯಾರಿಗೆ ಒಳ್ಳೆಯದಾಗುತ್ತೆ? ಹನಿಟ್ರ್ಯಾಪ್ ಬಲೆ ಬೀಸಿದವನೂ ಒಳ್ಳೆಯವನಲ್ಲ, ಅದರಲ್ಲಿ ಸಿಲುಕಿಕೊಂಡವನೂ ಒಳ್ಳೆಯವನಲ್ಲ ಎಂದು ಇತ್ತೀಚೆಗೆ ಸದನದಲ್ಲೇ ಬಹಿರಂಗಗೊಂಡ ಹನಿಟ್ರ್ಯಾಪ್ ವಿಚಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ವಾರದ ಹಿಂದೆಯಷ್ಟೇ ಬಸವರಾಜ್ ಹೊರಟ್ಟಿ ರಾಜೀನಾಮೆಯ ಬಗ್ಗೆ ಬಹಿರಂಗವಾಗಿ ಹೇಳಿದ್ದರು. ಇಂದಿನ ರಾಜಕಾರಣಿಗಳನ್ನು ಸದನದಲ್ಲಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. ಹೀಗಾಗಿ ತಮ್ಮ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಬಹಿರಂಗ ಹೇಳಿಕೆ ನೀಡಿದ್ದರು. ಬಳಿಕ ಅವರು ಆ ನಿರ್ಧಾರದಿಂದ ಹಿಂದೆ ಸರಿದಿದ್ದರು. ರಾಜೀನಾಮೆ ಸುದ್ದಿ ತಿಳಿದು ಖುದ್ದು ರಾಜ್ಯಪಾಲರು, ಸಚಿವರು, ಸಾಹಿತಿಗಳು ನನ್ನೊಂದಿಗೆ ಮಾತನಾಡಿದ್ರು. ಈ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಬೇಕು ಎಂದು ಸಲಹೆ ನೀಡಿದ್ದರು. ಹಾಗಾಗಿ ರಾಜೀನಾಮೆ ನಿರ್ಧಾರ ಕೈಬಿಟ್ಟಿದ್ದೇನೆ ಎಂದು ಹೊರಟ್ಟಿ ಹೇಳಿದ್ದರು.
ಹೊರಟ್ಟಿ ಅವರು ಸಹಿ ಹಾಕದ ರಾಜೀನಾಮೆ ಪತ್ರ ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗಿತ್ತು. ರಾಜೀನಾಮೆ ಸಂಬಂಧ ಬೆಂಗಳೂರಲ್ಲಿ ಒಂದು ಸಭೆ ಮಾಡುವುದಾಗಿ ತಿಳಿಸಿದ್ದರು. ಅನೇಕರು ನನ್ನ ರಾಜೀನಾಮೆ ವಿರೋಧಿಸಿದ್ದಾರೆ. ನಮ್ಮ ಶಾಸನ ಸಭೆಯ ಸದಸ್ಯರು ಕೂಡ ರಾಜೀನಾಮೆ ಬೇಡ, ನೋಡೋಣ ಎಂದರು. ಸಾರ್ವಜನಿಕ ವಲಯದಲ್ಲಿ ನನಗೆ ಇಷ್ಟೊಂದು ಗೌರವ ನೀಡುತ್ತಿರುವುದರಿಂದ ರಾಜೀನಾಮೆಯಿಂದ ಹಿಂದೆ ಸರಿದಿದ್ದೇನೆ ಎಂದಿದ್ದರು. ವಾರದ ಬಳಿಕ ಮತ್ತೆ ಅವರು ರಾಜೀನಾಮೆಯ ಸುಳಿವು ನೀಡಿದ್ದಾರೆ.












Click it and Unblock the Notifications