ಪುರುಷರಿಗೆ ಮಕ್ಕಳಾಗದಂತೆ ಆಪರೇಷನ್ ಯೋಜನೆಗೆ ಮುಂದಾದ ಕರ್ನಾಟಕ ಸರ್ಕಾರ, ಕನ್ನಡಿಗರು ಹೇಳಿದ್ದೇನು ?
ಕರ್ನಾಟಕ ಕಾಂಗ್ರೆಸ್ ಸರ್ಕಾರವು ಪುರುಷ ಸಂತಾನ ನಿರೋಧ ಶಸ್ತ್ರ ಚಿಕಿತ್ಸೆ ಅಭಿಯಾನಕ್ಕೆ ಮುಂದಾಗಿದ್ದು, ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ಮುಖ್ಯವಾಗಿ ಕೆಲವರು ಈ ಯೋಜನೆಗಳನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಿರುವ ಪರಿಣಾಮದಿಂದಲೇ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಜನಸಂಖ್ಯಾ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿದೆ. ಆದರೆ, ಉತ್ತರ ಭಾರತದಲ್ಲಿ ಈ ಯೋಜನೆಯ ಅನುಷ್ಠಾನ ಸಮರ್ಪಕವಾಗಿ ಆಗಿಲ್ಲ ಅಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚಳವಾಗಿದೆ ಎಂದು ದೂರಿದ್ದಾರೆ. ಇಷ್ಟಕ್ಕೂ ಏನಿದು ಪುರುಷ ಸಂತಾನ ನಿರೋಧ ಶಸ್ತ್ರ ಚಿಕಿತ್ಸೆ ಅಭಿಯಾನ ಇದಕ್ಕೆ ವಿರೋಧ ವ್ಯಕ್ತವಾಗುತ್ತಿರುವುದು ಯಾಕೆ ಎನ್ನುವ ವಿವರ ಇಲ್ಲಿದೆ.
ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಪುರುಷ ಸಂತಾನ ನಿರೋಧ ಶಸ್ತ್ರ ಚಿಕಿತ್ಸೆ ಅಭಿಯಾನಕ್ಕೆ ಮುಂದಾಗಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪುರುಷ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಎನ್ನುವುದು ಎನ್‌ಎಸ್‌ವಿ (ನೋ-ಸ್ಟಾಸ್ಟೆಲ್ ವ್ಯಾಸೆಕ್ಟಮಿ) ಶಾಶ್ವತ ಗರ್ಭನಿರೋಧಕ್ಕಾಗಿ ಒಂದು ಸರಳ. ಹೊಲಿಗೆ ರಹಿತ ಮತ್ತು ಸುರಕ್ಷಿತ ವಿಧಾನವಾಗಿದೆ.

ಸಾಂಪ್ರದಾಯಿಕ ಮಾದರಿಗೆ ಹೋಲಿಸಿದರೆ ಯಾವುದೇ ರೀತಿಯ ಕತ್ತರಿಸುವ (ಇನ್ಸಿಷನ್) ಅಗತ್ಯವಿರುವುದಿಲ್ಲ. ರಕ್ತಸ್ರಾವ, ಹೆಮೆಟೋಮ, ಸೋಂಕು, ನೋವಿನ ಪ್ರಮಾಣವು ಕಡಿಮೆ ಇರುತ್ತದೆ. ಅಲ್ಲದೇ ಅಲ್ಪ ಸಮಯದಲ್ಲೇ ಚೇತರಿಕೆಯ ಪ್ರಯೋಜನವನ್ನು ಹೊಂದುವ ವಿನೂತನ ಚಿಕಿತ್ಸೆ ಇದಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಆರೋಗ್ಯ ಇಲಾಖೆಯು ಜಾಗೃತಿ ಮೂಡಿಸುತ್ತಿದೆ.
