ಇನ್ಮುಂದೆ ಇ-ಕೆವೈಸಿಗೆ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಿಲ್ಲ! ಇಂದು ರಾಜ್ಯಾದ್ಯಂತ ಅನ್ನ ಸೇವೆ ಮೊಬೈಲ್ ಆ್ಯಪ್ ಬಿಡುಗಡೆ
ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಬಹುದೊಡ್ಡ ಸಿಹಿಸುದ್ದಿ ನೀಡಿದೆ. ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕ್ಯೂ ನಿಲ್ಲುವ ಕಿರಿಕಿರಿಗೆ ಮುಕ್ತಿ ನೀಡಲು ಸರ್ಕಾರ ಮುಂದಾಗಿದ್ದು, ಫಲಾನುಭವಿಗಳು ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ಫೋನ್ ಮೂಲಕವೇ ಸ್ವತಃ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಅನ್ನ ಸೇವೆ ಎಂಬ ನೂತನ ಮೊಬೈಲ್ ಆ್ಯಪ್ ಅನ್ನು ಇಂದಿನಿಂದ (ಬುಧವಾರ) ರಾಜ್ಯಾದ್ಯಂತ ಜಾರಿಗೆ ತಂದಿದೆ.
ರಾಜ್ಯಾದ್ಯಂತ ಅನ್ನ ಸೇವೆ ಮೊಬೈಲ್ ಆ್ಯಪ್ ಲಭ್ಯ
ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ಆಗಸ್ಟ್ 1ರಂದು ಈ ನವೀನ ಮೊಬೈಲ್ ತಂತ್ರಜ್ಞಾನಕ್ಕೆ ಅಧಿಕೃತ ಚಾಲನೆ ನೀಡಿದ್ದರು. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್ ಮತ್ತು ಕೊಪ್ಪಳ ಸೇರಿದಂತೆ ಒಟ್ಟು ಎಂಟು ಜಿಲ್ಲೆಗಳಲ್ಲಿ ಈ ಆ್ಯಪ್ ಸೇವೆಯನ್ನ ಆರಂಭಿಸಲಾಗಿತ್ತು.

ಅಲ್ಲಿ ಸಿಕ್ಕ ಯಶಸ್ಸಿನ ಬಳಿಕ, ಇದೀಗ ರಾಜ್ಯದ ಎಲ್ಲಾ ಉಳಿದ ಜಿಲ್ಲೆಗಳ ಪಡಿತರದಾರರಿಗೂ ಈ ಆ್ಯಪ್ ಸೌಲಭ್ಯವನ್ನ ವಿಸ್ತರಿಸಲಾಗಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಆ್ಯಪ್ ಲಭ್ಯವಿದ್ದು, ಆಧಾರ್ ಕಾರ್ಡ್ ವಿವರಗಳನ್ನ ನಮೂದಿಸಿ, ಮುಖ ಗುರುತಿಸುವಿಕೆ (Face Authentication) ಮೂಲಕ ಕೆಲವೇ ನಿಮಿಷಗಳಲ್ಲಿ ಕೆವೈಸಿ ಪ್ರಕ್ರಿಯೆಯನ್ನ ಪೂರ್ಣಗೊಳಿಸಬಹುದಾಗಿದೆ.
ಆಗಸ್ಟ್ 20ರ ಒಳಗೆ ಇ-ಕೆವೈಸಿ ಪೂರ್ಣಗೊಳಿಸಲು ಗಡುವು
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆ ಸೇರಿದಂತೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಉಚಿತ ಅಥವಾ ರಿಯಾಯಿತಿ ದರದ ಪಡಿತರ ಪಡೆಯುತ್ತಿರುವ ಪ್ರತಿಯೊಬ್ಬ ಸದಸ್ಯರಿಗೂ ಈ ಕೆವೈಸಿ ಕಡ್ಡಾಯವಾಗಿದೆ.
ಒಂದು ವರ್ಷದ ಹಿಂದೆ ಈಗಾಗಲೇ ಇ-ಕೆವೈಸಿ ಮಾಡಿಸಿದ್ದ ಫಲಾನುಭವಿಗಳೂ ಸಹ ಸರ್ಕಾರದ ಹೊಸ ನಿಯಮಾವಳಿಗಳ ಅನ್ವಯ ಮತ್ತೊಮ್ಮೆ ಕಡ್ಡಾಯವಾಗಿ ಈ ನವೀಕರಣ ಮಾಡಿಕೊಳ್ಳಬೇಕಿದೆ. ರಾಜ್ಯದಲ್ಲಿ ಒಟ್ಟು 2,67,64,276 ಮಂದಿ ನೋಂದಾಯಿತ ಫಲಾನುಭವಿಗಳಿದ್ದು, ಆಗಸ್ಟ್ 12ರ ಅಂಕಿ-ಅಂಶಗಳ ಪ್ರಕಾರ 2,06,76,278 ಮಂದಿ ಈಗಾಗಲೇ ಪ್ರಕ್ರಿಯೆ ಮುಗಿಸಿದ್ದಾರೆ.
ಉಳಿದ ಸುಮಾರು 60 ಲಕ್ಷಕ್ಕೂ ಹೆಚ್ಚು ಜನರಿಗೆ ಯಾವುದೇ ತೊಂದರೆಯಾಗದಂತೆ ಕೆವೈಸಿ ಮಾಡಲು ಆಗಸ್ಟ್ 20ರವರೆಗೆ ಕೊನೆಯ ದಿನಾಂಕವನ್ನ ನಿಗದಿಪಡಿಸಲಾಗಿದೆ.
ಅನರ್ಹ ಪಡಿತರ ಚೀಟಿಗಳಿಗೆ ಕಡಿವಾಣ
ನಕಲಿ ಅಥವಾ ಮರಣ ಹೊಂದಿದ ವ್ಯಕ್ತಿಗಳ ಹೆಸರಿನಲ್ಲಿ ಪಡಿತರ ದುರುಪಯೋಗವಾಗುವುದನ್ನ ತಡೆಗಟ್ಟಲು ಇ-ಕೆವೈಸಿ ಅತ್ಯಂತ ಸಹಕಾರಿಯಾಗಿದೆ. "ಪಡಿತರದಾರರು ಯಾವುದೇ ಮಧ್ಯವರ್ತಿಗಳ ಮೊರೆ ಹೋಗದೆ ಅಥವಾ ಸರ್ವರ್ ಸಮಸ್ಯೆಯಿಂದ ಕ್ಯೂ ನಿಲ್ಲದೆ, ತಮ್ಮ ಮೊಬೈಲ್‌ನಲ್ಲಿಯೇ ಸರಳವಾಗಿ 'ಅನ್ನ ಸೇವೆ' ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
ನಿಗದಿತ ದಿನಾಂಕವಾದ ಆಗಸ್ಟ್ 20ರೊಳಗೆ ಪ್ರಕ್ರಿಯೆ ಮುಗಿಸಿ ಯೋಜನೆಗಳ ಪ್ರಯೋಜನವನ್ನು ನಿರಂತರವಾಗಿ ಪಡೆದುಕೊಳ್ಳಿ" ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.


Click it and Unblock the Notifications