ಕುಟುಂಬ ಯೋಜನೆಯನ್ನು ಅಳವಡಿಸಿಕೊಳ್ಳುವ ಪುರುಷರು, ಸಂತೋಷದ ಕುಟುಂಬಕ್ಕೆ ಅಡಿಪಾಯ ಹಾಕುತ್ತಾರೆ. ನಿಮ್ಮ ಆರೋಗ್ಯ, ನಮ್ಮ ಆದ್ಯತೆ ಎಂದು ಜಾಗೃತಿ ಮೂಡಿಸುತ್ತಿದೆ. ಆದರೆ ಇದಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ಬರುತ್ತಿದೆ.
ಕರ್ನಾಟಕದ ಟಿಎಫ್ಆರ್ (ಒಟ್ಟು ಫಲವತ್ತತೆ ದರ / Total Fertility Rate) 2.1 ಕ್ಕಿಂತ ಕಡಿಮೆ ಇದೆ. ಕನ್ನಡಿಗರ ಜನಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳುವುದು ಬಿಟ್ಟು ಕನ್ನಡಿಗರ ಸಂಖ್ಯೆ ಕಡಿಮೆ ಮಾಡಲು ಹೊರಟಿದೆಯೇ ಈ ದೆಹಲಿ ಕೇಂದ್ರಿತ ರಾಷ್ಟ್ರೀಯ ಪಕ್ಷಗಳು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಸ್ವಲ್ಪ ಹೆಚ್ಚು ಹಣ ಖರ್ಚಾದರೂ ಪರವಾಗಿಲ್ಲ ಈ ಯೋಜನೆಯನ್ನು ಮೊದಲು ಉತ್ತರ ಭಾರತದ ಪ್ರದೇಶಗಳಲ್ಲಿ ಜಾರಿ ಮಾಡಿ. ಅಲ್ಲದೇ ಉತ್ತರ ಪ್ರದೇಶ, ಬಿಹಾರಗಳಲ್ಲಿ ಕ್ಯಾಂಪ್ ಹಾಕಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಕರ್ನಾಟಕದಲ್ಲಿ ಮಂದಿ ಎಣಿಕೆ ಕಡಿಮೆ ಮಾಡುವ ಯಾವುದೇ ಯೋಜನೆಯನ್ನು ಪ್ರಚಾರ ಮಾಡುವ ಅಗತ್ಯವಿಲ್ಲ. ಸುರಕ್ಷಿತ ಲೈಂಗಿಕ ಚಟುವಟಿಕೆ ಬಗ್ಗೆ ಮಾತ್ರವೇ ಪ್ರಚಾರ ಮಾಡಿ. ನಮ್ಮಲ್ಲಿ ಫಲವಂತಿಕೆ ಮಟ್ಟ 2.1ಕ್ಕಿಂತ ಕಡಿಮೆ ಬಂದು ಯಾವುದೋ ಸಮಯವಾಗಿದೆ. ನಮ್ಮಲ್ಲಿ ತುರ್ತು ಇರೋದು ಇರುವ ಮಂದಿಯ ಆರೋಗ್ಯ ಮಟ್ಟ ಹೆಚ್ಚಿಸುವ ಕೆಲಸ. ಅದಕ್ಕೆ ದುಡ್ಡು ಕರ್ಚು ಮಾಡಿ ಎಂದು ಕುಶ್ರಿಕ ಎವಿ ಎನ್ನುವವರು ಕಮೆಂಟ್ ಮಾಡಿದ್ದಾರೆ.
ಅತೀ ಚಿಕ್ಕ ಕುಟುಂಬ- ಖಿನ್ನತೆ, ಮನೋರೋಗಗಳಿಗೆ ದಾರಿಯಾಗಬಹುದು,ರಾಜ್ಯದಲ್ಲಿ ತಲೆಮಾರುಗಳಿಂದ ವಾಸಿಸುತ್ತಿರೋ ಎಲ್ಲಾ ಕುಟುಂಬಗಳಿಗೆ ಎರಡು ಮಕ್ಕಳು ಕಡ್ಡಾಯವಾಗಲಿ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.












Click it and Unblock the Notifications